ADVERTISEMENT

ನಾಡಗೌಡರ ಭೂಪ್ರಕರಣ ಸಮಗ್ರ ತನಿಖೆಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 9:35 IST
Last Updated 6 ಫೆಬ್ರುವರಿ 2012, 9:35 IST

ಸಿಂಧನೂರು: ಕರ್ನಾಟಕ ರೈತ ಸಂಘವು ಸರ್ಕಾರಿ ಹಾಗೂ ಹೆಚ್ಚುವರಿ ಭೂಮಿ ವಿತರಣೆ, ಹಾಗೂ ಗುಡಿಸಲು ನಿವಾಸಿಗಳಿಗೆ ಹಕ್ಕು ಪತ್ರಗಳ ಹಂಚಿಕೆಗೆ ಕಳೆದ 32ದಿನಗಳಿಂದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಲಿಂಗಸುಗೂರು ಸಹಾಯಕ ಆಯುಕ್ತ ಪಿ.ಯೋಗೇಶ ಶನಿವಾರ ಆಗಮಿಸಿ ಮುಖಂಡರೊಂದಿಗೆ ಚರ್ಚಿಸಿದರು. ಶಾಸಕ ವೆಂಕಟರಾವ್ ನಾಡಗೌಡರ ಭೂ ಪ್ರಕರಣವನ್ನು ತನಿಖೆ ಮಾಡುವುದಾಗಿ ಭರವಸೆ ನೀಡಿದರು.

ಪಗಡದಿನ್ನಿ ಗ್ರಾಮದಲ್ಲಿ ಅನಧಿಕೃತವಾಗಿ 20.24 ಎಕರೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡಿರುವ ನಾಡಗೌಡರಿಂದ ತೆರವುಗೊಳಿಸಬೇಕು, ನಗರದ 768/1,2,3 ಸರ್ವೆ ನಂಬರ್‌ಗಳ ಸರ್ಕಾರಿ ಭೂಮಿ ಹಾಗೂ ಸಾರ್ವಜನಿಕ ಉದ್ಯಾನವನ, ಸರ್ಕಾರಿ ಹಣ್ಣಿನ ತೋಟದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ಟಿಯುಸಿಐ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ, ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಎನ್.ಬಡಿಗೇರ ಅವರು ಸಹಾಯಕ ಆಯುಕ್ತರನ್ನು ಒತ್ತಾಯಿಸಿದರು.


ನಿಡಿಗೋಳ, ತಿಡಿಗೋಳ ಗ್ರಾಮದ ರೈತರು 40 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು ಕೆಲವರು ಆ ಭೂಮಿಯನ್ನು ಅನಧಿಕೃತವಾಗಿ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿ.ಎಚ್.ಪೂಜಾರ ಸಹಾಯಕ ಆಯುಕ್ತರ ಗಮನಸೆಳೆದಾಗ ಆ ಭೂಮಿಯನ್ನು ಸರ್ವೆ ಮಾಡಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಭಾಸ್ಕರ್‌ಕ್ಯಾಂಪಿನ ಸರ್ವೆ ನಂ.15/1 ಮತ್ತು 2ರ ಸರ್ಕಾರಿ ಭೂಮಿಯನ್ನು ಸರ್ವೆ ಮಾಡಿಸಿ ಪ್ರಸ್ತುತ ವಾಸವಾಗಿರುವ ಗುಡಿಸಲು ನಿವಾಸಿಗಳಿಗೆ ಹಕ್ಕುಪತ್ರ ಕೊಡಲು ಒತ್ತಾಯಿಸಲಾಯಿತು.

ಟಿಯುಸಿಐ ಜಿಲ್ಲಾಧ್ಯಕ್ಷ ಬಸವರಾಜ ಹೊಸಳ್ಳಿ, ಆರ್‌ವೈಎಫ್‌ಐ ಜಿಲ್ಲಾ ಸಂಘಟಕ ನಾಗರಾಜ ಪೂಜಾರ ಮಾತನಾಡಿದರು. ತಹಸೀಲ್ದಾರ್ ಕೆ.ನರಸಿಂಹ ನಾಯಕ, ನಗರಸಭೆ ಪೌರಾಯುಕ್ತ ಕೊಪ್ರೇಶಾಚಾರ ಉಪಸ್ಥಿತರಿದ್ದರು.

ಧರಣಿ ವಾಪಸ್: ಸಹಾಯಕ ಆಯುಕ್ತರು ಬೇಡಿಕೆಗಳಿಗೆ ಸ್ಪಂದಿಸಿರುವುದರಿಂದ ಧರಣಿ ಸತ್ಯಾಗ್ರಹವನ್ನು ಹಿಂದಕ್ಕೆ  ತೆಗೆದುಕೊಂಡಿರುವುದಾಗಿ ಮುಖಂಡರಾದ ಎಚ್.ಎನ್.ಬಡಿಗೇರ, ಡಿ.ಎಚ್.ಪೂಜಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT