ADVERTISEMENT

ನೀರಿಲ್ರಿ, ಅಶುದ್ಧ ನೀರೇ ಕುಡಿಸ್ತೀರಾ...?

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 10:40 IST
Last Updated 1 ಜುಲೈ 2012, 10:40 IST

ರಾಯಚೂರು: ವಿದ್ಯುತ್ ಹಾಗೂ ತಾಂತ್ರಿಕ ಸಮಸ್ಯೆಯಿಂದ ನಗರದ ಶೇ 75 ಭಾಗಕ್ಕೆ ಕೃಷ್ಣಾ ನದಿಯಿಂದ ಸಮರ್ಪಕ ನೀರು ಪೂರೈಕೆ ಆಗದೇ ಇರುವುದು, ಸಿಯಾತಲಾಬ್ ಬಡಾವಣೆಯಲ್ಲಿನ ರಾಜಕಾಲುವೆ ದುರಸ್ತಿಗೆ ಬಿಡುಗಡೆಯಾಗಿದ್ದ 3 ಕೋಟಿ ಬೇರೆ ಕಾಮಗಾರಿಗೆ ವರ್ಗಾಯಿಸಿದ ಬಗ್ಗೆ ಆಕ್ಷೇಪ, ಆಲಂ ಸಮರ್ಪಕ ರೀತಿ ಹಾಕದೇ ಅಶುದ್ಧ ನೀರೇ ಪೂರೈಕೆ ಮಾಡುತ್ತಿರುವುದು, ಹೊಸೂರು ಗ್ರಾಮದ ಹತ್ತಿರ ಎಸ್‌ಟಿಪಿ ಘಟಕ ಸ್ಥಾಪನೆ ಪುನರ್ ಪರಿಶೀಲನೆಗಾಗಿ ಜಿಲ್ಲಾಡಳಿತದ ಅವಗಾಹನೆಗೆ ತರುವುದು, ಪ್ರತಿ ತಿಂಗಳು 10 ಲಕ್ಷ ಆದಾಯ ತರುವಂಥ ನಗರಸಭೆಯ 100ಕ್ಕೂ ಹೆಚ್ಚು ಮಳಿಗೆಗಳಿಗೆ ಮುಕ್ತ ಹರಾಜು ಪ್ರಕ್ರಿಯೆ ನಡೆಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳು ಇಲ್ಲಿ ಶನಿವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆಗೊಂಡವು.

100 ಮಳಿಗೆಗಳ ಹರಾಜು, ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ 15 ದಿನದಲ್ಲಿ ಸ್ಪಷ್ಟ ವಿವರಣೆ ನೀಡುವುದು, ಕೃಷ್ಣಾನದಿಯಿಂದ ನೀರು ಪೂರೈಕೆಗೆ ಆಗುತ್ತಿರುವ ತಾಂತ್ರಿಕ ಸಮಸ್ಯೆ ಮತ್ತು ವಿದ್ಯುತ್ ಸಮಸ್ಯೆ ಕುರಿತಂತೆ ಒಂದೆರಡು ದಿನದಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದರ ಬಗ್ಗೆ ನಗರಸಭೆ ಆಯುಕ್ತ ದೇವರಾಜ್ ಸಭೆಯಲ್ಲಿ ತಿಳಿಸಿದರು.

ಅಲ್ಲದೇ ನಗರಕ್ಕೆ ಕೃಷ್ಣಾ ನದಿಯಿಂದ ನೀರು ಪೂರೈಕೆ ಯೋಜನೆಯ ಕೃಷ್ಣಾ 2ನೇ ಹಂತದ ಮಾದರಿಯಲ್ಲಿಯೇ ಕೃಷ್ಣಾ 3ನೇ ಹಂತದ ನೀರು ಪೂರೈಕೆ ಯೋಜನೆಗೆ ಒಪ್ಪಿಗೆ ದೊರಕಿದೆ. 77 ಕೋಟಿ ಮೊತ್ತದ ಯೋಜನೆ ಇದು. ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ( ಜುರಾಲಾ ಡ್ಯಾಂ ಹಿನ್ನೀರು) ನೀರು ಪಡೆದು ನಗರಕ್ಕೆ ಪೂರೈಕೆ ಯೋಜನೆ ಇದು. ಈ ಬಗ್ಗೆ ಶೀಘ್ರ ಟೆಂಡರ್ ಕರೆದು ಅನುಷ್ಠಾನಕ್ಕೆ ಮುಂದಾಗುವುದಾಗಿ ಸಭೆಗೆ ವಿವರಣೆ ನೀಡಿದರು.

ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಸಿಯಾತಲಾಬ್ ಬಡಾವಣೆಯಲ್ಲಿ ರಾಜ ಕಾಲುವೆ ದುರಸ್ತಿ ಕಾಮಗಾರಿಗೆ ನಿಗದಿಪಡಿಸಿದ್ದ 3 ಕೋಟಿ ಮೊತ್ತ ಯಾವ ಕಾಮಗಾರಿಗೆ ವರ್ಗಾಯಿಸಲಾಗಿದೆ ಎಂಬುದರ ಬಗ್ಗೆ ಉತ್ತರ ದೊರಕಿಸಬೇಕು ಎಂದು ವಿರೋಧ ಪಕ್ಷದ ನಾಯಕ ಯೂಸೂಫ್ ಖಾನ್ ಒತ್ತಾಯಿಸಿದರು.

ಮೂರು ವರ್ಷದ ಹಿಂದೆ ಬಂದ 3 ಕೋಟಿ ಹಣ ಕಾಮಗಾರಿಗೆ ಬಳಸಿಲ್ಲ. ಪ್ರತಿ ಸಭೆಯಲ್ಲೂ ವಿಷಯ ಪ್ರಸ್ತಾಪ ಆಗುತ್ತದೆ. ಗಮನಹರಿಸಿಲ್ಲ. ಮಳೆ ಬಂದರೆ ಸಿಯಾತಲಾಬ್ ಬಡಾವಣೆ ನೀರಲ್ಲಿ ಮುಳುಗುತ್ತದೆ. ಈ ಸಮಸ್ಯೆ ಅರಿತಿಲ್ಲ. ಇದರ ದುರಸ್ತಿಗೆ ದೊರಕಿದ್ದ ಮೊತ್ತ ಯಾವ ಕಾಮಗಾರಿಗೆ ಬಳಸಲಾಗಿದೆ ಎಂದು ಪ್ರಶ್ನಿಸಿದರು.

ರಾಜಕಾಲುವೆ ದುರಸ್ತಿಗೆ ದೊರಕಿದ್ದ 3 ಕೋಟಿ ಹಣವನ್ನು ಎಡಿಬಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗೆ ವರ್ಗಾಯಿಸಲಾಗಿದೆ. ಇದಕ್ಕೆ ನಗರಸಭೆ ಸಾಮಾನ್ಯ ಸಭೆಯಲ್ಲಿಯೇ ಒಪ್ಪಿಗೆ ದೊರಕಿದೆ. ಈ ಬಗ್ಗೆ ದಾಖಲೆ ದೊರಕಿಸುವುದಾಗಿ ಎಡಿಬಿ ಕಾಮಗಾರಿ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್ ಸ್ಪಷ್ಟಪಡಿಸಿದಾಗ, ಕೂಡಲೇ ದಾಖಲೆ ದೊರಕಿಸಬೇಕು ಎಂದು ಯೂಸೂಫ್‌ಖಾನ್ ಸೂಚಿಸಿದರು.

ಕೃಷ್ಣಾ ನದಿಯಿಂದ ನೀರು ಪೂರೈಕೆಗೆ ವಿದ್ಯುತ್, ತಾಂತ್ರಿಕ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ಅನೇಕ ಬಾರಿ ಮಾಹಿತಿ ನೀಡಿದ್ದರೂ ತಾಂತ್ರಿಕ ವಿಭಾಗ ಸ್ಪಂದಿಸಿಲ್ಲ. ಸಮರ್ಪಕ ರೀತಿ ನೀರು ಪೂರೈಕೆ ಆಗದೇ ಜನತೆ ತೊಂದರೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಗಮನಹರಿಸಿಲ್ಲ. ಜನತೆ ಇದೇ ಸ್ಥಿತಿಯಲ್ಲಿ ಜೀವನ ಸಾಗಿಸಬೇಕೇ ಎಂದು ಹಿರಿಯ ಸದಸ್ಯ ಮಾರೆಪ್ಪ ಪ್ರಶ್ನಿಸಿದರು.

ಇದಕ್ಕೆ ಬೆಂಬಲಿಸಿದ ಸದಸ್ಯ ಯು ದೊಡ್ಡಮಲ್ಲೇಶಪ್ಪ ಅವರು, ನೀರು ಪೂರೈಕೆಯೇ ಸರಿಯಾಗಿಲ್ಲ. ಟ್ಯಾಂಕ್, ಪೈಪ್ ಹಾಕಿದರೂ ವ್ಯರ್ಥ. ಸಮರ್ಪಕ ನೀರು ದೊರಕಿಸುವ ವ್ಯವಸ್ಥೆಗೆ ಗಮನಹರಿಸಬೇಕು ಎಂದು ಹೇಳಿದರು.

