ADVERTISEMENT

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಾಲಮ್ಮ ನಾಗಪ್ಪ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 9:35 IST
Last Updated 6 ಫೆಬ್ರುವರಿ 2012, 9:35 IST

ಸಿಂಧನೂರು: ಕಳೆದ 10 ತಿಂಗಳಿನಿಂದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಮ್ಮ ನಾಗಪ್ಪ ಚೆಲುವಾದಿ ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಫೆ.14 ಬೆಳಗ್ಗೆ 10ಗಂಟೆಗೆ ತಾಲ್ಲೂಕು ಪಂಚಾಯಿತಿ ಖಾಲಿ ಇರುವ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ಪ್ರಕಟಣೆ ಹೊರಡಿಸಿದ್ದಾರೆ.

 ಹೊಸದಾಗಿ ಅಧ್ಯಕ್ಷರಾಗಲು ಗುಡದೂರು ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಆಯ್ಕೆಯಾದ ರಂಗಮ್ಮ ಶಿವರೆಡ್ಡೆಪ್ಪ ಎಲೆಕೂಡ್ಲಗಿ ಮತ್ತು ಗೊರೇಬಾಳ ಕ್ಷೇತ್ರದಿಂದ ಆಯ್ಕೆಯಾಗಿರುವ ರತ್ನಮ್ಮ ಮಲ್ಲಿಕಾರ್ಜುನ ಅವರ ನಡುವೆ ಪೈಪೋಟಿ ಆರಂಭಗೊಂಡಿದೆ.

ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಪ್ರಥಮ ಅವಧಿಗೆ ಮೂರ‌್ನಾಲ್ಕು ಸದಸ್ಯರು ಪೈಪೋಟಿಸಿ ನಡೆಸಿದ್ದ ಹಿನ್ನೆಲೆಯಲ್ಲಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಮನೋಹರ ಮಸ್ಕಿ, ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಆಗ ಬಿಜೆಪಿ ತಾಲ್ಲೂಕು ಅಧ್ಯಕ್ಷರಾಗಿದ್ದ ಕೆ.ಕರಿಯಪ್ಪ ಮತ್ತಿತರರು ಸಮಾಲೋಚನೆ ನಡೆಸಿ 20 ತಿಂಗಳ ಅವಧಿಯಲ್ಲಿ ಬಾಲಮ್ಮನವರಿಗೆ ಮೊದಲ 10ತಿಂಗಳ ಅವಧಿಗೆ ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿದ್ದರು. ಆಗ ಮುಖಂಡರಿಗೆ ಕೊಟ್ಟ ಮಾತಿನಂತೆ 10ತಿಂಗಳ ಅವಧಿ ಪೂರ್ಣಗೊಂಡ ಕಾರಣದಿಂದಾಗಿ ಬಾಲಮ್ಮ ರಾಜೀನಾಮೆ ನೀಡಿದ್ದಾರೆ.

ತಾಲ್ಲೂಕು ಪಂಚಾಯಿತಿಯ ಒಟ್ಟು 30 ಸದಸ್ಯರಲ್ಲಿ ಬಿಜೆಪಿಯ 12, ಕಾಂಗ್ರೆಸ್‌ನ 16 ಮತ್ತು ಜೆಡಿಎಸ್‌ನ ಇಬ್ಬರು ಸದಸ್ಯರ ಬಲಾಬಲದಲ್ಲಿ ಪರಿಶಿಷ್ಟ ಜಾತಿ ಮಹಿಳಾ ಕ್ಷೇತ್ರದಿಂದ ಮೂವರು ಬಿಜೆಪಿಯಿಂದಲೇ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷವೇ ಅಧಿಕ ಸ್ಥಾನಗಳನ್ನು ಗೆದ್ದಿದ್ದರೂ ಅಧ್ಯಕ್ಷ ಸ್ಥಾನದಿಂದ ವಂಚಿತಗೊಂಡಿತು. ಮೂವರಲ್ಲಿ ಬಳಗಾನೂರು ಕ್ಷೇತ್ರದಿಂದ ಆಯ್ಕೆಯಾದ ಬಾಲಮ್ಮ 10 ತಿಂಗಳ ಅವಧಿ ಮುಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.