ADVERTISEMENT

ನಂದವಾಡಗಿ ಏತ ನೀರಾವರಿ : ಸರ್ಕಾರದ ವಿರುದ್ಧ ಹೋರಾಟಕ್ಕೂ ಸಿದ್ಧ: ವಜ್ಜಲ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 6:10 IST
Last Updated 6 ಜನವರಿ 2012, 6:10 IST

ಲಿಂಗಸುಗೂರ: ಪ್ರಸಕ್ತ 2012-13ನೇ ಸಾಲಿನ ಬಜೆಟ್‌ನಲ್ಲಿ ಈ ಭಾಗದ ಮಹತ್ವದ ನೀರಾವರಿ ಯೋಜನೆಗಳಲ್ಲಿ ಒಂದಾದ ನಂದವಾಡಗಿ ಏತ ನೀರಾವರಿ ಯೋಜನೆಗೆ ಸರ್ಕಾರ ಆದ್ಯತೆ ನೀಡಬೇಕು. ಕಳೆದ ಕೆಲ ವರ್ಷಗಳಿಂದ ಹೋರಾಟ ಸಮಿತಿ, ಪ್ರಗತಿಪರ ಸಂಘಟನೆಗಳು ಹೋರಾಟ ಮಾಡುತ್ತ ಬಂದಿವೆ. ನಂದವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದೆ ತಮ್ಮ ಮೂಲ ಉದ್ದೇಶ. ಸರ್ಕಾರ ಸ್ಪಂದಿಸದೆ ಹೋದಲ್ಲಿ ಬೀದಿಗಿಳಿದು ಹೋರಟಕ್ಕೂ ಸಿದ್ಧ ಎಂದು ಶಾಸಕ ಮಾನಪ್ಪ ವಜ್ಜಲ ಗುಡುಗಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೃಷ್ಣಾ ಯೋಜನೆಯ ಬಿ ಸ್ಕಿಂನಡಿ ನಂದವಾಡಗಿ ಏತ ನೀರಾವರಿ ಯೋಜನೆಗೆ ಸರ್ಕಾರ ವಿಶೇಷ ಅನುದಾನ ನೀಡುವ ಮೂಲಕ ಚಾಲನೆ ನೀಡಬೇಕು. ಈಗಾಗಲೆ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿಯೆ ಹಣಕಾಸಿನ ನೆರವು ನೀಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಸಂಘ ಸಂಸ್ಥೆಗಳ, ಹೋರಾಟ ಸಮಿತಿ ಸಹಯೋಗದಲ್ಲಿ ಶೀಘ್ರದಲ್ಲಿಯೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಸ್ಪಷ್ಟಪಡಿಸಿದರು.

ಕೃಷ್ಣ ಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ವ್ಯರ್ಥ ಪೋಲಾಗುತ್ತಿರುವ ನೀರನ್ನು ಚೆಕ್‌ಡ್ಯಾಮ್ ನಿರ್ಮಿಸುವ ಮೂಲಕ ಸಂಗ್ರಹಣೆ ಮಾಡಿ ಅಕ್ಕ ಪಕ್ಕದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರೂ. 5ಕೋಟಿ ವೆಚ್ಚದಲ್ಲಿ 10 ಕಾಮಗಾರಿಗಳಿಗೆ ಅನುಮತಿ ಪಡೆಯಲಾಗಿದೆ.

ಸಂಪತ್‌ರಾಯನ ದೊಡ್ಡಿ ಸುತ್ತಮುತ್ತಲ ಪ್ರದೇಶದ ರೈತರಿಗೆ ಹೆಚ್ಚು ಅನುಕೂಲವಾಗಲಿದ್ದು ಶೀಘ್ರದಲ್ಲಿಯೇ ಕೆಲಸ ಆರಂಭಗೊಳಿಸಲಾಗುವುದು ಎಂದರು.

ನಾರಾಯಣಪುರ ಲಿಂಗಸುಗೂರ ರಸ್ತೆ ಅಭಿವೃದ್ಧಿಗೆ ಈಗಾಗಲೆ ಟೆಂಡರ್ ಮಾಡಲಾಗಿದೆ. ಚಿತ್ತಾಪೂರ ದಿಂದ ಅಡವಿಭಾವಿ ರಸ್ತೆ ಅಭಿವೃದ್ಧಿ ಸರ್ವೆ ಕಾರ್ಯ ನಡೆದಿದೆ. ತಾಲ್ಲೂಕಿನ ಪ್ರತಿಯೊಂದು ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಂಬಂಧಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಕೋಠ, ಗುರುಗುಂಟ ಮತ್ತು ಹಟ್ಟಿ ಅಭಿವೃದ್ಧಿ ಮತ್ತು ಕುಡಿಯುವ ನೀರಿಗೆ ರೂ. 16ಕೋಟಿ ಅನುದಾನ ಬಂದಿದೆ. ಹಟ್ಟಿ ಅಭಿವೃದ್ಧಿಗೆ ಹಟ್ಟಿ ಚಿನ್ನದ ಗಣಿಯಿಂದ ರೂ. 10ಕೋಟಿ ನೀಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ವಿವರಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಎಸ್.ಆರ್. ರಸೂಲ, ಮುಖಂಡ ವೀರನಗೌಡ ಲೆಕ್ಕಿಹಾಳ ಉಪಸ್ಥಿತರಿದ್ದರು.

ಸಂಚಾರ ಸುರಕ್ಷತಾ ಜಾಗೃತಿ ಸಪ್ತಾಹ

ರಾಯಚೂರು: ನಗರದ ಬಸವೇಶ್ವರ ವೃತ್ತದಲ್ಲಿ ಈಚೆಗೆ ವಾಸವಿ ಕ್ಲಬ್ ಇಂಟರ್‌ನ್ಯಾಷನಲ್ ಸಂಸ್ಥೆಯಿಂದ ಸಂಚಾರ ಸುರಕ್ಷತಾ ಜಾಗೃತಿ ಸಪ್ತಾಹ ಕಾರ್ಯಕ್ರಮ ನಡೆಸಲಾಯಿತು.

ಪೊಲೀಸ್ ಅಧಿಕಾರಿ ಹಾಗೂ ಸಂಚಾರಿ ಪೊಲೀಸ್ ಅಧಿಕಾರಿಗಳು, ವಾಸವಿ ಕ್ಲಬ್ ಇಂಟರ್‌ನ್ಯಾಷನಲ್ ಸಂಸ್ಥೆಯ ಅಧ್ಯಕ್ಷ ವೆಲ್ಕೂರು ಮಹೇಂದ್ರ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಎಂ ರಾಘವೇಂದ್ರ, ಸದಸ್ಯರಾದ ಪಿ. ಬಸವರಾಜ, ವೆಲ್ಕೂರು ಶ್ರಿನಿವಾಸ, ಭೂಪಾಲ ಸಂದೀಪ, ಜಿ.ವೆಂಕಟೇಶ, ಗುರು, ಬದ್ರಿ, ವಿಜಯ ಕುಮಾರ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.