ವಿರೋಧ ಪಕ್ಷದ ಸದಸ್ಯ ಬಿ ತಿಮ್ಮಾರೆಡ್ಡಿ ಮಾತನಾಡಿ, ನಗರದ ಬಹುತೇಕ ಬಡಾವಣೆಗೆ ಅಶುದ್ಧ ನೀರೇ ಪೂರೈಕೆ ಆಗುತ್ತಿದೆ. ನೀರು ಶುದ್ದೀಕರಣಕ್ಕೆ `ಆಲಂ~ ಖರೀದಿ ಮಾಡಲು ಏಪ್ರಿಲ್‌ನಲ್ಲಿ 8 ಲಕ್ಷ, ಮೇ ತಿಂಗಳಲ್ಲಿ  5 ಲಕ್ಷ  ಬಿಲ್ ಮಾಡಲಾಗಿದೆ. ಆದರೆ ನೀರು ಮಾತ್ರ ಅಶುದ್ಧವಾಗಿಯೇ ಪೂರೈಕೆ ಆಗುತ್ತಿದೆ. ಜನತೆ, ಸರ್ಕಾರದಿಂದ ಹಣ ಪಡೆದೂ ಅಶುದ್ಧ ನೀರು ಪೂರೈಕೆ ಯಾಕೆ. ಈ ಪರಿಸ್ಥಿತಿ ಶೀಘ್ರ ಹೋಗಲಾಡಿಸಬೇಕು ಎಂದು ಒತ್ತಾಯಿಸಿದರು.

ಶುದ್ಧೀಕರಣ ಘಟಕದಲ್ಲಿ ತಾಂತ್ರಿಕ ಸಮಸ್ಯೆ ಇರುವುದರಿಂದ ಸಮರ್ಪಕ ರೀತಿ ಶುದ್ಧ ನೀರು ಪೂರೈಕೆಗೆ ಅಡ್ಡಿಯಾಗಿರುವುದು ನಿಜ. ಶೀಘ್ರ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಆಡಳಿತ ಪಕ್ಷದ ಹಿರಿಯ ಸದಸ್ಯ ಜಯಣ್ಣ ಉತ್ತರಿಸಿದರು.

ವಿವಿಧ ಯೋಜನೆಯಡಿ ನಗರಸಭೆ ಸುಮಾರು 110ಕ್ಕೂ ಹೆಚ್ಚು ಮಳಿಗೆಗಳನ್ನು ವಿವಿಧ ಕಡೆ ನಿರ್ಮಿಸಿದೆ. ಬಾಡಿಗೆ ಅವಧಿ ಪೂರ್ಣಗೊಂಡಿದ್ದರೂ ಅವುಗಳು ತೆರವುಗೊಂಡಿಲ್ಲ. ಶೀಘ್ರ ತೆರವುಗೊಳಿಸಿ ಮುಕ್ತ ಹರಾಜು ಪ್ರಕ್ರಿಯೆ ನಡೆಸಬೇಕು. ಇದರಿಂದ ನಗರಸಭೆಗೆ ಕನಿಷ್ಠ 10 ಲಕ್ಷ ಆದಾಯ ಬರಲಿದೆ. ಅಲ್ಲದೇ ಡಿಪಾಸಿಟ್ ಮೊತ್ತವನ್ನೂ ಹೆಚ್ಚು ಪಡೆಯಬಹುದು. 6 ತಿಂಗಳಿಂದ ನಿರಂತರ ಒತ್ತಾಯ ಮಾಡಿದರೂ ಗಮನಹರಿಸಿಲ್ಲ. ಇನ್ನಾದರೂ ಈ ಬಗ್ಗೆ ಗಮನಹರಿಸಬೇಕು ಎಂದು ಸದಸ್ಯ ಈಶಪ್ಪ ಒತ್ತಾಯಿಸಿದಾಗ ಅನೇಕ ಸದಸ್ಯರು ಬೆಂಬಲಿಸಿದರು.

ಹೊಸೂರು ಎಸ್‌ಟಿಪಿ ಘಟಕ ಸ್ಥಾಪನೆ ಪುನರ್ ಪರಿಶೀಲನೆ: ನಗರದ ಹೊರ ವಲಯದಲ್ಲಿರುವ ಹೊಸೂರು ಗ್ರಾಮದ ಹತ್ತಿರ ಕೊಳಚೆ ನೀರು ಶುದ್ದೀಕರಣ ಘಟಕ ಸ್ಥಾಪನೆ( ಎಸ್‌ಟಿಪಿ)ಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡಬೇಕು ಎಂದು ಸುಮಾರು 10ಕ್ಕೂ ಹೆಚ್ಚು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು. ಈ ವಿಷಯ ಪುನರ್ ಪರಿಶೀಲನೆಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಹಿರಿಯ ಸದಸ್ಯ ಶಾಂತಪ್ಪ ಪ್ರಸ್ತಾಪಿಸಿದಾಗ ಸಭೆ ಒಪ್ಪಿಗೆ ಸೂಚಿಸಿತು.

ಸದಸ್ಯೆ ಕಮಲ್ ಬೀ, ಹಿರಿಯ ಸದಸ್ಯ ಮಾರೆಪ್ಪ, ಯೂಸೂಫ್‌ಖಾನ್, ಯಲ್ಲಪ್ಪ, ಶಾಂತಪ್ಪ ಸೇರಿದಂತೆ ಅನೇಕರು ವಿಷಯದ ಬಗ್ಗೆ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.