ದೇವದುರ್ಗ: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗಬಾರದು ಎಂಬ ಕಾರಣಕ್ಕೆ ಕಳೆದ ಮೂರು ವರ್ಷದ ವಧಿಯಲ್ಲಿ ಕೋಟಿಗಟ್ಟಲೇ ಹಣ ಬಿಡುಗಡೆಗೊಳಿಸದರೂ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಎಷ್ಟೊ ಯೋಜನೆಗಳು ನೆನಗುದಿಗೆ ಬೀಳಲು ಕಾರಣವಾಗಿವೆ ಎಂದು ಶಾಸಕ ಕೆ. ಶಿವನಗೌಡ ನಾಯಕ ಆರೋಪಿಸಿದರು.
ಗುರುವಾರ ಪಟ್ಟಣದಲ್ಲಿ ಶಾಸಕ ಕೆ. ಶಿವನಗೌಡ ನಾಯಕ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅವರು ಮಾತನಾಡಿದರು.
ರಾಜೀವಗಾಂಧಿ ನಿಗಮದಿಂದ ಯಾಟಗಲ್ ಹತ್ತಿರ ನೆನೆಗುದಿಗೆ ಬಿದ್ದಿರುವ ಕುಡಿಯುವ ನೀರು ಯೋಜನೆಯನ್ನು ಪೂರ್ಣಗೊಳಿಸಿ ಸುಮಾರು 9ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವುದಕ್ಕಾಗಿಯೇ ಸರ್ಕಾರದಿಂದ 6.70 ಕೋಟಿ ರೂಪಾಯಿ ಮಂಜೂರಾಗಿದೆ. ಅಧಿಕಾರಿಗಳು ಸದರಿ ಹಣವನ್ನು ಸರಿಯಾಗಿ ಬಳಕೆ ಮಾಡಲು ಸೂಚಿಸಿದ ಅವರು, ಪ್ರತಿ ಗ್ರಾಮಗಳಲ್ಲಿ ಒಂದು ಟ್ಯಾಂಕ್‌ನಿರ್ಮಿಸುವ ಜತೆಗೆ ಸಾರ್ವಜನಿಕವಾಗಿ ನಳಗಳನ್ನು ಅಳವಡಿಸಬೇಕು ಎಂದರು.
ತಾಲ್ಲೂಕಿನ ದೊಂಡಂಬಳಿ ಗ್ರಾವುದಲ್ಲಿ ನಿರ್ಮಿಸಲಾಗುತ್ತಿರುವ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ 2.70ಕೋಟಿ ರೂಪಾಯಿ ಮಂಜೂರಾಗಿದ್ದು, ಇದರಲ್ಲಿ ಸುಮಾರು 83ಲಕ್ಷ ರೂಪಾಯಿ ಖರ್ಚಾಗಿದೆ ಎಂದರು. ಸದರಿ ಯೋಜನೆಯಿಂದ ದೊಂಡಂಬಳಿ ಮತ್ತು ಬೇಣಕಲ್ ಗ್ರಾಮಗಳ ಜನರು ಲಾಭ ಪಡೆಯಲಿದ್ದಾರೆ ಎಂದರು.
ಶೀಘ್ರ: ಮೇಲಿನ ಎರಡು ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಬರುವ ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಯಾವುದೇ ಕಾರಣಕ್ಕೂ ಕಾಮಗಾರಿ ನೆನಗುದಿಗೆ ಬೀಳದಂತೆ ಎಚ್ಚರಿಕೆ ವಹಿಸಲು ಸಭೆಯಲ್ಲಿ ಭಾಗವಹಿಸದ್ದ ಕಾಮಗಾರಿ ಏಜನ್ಸಿ ಪಡೆದ ಭೂಸೇನಾ ನಿಗಮದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ನೀಡಿದ ಕಾಮಗಾರಿಗಳನ್ನು ಟೆಂಡರ್ ಪ್ರಕಾರ ನಿರ್ವಹಿಸದೆ ಇರುವುದರಿಂದ ತಾಲ್ಲೂಕಿನ ಜನರು ಜನಪ್ರತಿನಿಧಿಗಳನ್ನು ಕೇಳುತ್ತಾರೆ ಇದರ ಅರಿವು ಅಧಿಕಾರಿಗಳಿಗೆ ಇರಬೇಕು ಎಂದು ದೂರಿದರು.
ಉದ್ಘಾಟನೆ: ತಾಲ್ಲೂಕಿನ ಮಾನಸಗಲ್ ಮತ್ತು ಮುಂಡರಗಿ ಗ್ರಾಮಗಳಲ್ಲಿನ ಗ್ರಂಥಾಲಯ ಕಟ್ಟಡಗಳ ಕಾಮಗಾರಿ ಬಹುತೇಕ ಮುಗಿದಿದ್ದು, ಏ. 25ರಂದು ಉದ್ಘಾಟಿಸಲಾಗುವುದು ಎಂದರು.
ಭರವಸೆ: ತಾಲ್ಲೂಕಿನ ಮುಂಡರಗಿ ಗ್ರಾಮದಲ್ಲಿ ಪ್ರಸಿದ್ಧ ಶಿವರಾಯ ದೇವಸ್ಥಾನದಲ್ಲಿ ಭಕ್ತರಿಗೆ ಅನುಕೂಲವಾಗಲು ಯಾತ್ರಿ ನಿವಾಸ ನಿರ್ಮಾಣಕ್ಕೆ ಯೋಚಿಸಲಾಗಿದ್ದು, ಸದರಿ ಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ 30 ಲಕ್ಷ ರೂಪಾಯಿ ನೀಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಭೂಸೇನಾ ನಿಗಮದ ಸಹಾಯಕ ನಿರ್ದೇಶಕ ವಿಜಯಕುಮಾರ, ಕಿರಿಯ ಎಂಜಿನಿಯರ್ ಅನೀಲಕುಮಾರ, ತಾಪಂ ಇಒ ನಾಮದೇವ ರಾಠೋಡ್, ಜಿಪಂ ಸದಸ್ಯ ಪ್ರಕಾಶ ಪಾಟೀಲ, ಮುಖಂಡರಾದ ಸಿ.ಎಸ್.ಪಾಟೀಲ, ಮಲ್ಲಣ್ಣ ನಾಗರಾಳ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.