ADVERTISEMENT

ದಾಳಿಂಬೆಗೆ ಪತಂಗಗಳ ಬಾಧೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2017, 8:43 IST
Last Updated 3 ನವೆಂಬರ್ 2017, 8:43 IST
ಲಿಂಗಸುಗೂರು ತಾಲ್ಲೂಕಿನ ಗ್ರಾಮವೊಂದರ ದಾಳಿಂಬೆ ಬೆಳೆಗೆ ಪತಂಗಗಳ ಬಾಧೆ ತಗುಲಿದ್ದನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಪರಿಶೀಲಿಸಿದರು
ಲಿಂಗಸುಗೂರು ತಾಲ್ಲೂಕಿನ ಗ್ರಾಮವೊಂದರ ದಾಳಿಂಬೆ ಬೆಳೆಗೆ ಪತಂಗಗಳ ಬಾಧೆ ತಗುಲಿದ್ದನ್ನು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಪರಿಶೀಲಿಸಿದರು   

ಲಿಂಗಸುಗೂರು: ‘ತಾಲೂಕಿನ ಹೆಗ್ಗಾಪುರ ತಾಂಡಾ, ಗುಡಿಹಾಳ, ಈಚನಾಳ ಗ್ರಾಮದ ದಾಳಿಂಬೆ ತೋಟಗಳಿಗೆ ವಿಜ್ಞಾನಿಗಳು ಭೇಟಿ ನೀಡಿದಾಗ ಹಣ್ಣಿನ ರಸ ಹೀರುವ ಪತಂಗಗಳ ಬಾಧೆ ಕಂಡು ಬಂದಿದ್ದು ಎಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಖ್ಯಸ್ಥೆ ಡಾ. ಎಸ್‌. ವಾಣಿಶ್ರೀ ಸೂಚಿಸಿದ್ದಾರೆ.

‘ಪತಂಗ ಬಲಿಷ್ಠ ಹಾಗೂ ದೊಡ್ಡ ಗಾತ್ರ ಹೊಂದಿದೆ. ಮುಂದಿನ ರೆಕ್ಕೆಗಳು ಕೇಸರಿ ಬಣ್ಣದಾಗಿರುತ್ತವೆ. ಹಿಂದಿನ ರೆಕ್ಕೆಗಳ ಮೇಲೆ ಅರ್ಧ ಚಂದ್ರಾಕಾರದ ಅಥವಾ ಪೂರ್ಣಾಕಾರದ ಕಪ್ಪು ಚುಕ್ಕೆ ಕಾಣಬಹುದು. ಹೆಣ್ಣು ಪತಂಗವು ಅಮೃತ ಬಳ್ಳಿ ಮತ್ತು ದಾಗಡಿ ಬಳ್ಳಿಗಳ ಮೇಲೆ ತತ್ತಿಯನ್ನುಡುತ್ತವೆ’ ಎಂದು ತಿಳಿಸಿದ್ದಾರೆ.

‘ತತ್ತಿಯಿಂದ ಹೊರಬಂದ ಮರಿ ಹುಳುಗಳು ಕಳೆಗಳ ಎಲೆಗಳನ್ನು ತಿಂದು ಬದುಕುತ್ತವೆ. ಪತಂಗವು ಚೂಪಾದ ಸೊಂಡಲಿನಿಂದ ಹಣ್ಣಿನ ರಸ ಹೀರುವುದರಿಂದ ಹಣ್ಣು ಕೊಳತು ಕೆಳೆಗೆ ಬೀಳುತ್ತವೆ. ತೋಟದಲ್ಲಿ ಅಮೃತಬಳ್ಳಿ, ದಾಗಡಿ ಬಳ್ಳಿಗಳು ಇದ್ದಲ್ಲಿ ಕಿತ್ತು ನಾಶಪಡಿಸಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

‘ಮರಿಹುಳುಗಳು ಕಳೆಗಳ ಮೇಲೆ ಬೆಳೆಯುವುದರಿಂದ ತೋಟದಲ್ಲಿ ಹಾಗೂ ಸುತ್ತಮುತ್ತಲೂ ಅಮೃತ ಬಳ್ಳಿ ಮತ್ತು ದಾಗಡಿ ಬಳ್ಳಿಗಳು ಬೆಳೆಯದಂತೆ ನೋಡಿಕೊಳ್ಳಬೇಕು. ರಾತ್ರಿ ಹೊಗೆಯನ್ನು ಹಾಕುವುದರ ಮೂಲಕ ಪತಂಗಗಳನ್ನು ದೂರವಿಡಬಹುದು. ದೀಪದ ಬಲೆ ಗಳಿಂದ ರಾತ್ರಿ ಪತಂಗಗಳನ್ನು ಆಕರ್ಷಿಸಿ ನಾಶಪಡಿಸಬೇಕು’ ಎಂದು ತಿಳಿಸಿದ್ದಾರೆ.

‘ಹಣ್ಣುಗಳನ್ನು ಬಟ್ಟೆ, ಪ್ಲಾಸ್ಟಿಕ್ ಅಥವಾ ಕಾಗದ ಚೀಲಗಳಿಂದ ಮುಚ್ಚುವುದರಿಂದ ಕೀಟಗಳ ಬಾಧೆಯಿಂದ ಸಂರಕ್ಷಿಸಬಹುದು. ಸಾಧ್ಯವಾದಲ್ಲಿ ಇತ್ತಿತ್ತಲಾಗಿ ಕೀಟದ ಹಾವಳಿ ಕಂಡು ಬಂದ ಕಡೆ ಇಡೀ ತೋಟವನ್ನು ನೈಲನ್ ಬಲೆಯ ಹೊದಿಕೆಯಿಂದ ಮುಚ್ಚುವುದು ಉತ್ತಮ. ಕೀಟ ಬಾಧೆಯಿಂದ ಗಿಡದ ಕೆಳೆಗೆ ಬಿದ್ದ ಹಣ್ಣುಗಳನ್ನು ಗುಂಪು ಮಾಡಿ ಸುಡಬೇಕು. ಕೀಟ ಬಾಧೆ ಕಂಡು ಬಂದಲ್ಲಿ ಸ್ಪರ್ಶ ಕೀಟನಾಶಕಗಳನ್ನು ಸಂಜೆ ಸಿಂಪಡಿಸಬೇಕು’ ಎಂದು ತಿಳಿಸಿದ್ದಾರೆ.

‘7. 2 ಮಿ. ಲೀ ಮೆಲಾಥಿಯಾನ್ ಮತ್ತು 200 ಗ್ರಾಂ ಕಬ್ಬಿನ ಮಳ್ಳಿಯನ್ನು 2 ಲೀಟರ್ ನೀರಿನಲ್ಲಿ ಬೆರೆಸಿ, ಪಾತ್ರೆಗಳಲ್ಲಿ ಹಾಕಿ ಪ್ರತಿ ಎಕರೆಯಲ್ಲಿ 6- ರಿಂದ 7 ಸ್ಥಳಗಳಲ್ಲಿ ಹಣ್ಣುಗಳೊಂದಿಗೆ ಇಟ್ಟು ಆಕರ್ಷಿಸಿ ನಾಶಪಡಿಸಬೇಕು’ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ; 08537-257035.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.