ADVERTISEMENT

ತೆರಿಗೆ ಕಟ್ಟದಿರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 7:20 IST
Last Updated 2 ಫೆಬ್ರುವರಿ 2011, 7:20 IST

ಲಿಂಗಸುಗೂರ: ನೀರಾವರಿ ಪ್ರದೇಶದಲ್ಲಿ ಅಸಮರ್ಪಕ ನೀರು ಹರಿಸುವ ಹಾಗೂ ಮೇಲಿಂದ ಮೇಲೆ ನಾಲೆಗಳು ಕೊಚ್ಚಿ ಬೆಳೆ ನಷ್ಟವಾಗುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ವೈಜ್ಞಾನಿಕ ಬೆಲೆ ನಿಗದಿ ಮಾಡದೆ ಹೋಗಿದ್ದರಿಂದ ರೈತರ ಗೋಳು ಹೇಳತೀರದ್ದಾಗಿದೆ. ಕಾರಣ ಸರ್ಕಾರ ಕೆಲ ತಾರತಮ್ಯ ನೀತಿ ಹೋಗಲಾಡಿಸುವವರೆಗೆ ನೀರಾವರಿ ತೆರಿಗೆ ಕಟ್ಟದಿರಲು ರೈತ ಸಮೂಹ ನಿರ್ಧರಿಸಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕಗಳು ಎಚ್ಚರಿಕೆ ನೀಡಿವೆ.

ಸೋಮವಾರ ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು ರೈತರು, ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು.ರೈತರ ತೆರಿಗೆ ಹಣ ಲೂಟಿ ಮಾಡಿರುವ ರಾಜಕಾರಣಿಗಳು ಕೂಡಲೆ ಮರುಪಾವತಿಸಿ ಶಿಕ್ಷೆಗೆ ಒಳಗಾಗಬೇಕು.ವಿದ್ಯುತ್ ಪೂರೈಕೆಯಲ್ಲಿ ನಡೆಯುತ್ತಿರುವ ಗ್ರಾಮ ಮತ್ತು ಪಟ್ಟಣ ತಾರತಮ್ಯ ನೀತಿ ಸರಿಪಡಿಸಬೇಕು. ವಿದ್ಯುತ್ ಸಂಪರ್ಕದಿಂದ ನಷ್ಟಕ್ಕೊಳಗಾಗುವ ರೈತರಿಗೆ ಆರ್ಥಿಕ ನೆರವು ನೀಡಬೇಕು.

ಕಾಲುವೆಗಳು ಕೊಚ್ಚಿ ನಷ್ಟಕ್ಕೊಳಗಾಗುವ ರೈತರ ಬೆಳೆಗೆ ಸಂಭವಿಸುವ ನಷ್ಟ ಪರಿಹಾರ ತುಂಬಿಕೊಡಬೇಕು. ಐಟಿಬಿಟಿಗಳಿಗೆ ನೀಡುವ ಸವಲತ್ತುಗಳನ್ನು ರೈತ ಸಮುದಾಯಕ್ಕೆ ವಿಸ್ತರಿಸಬೇಕು. ನಾರಾಯಣಪುರ ಬಲದಂಡೆ ನಾಲೆ ಮತ್ತು ರಾಂಪೂರ ಏತ ನೀರಾವರಿ ಯೋಜನೆ ನಾಲೆಗಳಲ್ಲಿ ನಿಗದಿತವಾಗಿ ನೀರು ಹರಿಸದೆ ರೈತರಿಗೆ ಕಿರುಕುಳ ನೀಡುವುದನ್ನು ತಡೆಯುವವರೆಗೆ ತೆರಿಗೆ ಪಾವತಿ ಮಾಡದಿರಲು ನಿರ್ಧರಿಸಿರುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆ ನೇತೃತ್ವವನ್ನು ಶರಣಪ್ಪ ಮಳ್ಳಿ, ಹುಸೇನಬಾಷ, ಶಿವಪುತ್ರಗೌಡ, ಗೋವಿಂದಪ್ಪ, ರಾಮಲಿಂಗಪ್ಪ, ಗದ್ದೆಪ್ಪ, ಮಹಾದೇವಪ್ಪ, ಖಾಜೆಸಾಬ, ಮುದಿಗೌಡ, ಬಡೆಸಾಬ, ಅಮರಪ್ಪ, ಗುರಪ್ಪ ಕತ್ತಿ, ಶರಣಪ್ಪ ಕಟಗಿ, ಡಿ.ಎಸ್ ಗುರಿಕಾರ, ಗೋವಿಂದಪ್ಪ, ನಾಗರಾಜ ಕಟಗಿ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.