ADVERTISEMENT

ನೀರಾವರಿ ಇಲಾಖೆ ವಿವಿಧ ವಸ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 9:56 IST
Last Updated 6 ಡಿಸೆಂಬರ್ 2013, 9:56 IST

ಸಿಂಧನೂರು: ತಾಲ್ಲೂಕಿನ ಗೊರೇಬಾಳ ಪಿಕ್‌ಅಪ್‌ ಡ್ಯಾಂ ಗೆ ಸ್ವಾಧೀನಪಡಿಸಿ­ಕೊಂಡ ರೈತರ ಭೂಮಿಗೆ ಪರಿಹಾರ ಕೊಡದ ಸ್ಥಳೀಯ ನಂ.3 ಕಾಲುವೆ ವಿಭಾಗದ ಕಾರ್ಯಪಾಲಕ ಎಂಜಿನಿ­ಯರ್ ಕಾರ್ಯಾಲಯಕ್ಕೆ ಧಾವಿಸಿದ ಸ್ಥಳೀಯ ಹಿರಿಯ ಶ್ರೇಣಿ ನ್ಯಾಯಾಲ­ಯದ ಸಿಬ್ಬಂದಿ ವಿವಿಧ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಯಿತು.

ಗುರುವಾರ ಮಧ್ಯಾಹ್ನ 1.30ಗಂಟೆ ಸುಮಾರಿಗೆ ನೀರಾವರಿ ಇಲಾಖೆ ಕಚೇರಿಗೆ ತೆರಳಿದ ನ್ಯಾಯಾಲಯದ ಸಿಬ್ಬಂದಿ ಮೂರು ಸಿಪಿಯು, ಎರಡು ಮಾನಿಟರ್‌, ಎರಡು ಪ್ರಿಂಟರ್‌, ಫ್ಯಾನ್‌, ಝೆರಾಕ್ಸ್, ಫ್ಯಾಕ್ಸ್‌ ಮಷೀನ್‌, ಖುರ್ಚಿ, ಮೇಜು, ಯುಪಿಎಸ್‌ ಮತ್ತಿತರ ವಸ್ತುಗಳನ್ನು ಕಾರ್ಯಪಾಲಕ ಎಂಜಿನಿಯರ್‌ ಮುಲ್ಲಾ ಅವರ ಸಮಕ್ಷಮದಲ್ಲಿಯೇ ಜಪ್ತಿ ಮಾಡಿತು.

ಗೊರೇಬಾಳ ಪಿಕ್ಅಪ್‌ ಡ್ಯಾಂ ನಿರ್ಮಾಣಕ್ಕೆ 2000ರಲ್ಲಿ ಭೂಮಿ­ಯನ್ನು ವಿರೂಪಾಕ್ಷಪ್ಪ ಮತ್ತು ಉಮಾ­ದೇವಿ ಎನ್ನುವ ರೈತರ 3ಎಕರೆ ಭೂಮಿ­ಯನ್ನು ಸ್ವಾಧೀನಪ­ಡಿಸಿಕೊಂಡಿರುವ ನೀರಾವರಿ ಇಲಾಖೆ 2006ರಲ್ಲಿ 9ಲಕ್ಷ ಹಣ ನೀಡಿದೆ.

ಇನ್ನುಳಿದ ಬಾಕಿ 12,71.152 ₨ ಹಣ ನೀಡ­ಬೇಕಾಗಿತ್ತು. ನ್ಯಾಯಾಲಯದಿಂದ ಹಲ­ವಾರು ಬಾರಿ ರೈತರ ಪರ ವಕೀಲ ವೀರೇಶ ಪನ್ನೂರು ನೀರಾವರಿ ಇಲಾಖೆ ಅಧಿಕಾರಿಗಳನ್ನು ಮನವಿ ಮಾಡಿಕೊಂಡಿದ್ದರು. ಫಲಕಾರಿಯಾಗದ ಹಿನ್ನೆಲೆಯಲ್ಲಿ  ರೈತರಿಗೆ ನೀಡಬೇಕಾದ ಪರಿಹಾರದ ಹಣಕ್ಕಾಗಿ ನೀರಾವರಿ ಇಲಾಖೆ ಆಸ್ತಿ ಜಪ್ತಿ ಮಾಡಲು ಅಕ್ಟೋಬರ್‌ 10, 2013ರಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ಶಶಿಧರ ಅವರಿಂದ ಆಸ್ತಿ ಜಪ್ತಿಗೆ ಆದೇಶ ಪಡೆದಿದ್ದರು.

ನ್ಯಾಯಾಲಯದ ಸಿಬ್ಬಂದಿ ಇಲಾಖೆ  ಆಸ್ತಿಯನ್ನು ಜಪ್ತಿ ಮಾಡುವ ಸಂದರ್ಭದಲ್ಲಿ ವ್ಯವಸ್ಥಾಪಕ ಖಾಜಾಮೊಹಿನುದ್ದೀನ್‌, ಭೂಸ್ವಾಧೀನ ಗುಮಾಸ್ತ , ಸಿಬ್ಬಂದಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.