ADVERTISEMENT

ನಾಳೆಯಿಂದ ಎನ್‌ಎಸ್‌ಎಸ್ ರಾಷ್ಟ್ರೀಯ ಭಾವೈಕ್ಯ ಶಿಬಿರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:15 IST
Last Updated 11 ಅಕ್ಟೋಬರ್ 2011, 8:15 IST

ರಾಯಚೂರು: ಎನ್‌ಎಸ್‌ಎಸ್ ರಾಷ್ಟ್ರೀಯ ಭಾವೈಕ್ಯ ಶಿಬಿರವನ್ನು ಇದೇ 12ರಿಂದ 18ರವರೆಗೆ ನಗರದ ನವೋದಯ ಬಾಲಕಿಯರ ವಸತಿ ನಿಲಯದಲ್ಲಿ ಆಯೋಜಿಸಲಾಗಿ 63 ಪುರುಷ,123 ಮಹಿಳಾ ಶಿಬಿರಾರ್ಥಿಗಳು ಹಾಗೂ 15 ಎನ್‌ಎಸ್‌ಎಸ್ ಅಧಿಕಾರಿಗಳು ಸೇರಿದಂತೆ ಒಟ್ಟು 201 ಜನ ಶಿಬಿರದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ರವೀಂದ್ರ ಜಾಲ್ದಾರ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಈಗಾಗಲೇ ರಾಜ್ಯ ಪ್ರಶಸ್ತಿ ಪಡೆದ ಕಾಲೇಜಿನ ಎನ್‌ಎಸ್‌ಎಸ್ ಘಟಕ,  ಯುವಜನ ಸೇವಾ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ, ಎನ್.ಎಸ್.ಎಸ್ ಕೋಶದ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಆಯೋಜಿಸಲಾಗಿದೆ ಎಂದರು.

ಬೆಂಗಳೂರಿನ ಡಿಎಸ್‌ಇಆರ್‌ಟಿ, ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ, ಪದವಿ ಪೂರ್ವ ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ಗುಲ್ಬರ್ಗ ವಿವಿ, ಬಾಗಲಕೋಟೆ ತೋಟಗಾರಿಕೆ ವಿವಿ, ರಾಯಚೂರು ಕೃಷಿ ವಿ,  ಬಿಜಾಪುರ ಮಹಿಳಾ ವಿ, ಬೀದರ್‌ನ ಕರ್ನಾಟಕ ಪಶು ವಿವಿಯ ಎನ್‌ಎಸ್‌ಎಸ್ ಘಟಕದ ಶಿಬಿರಾರ್ಥಿಗಳು ಮತ್ತು ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಎನ್‌ಎಸ್‌ಎಸ್ ಪ್ರಾದೇಶಿಕ ಕೇಂದ್ರಗಳಾದ ಗುವಾಹಟಿ, ಚೆನ್ನೈ, ಪಾಂಡಿಚೇರಿ, ಹೈದರಾಬಾದ್, ಪುಣೆ ಮತ್ತು ತ್ರಿವೇಂದ್ರಮ್‌ನಿಂದಲೂ ಶಿಬಿರಾರ್ಥಿ ಮತ್ತು ಎನ್‌ಎಸ್‌ಎಸ್ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.

12ರಂದು ಸಂಜೆ 4ಕ್ಕೆ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಶಿಬಿರ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕ ಸಯ್ಯದ್ ಯಾಸಿನ್ ವಹಿಸಲಿದ್ದಾರೆ. 13ರಂದು ಬೆಳಿಗ್ಗೆ 10-30ರಿಂದ ಮಧ್ಯಾಹ್ನ 1ರವರೆಗೆ ಇಂದಿನ ಬದುಕಿನಲ್ಲಿ ಗಾಂಧಿಮಾರ್ಗದ ಮಹತ್ವ ಕುರಿತು ಪ್ರೇರಣಾ ಅಧಿವೇಶನ ಮತ್ತು ಸಂವಾದ ನಡೆಯುವುದು. 

ಮಧ್ಯಾಹ್ನ ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಉಪನ್ಯಾಸ ನಡೆಯುವುದು. 14ರಂದು ಬೆಳಿಗ್ಗೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಅವಶ್ಯಕತೆ ಬಗ್ಗೆ ಪ್ರೇರಣಾ ಅಧಿವೇಶನ ನಡೆಯುವುದು. ಮಧ್ಯಾಹ್ನ ಗ್ರಾಮೀಣ ಭಾರತದಲ್ಲಿ ಯುವ ಸಂಘಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ಜರುಗುವುದು ಎಂದು ತಿಳಿಸಿದರು.

15ರಂದು ರಾಷ್ಟ್ರೀಯ ಭಾವೈಕ್ಯತೆ ಮತ್ತು ಯುವಜನಾಂಗ ಹಾಗೂ ಎಚ್‌ಐವಿ ಕುರಿತು ಪ್ರೇರಣಾ ಅಧಿವೇಶನ, ಮಧ್ಯಾಹ್ನ ಎನ್‌ಎಸ್‌ಎಸ್ ಧ್ಯೇಯೋದ್ದೇಶಗಳು ಕುರಿತು ವಿಶೇಷ ಉಪನ್ಯಾಸ ನಡೆಯುವುದು. 16ರಂದು  ಆತ್ಮಾವಲೋಕನ ಮತ್ತು ಸಮಾಜಮುಖಿ ಕಾರ್ಯಕ್ಕೆ ಎನ್‌ಎಸ್‌ಎಸ್ ದಿಕ್ಸೂಚಿ ಎಂಬ ವಿಷಯ ಕುರಿತು ಪ್ರೇರಣಾ ಅಧಿವೇಶನ, ಮಧ್ಯಾಹ್ನ ಪರಿಪೂರ್ಣ ವ್ಯಕ್ತಿತ್ವದ ಕುರಿತು ವಿಶೇಷ ಉಪನ್ಯಾಸ, 17ರಂದು ಸಮೂಹ ಗಾಯನ ಮತ್ತು ಸಮೂಹ ನೃತ್ಯ, ಮಧ್ಯಾಹ್ನ ಯುವಶಕ್ತಿ ಮತ್ತು ಆರೋಗ್ಯವಂತ ಸಮಾಜ ಕುರಿತು ವಿಶೇಷ ಉಪನ್ಯಾಸ ನಡೆಯುವುದು. ಪ್ರತಿ ದಿನ ಸಂಜೆ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. 18ರಂದು ಬೆಳಿಗ್ಗೆ ಸಮಾರೋಪ ಸಮಾರಂಭ ನಡೆಯುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.