ADVERTISEMENT

ನಾಟಿ ವೈದ್ಯನ ಚಿಕಿತ್ಸೆ; ಕೈ ಕಳೆದುಕೊಂಡ ಆದರ್ಶ

ತಪ್ಪು ಚಿಕಿತ್ಸೆಯಿಂದ ಅಂಗವಿಕಲನಾದ ಲಿಂಗಸೂಗೂರಿನ ಎಂಟು ವರ್ಷದ ಬಾಲಕ

​ಪ್ರಜಾವಾಣಿ ವಾರ್ತೆ
Published 30 ಮೇ 2018, 11:03 IST
Last Updated 30 ಮೇ 2018, 11:03 IST
ನಾಟಿ ವೈದ್ಯನ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಬಾಲಕ
ನಾಟಿ ವೈದ್ಯನ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಬಾಲಕ   

ಜಾಲಹಳ್ಳಿ: ಸಮೀಪದ ಚಿಂಚೋಡಿಯ ಪರಮಣ್ಣ ಬನಗಂಡಿ ಎಂಬ ನಾಟಿ ವೈದ್ಯನ ತಪ್ಪು ಚಿಕಿತ್ಸೆಯಿಂದ ಲಿಂಗಸೂಗುರು ಪಟ್ಟಣದ ಎಂಟು ವರ್ಷದ ಬಾಲಕನೊಬ್ಬ ಕೈ ಕಳೆದುಕೊಂಡಿದ್ದಾನೆ.

ಆದರ್ಶ ತಂದೆ ಗುರುಶಾಂತಪ್ಪ ಹಡಪದ ಎಡಗೈ ಕಳೆದುಕೊಂಡ ಬಾಲಕ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಲಿಂಗ ಸೂಗೂರಿನ ತಮ್ಮ ಮನೆಯಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕ ಆದರ್ಶ ಎಡಗೈ ಮುರಿದುಕೊಂಡಿದ್ದ. ಈತನನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆರ್ಥೊಪೆಡಿಕ್ ವೈದ್ಯ ಡಾ.ಹರ್ಷವರ್ಧನ ಅವರ ಬಳಿ ಚಿಕಿತ್ಸೆ ನೀಡಿ ಕೈಗೆ ಪ್ಲಾಸ್ಟರಿಂಗ್‌ ಮಾಡಿ ಕಳುಹಿಸಿದ್ದರು.

ADVERTISEMENT

ಚಿಂಚೋಡಿ ಗ್ರಾಮದಲ್ಲಿ ಕೈ–ಕಾಲು ಮುರಿತಕ್ಕೆ ನಾಟಿ ಔಷಧ ನೀಡುತ್ತಾರೆ. ಇಲ್ಲಿ ಚಿಕಿತ್ಸೆ ಪಡೆದರೆ ಶೀಘ್ರ ಗುಣಮುಖರಾಗುತ್ತಾರೆ ಎಂಬ ಮಾಹಿತಿ ಪಡೆದ ಪೋಷಕರು ಏಪ್ರಿಲ್ 7ರಂದು ನಾಟಿ ವೈದ್ಯ ಪರಮಣ್ಣ ಬನಗಂಡಿ ಅವರ ಬಳಿ ಕರೆದೊಯ್ದಿದ್ದಾರೆ. ಈ ವೇಳೆ ವೈದ್ಯರು ಹಾಕಿದ್ದ ಪ್ಲಾಸ್ಟರ್ ಬಿಚ್ಚಿ ಬೇರೆ ಪಟ್ಟಿಯನ್ನು ಕಟ್ಟಿ ನಾಟಿ ಔಷಧ ನೀಡಿದ್ದು, ಮರುದಿನವೇ ಇದರ ಅಡ್ಡ ಪರಿಣಾಮವುಂಟಾಗಿದೆ. ನಾಟಿ ವೈದ್ಯನ ಅವೈಜ್ಞಾನಿಕ ಚಿಕಿತ್ಸೆಯಿಂದ ತನ್ನ ಮಗನ ಕೈ ಕತ್ತರಿಸಬೇಕಾಯಿತೆಂದು ಬಾಲಕನ ತಂದೆ ಗುರುಶಾಂತಪ್ಪ ಮೇ 16ರಂದು ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಮಗುವಿಗೆ ಕೈ ಬಾವು, ನೋವು ಬಂದರೆ 21 ದಿನದವರೆಗೆ ಬಿಚ್ಚಬೇಡಿ ಎಂದು ನಾಟಿ ವೈದ್ಯ ಪೋಷಕರಿಗೆ ತಿಳಿಸಿದ್ದರಿಂದ ಕೈಗೆ ಕಟ್ಟಿದ್ದ ಪಟ್ಟಿ ಬಿಚ್ಚಿರಲಿಲ್ಲ. ಆದರೆ ಮಗುವಿಗೆ ತೀವ್ರ ನೋವು ಕಾಣಿಸಿಕೊಂಡ ನಂತರ ಏಪ್ರಿಲ್ 10ರಂದು ಡಾ.ಹರ್ಷವರ್ಧನ ಅವರ ಬಳಿ ಹೋದಾಗ ನಾಟಿ ವೈದ್ಯನು ಹಾಕಿದ್ದ ಪಟ್ಟಿಯಿಂದ ಕೈನರಗಳು ಸತ್ತು ಹೋಗಿದ್ದು, ಅಡ್ಡ ಪರಿಣಾಮ ಉಂಟಾಗಿದೆ. ಹೆಚ್ಚಿನ ಚಿಕಿತ್ಸೆಗೆ ಉತ್ತಮ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ.

ಅನಿವಾರ್ಯವಾಗಿ ಬಾಲಕನನ್ನು ಮಹಾರಾಷ್ಟ್ರದ ಮೀರಜ್ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ ಪರಿಕ್ಷಿಸಿದಾಗ ಶಸ್ತ್ರ ಚಿಕಿತ್ಸೆ ನೀಡಿದರೂ ಪರಿಣಾಮಗಳು ಕಡಿಮೆಯಾಗಿಲ್ಲ, ಅನಿವಾರ್ಯವಾಗಿ ಕೈ ಕತ್ತರಿಸಬೇಕಾಗುತ್ತದೆ ಇಲ್ಲವಾದಲ್ಲಿ ಇದರ ಪರಿಣಾಮಗಳು ದೇಹದ ಇನ್ನೂಳಿದ ಭಾಗಕ್ಕೆ ಆಗುತ್ತದೆ ಎಂದು ವೈದ್ಯರು ಪೋಷಕರಿಗೆ ವೈದ್ಯರು ತಿಳಿಸಿದ್ದಾರೆ.  ಅನಿವಾರ್ಯವಾಗಿ ಪೋಷಕರ ಒಪ್ಪಿಗೆಯಿಂದ ಏಪ್ರಿಲ್ 27ರಂದು ಬಾಲಕನಿಗೆ ಶಸ್ತ್ರ ಚಿಕಿತ್ಸೆ ಮಾಡಿ ಎಡಗೈ ಮೋಣ ಕೈ ಕೆಳಗೆ ಕತ್ತರಿಸಲಾಗಿದೆ.

ಚಿಂಚೋಡಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಈ ನಾಟಿ ಔಷದ ಕೊಡುವ ಪದ್ಧತಿಯಿದ್ದು, ಅನೇಕ ಮುಗ್ದ ಜನರು ಕೈ, ಕಾಲುಗಳು ಮುರಿದಾಗ ಆಸ್ಪತ್ರೆಗೆ ಹೋಗುವ ಬದಲು ಇಂತಹ ನಾಟಿ ವೈದ್ಯರ ಬಳಿ ಹೋಗುತ್ತಾರೆ. ಇಲ್ಲಿ ಚಿಕಿತ್ಸೆ ಪಡೆದ ಹಲವು ಜನ ಕೈ, ಕಾಲು ಸರಿ ಹೋಗದೇ ಅಂಕು-ಡೊಂಕಾದ ಉದಾಹರಣೆಗಳಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

**
ನಾಟಿ ವೈದ್ಯನ ನಿರ್ಲಕ್ಷ್ಯತನದಿಂದ ಮಗನ ಭವಿಷ್ಯ ಹಾಳಾಗಿದೆ. ನಾಟಿ ವೈದ್ಯನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು
ಗುರುಶಾಂತಪ್ಪ ಹಡಪದ, ಕೈ ಕಳೆದುಕೊಂಡ ಬಾಲಕನ ತಂದೆ

ಅಲಿಬಾಬಾ ಪಟೇಲ್‌ ಜಾಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.