ರಾಯಚೂರು: ನಗರದ ಎಲ್‌ವಿಡಿ ಕಾಲೇಜು ಹಾಗೂ ಎಸ್ಆರ್ಪಿಎಸ್ ಪಿಯು ಕಾಲೇಜಿನ ಒಟ್ಟು 8 ಕೊಠಡಿಯಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಮೇ 16ರಂದು ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕೆ ಕಾರ್ಯಕ್ಕೆ 424 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ಎನ್.ನಾಗರಾಜು ಹೇಳಿದರು.
ಮಧ್ಯಾಹ್ನ 1 ಗಂಟೆಗೆ ಮತ ಎಣಿಕೆ ಪೂರ್ಣಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಜಯೋತ್ಸವ ಮೆರವಣಿಗೆ ನಿಷೇಧ ಮಾಡಲಾಗಿದೆ. ಮೇ 15ರ ಮಧ್ಯರಾತ್ರಿಯಿಂದ ಮೇ 16ರ ಮಧ್ಯರಾತ್ರಿವರೆಗೆ ಮದ್ಯಪಾನ ಮಾರಾಟ ನಿಷೇಧ ಮಾಡಲಾಗಿದೆ ಎಂದು ತಿಳಿಸಿದರು.
ಬುಧವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಸಿದ್ಧತೆ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮತ ಎಣಿಕೆಯು ಒಟ್ಟು 17 ಸುತ್ತಿನಲ್ಲಿ ನಡೆಯಲಿದೆ. 5 ಜನ ಸಹಾಯಕ ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ಮತ ಎಣಿಕೆ ನಡೆಯುವ 8 ಕೊಠಡಿಗೆ ತಲಾ 14 ಟೇಬಲ್ ಅಳವಡಿಸಿದ್ದು, ಒಟ್ಟು 112 ಟೇಬಲ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಮತ ಎಣಿಕೆ ಮೇಲ್ವಿಚಾರಕರು: ಒಟ್ಟು 112 ಮತ ಎಣಿಕೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. 112 ಸಹಾಯಕ ಮತ ಎಣಿಕೆ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. 133 ಮೈಕ್ರೋ ಆಬ್ಸರ್ವರ್ಸ್ ನೇಮಿಸಲಾಗಿದೆ. ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ ಒಟ್ಟು 424 ಸಿಬ್ಬಂದಿಯನ್ನು ಮತ ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಮತ ಎಣಿಕೆ ಕಾರ್ಯ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಗಮನಿಸಲು ಮತ ಎಣಿಕೆಯ ಪ್ರತಿ ಟೇಬಲ್‌ಗೂ ಕೇಂದ್ರ ಸರ್ಕಾರದ ಸಿಬ್ಬಂದಿಯನ್ನೇ ನಿಯೋಜಿಸಲಾಗಿದೆ. ಇವರೇ ಗಮನಿಸಿ ಚುನಾವಣಾ ವೀಕ್ಷಕರಿಗೆ ಮಾಹಿತಿ ರವಾನಿಸಲಿದ್ದಾರೆ ಎಂದು ವಿವರಿಸಿದರು.
ಅಂಚೆ ಮತ ಎಣಿಕೆಗೆ ಪ್ರತ್ಯೇಕ ಕೊಠಡಿ: ಅಂಚೆ ಮತ ಎಣಿಕೆಗೆ ಪ್ರತ್ಯೇಕ ಕೊಠಡಿಯನ್ನು ನಿಗದಿಪಡಿಸಲಾಗಿದೆ. ಇದಕ್ಕೂ ಪ್ರತ್ಯೇಕ ಸಹಾಯಕ ಚುನಾವಣಾಧಿಕಾರಿ (ಎ.ಆರ್.ಒ) ನೇಮಿಸಲಾಗಿದೆ ಎಂದು ತಿಳಿಸಿದರು.
ಬಣ್ಣದ ಗುರುತಿನ ಚೀಟಿ ವಿತರಣೆ: ಮತ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಯಲು ಎಲ್ಲ ರೀತಿಯ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿದೆ. ಮತ ಎಣಿಕೆಗೆ ನಿಯೋಜನೆಗೊಂಡ ಏಜೆಂಟರು, ಸಿಬ್ಬಂದಿ ನಿರ್ದಿಷ್ಠ ಸ್ಥಳ, ಕಾರ್ಯ ಸ್ಥಳ ಬಿಟ್ಟು ಅತ್ತಿಂದಿತ್ತ ಇತ್ತಿಂದತ್ತ ಹೋಗುವುದನ್ನು ನಿರ್ಬಂಧಿಸಲಾಗಿದೆ.
ನಿರ್ದಿಷ್ಟ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಗುತ್ತಿದೆ. ಮತ ಎಣಿಕೆ ಏಜೆಂಟ್ಗಳ ಗುರುತಿನ ಚೀಟಿಗೆ ‘ಪಂಚ್’ ಮಾಡಲಾಗುತ್ತದೆ. ಒಂದು ಬಾರಿ ಪಂಚ್ ಆದ ಮೇಲೆ ಹೊರಗಡೆ ಹೋಗಿ ಮತ್ತೊಂದು ಬಾರಿ ಇದೇ ಗುರುತಿನ ಚೀಟಿ ಹಿಡಿದು, ಭಾವಚಿತ್ರ ಕಿತ್ತು ಹಾಕಿ ಒಳಬರುವುದಕ್ಕೆ ಆಸ್ಪದವೇ ಇರುವುದಿಲ್ಲ ಎಂದು ಹೇಳಿದರು.
ಮತ ಎಣಿಕೆ ಕೊಠಡಿಯಲ್ಲಿಯೇ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯಕ್ಕೆ ಹೋಗುವಾಗ ಮಾತ್ರ ಲಿಖಿತವಾಗಿ ಮಾಹಿತಿ ನೀಡಿ ಅಧಿಕಾರಿಗೆ ತಿಳಿಸಿ ಹೋಗಿ ಬರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್‌ಗಳಿಗೆ ವಿವರ: ಮತ ಎಣಿಕೆ ಪೂರ್ಣ ವಿವರ ಪಟ್ಟಿಯನ್ನು ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್‌ಗಳಿಗೆ ವಿವರ ಕೊಡಲು ಆಯೋಗ ಸೂಚನೆ ನೀಡಿದೆ. ಆ ಪ್ರಕಾರ ವಿವರ ಒದಗಿಸಲು 4 ಜನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಹಿಟ್ನಾಳ, ಉಪ ವಿಭಾಗಾಧಿಕಾರಿ ಎಂ.ಪಿ ಮಾರುತಿ ಹಾಗೂ ಇತರ ಅಧಿಕಾರಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.