ADVERTISEMENT

ಪಕ್ಷದೊಳಗೆ ಸಮಸ್ಯೆ ಪರಿಹರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 11:35 IST
Last Updated 8 ಜನವರಿ 2011, 11:35 IST

ದೇವದುರ್ಗ:  ಪಕ್ಷದಲ್ಲಿನ ಸಣ್ಣ, ಪುಟ್ಟ ಅಂತರಿಕ ವಿಷಯ ಮತ್ತು ಸಮಸ್ಯೆಗಳು ಕಂಡು ಬಂದರೆ ಜಿಲ್ಲಾ ಮತ್ತು ರಾಜ್ಯದ ಸಂಬಂಧಿಸಿದ ಮುಖಂಡರಿಗೆ ಪತ್ರ ಬರೆದು ಪರಿಹಾರ ಕಂಡುಕೊಳ್ಳಬೇಕೆ ಹೊರತು ಮಾಧ್ಯಮಗಳ ಮುಂದೆ ಎಲ್ಲವನ್ನು ಬಹಿರಂಗ ಪಡಿಸದಿರಲು ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಮಾಜಿ ಸಂಸದ ಕಾಂಗ್ರೆಸ್‌ನ ಹಿರಿಯ ಮುಖಂಡ ಎ. ವೆಂಕಟೇಶ ನಾಯಕ ಮನವಿ ಮಾಡಿದ್ದಾರೆ.

ಶುಕ್ರವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಪಕ್ಷಗಳಂತೆ ಕಾಂಗ್ರೆಸ್‌ನಲ್ಲೂ ಸಮಸ್ಯೆಗಳು ಬರಬಹುದು ಅದನ್ನು ನಾಲ್ಕು ಗೋಡೆಯ ಮಧ್ಯೆ ಕುಳಿತು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದರು. ಪಕ್ಷದ ಹಿರಿಯ ಮುಖಂಡ ಮಾಜಿ ಶಾಸಕ ಯಲ್ಲಪ್ಪ ಅಕ್ಕರಿಕಿ ಅವರು ಈಚೆಗೆ ನಡೆದ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷ ತಮ್ಮನ್ನು ಗಡೆಗಣಿಸಿದೆ ಎಂದು ಭಾವಿಸಿರುವುದು ತಪ್ಪು. ಚುನಾವಣೆಯ ತಾರೀಖು ಏಕಾಏಕಿಯಾಗಿ ಪ್ರಕಟಣೆಗೊಂಡ ಕಾರಣ ತರಾತುರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ವಿನಾ ಇದರಲ್ಲಿ ತಾರತಮ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.


ದೇವದುರ್ಗ ತಾಲ್ಲೂಕಿನಲ್ಲಿ ಚುನಾವಣೆ ಎಂದರೆ ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆಲ್ಲ ಕೆಲವರು ಸಾಕಷ್ಟು ಮಟ್ಟದಲ್ಲಿ ಹಣ ಸುರಿಯುತ್ತಾರೆ ದೌರ್ಜನ್ಯ ಮತ್ತು ಗುಂಡಾಗಿರಿ ಮಾಡುತ್ತಾರೆ ಇದಕ್ಕೆ ಕಡಿವಾಣ ಒಂದು ಪಕ್ಷದಿಂದ ಸಾಧ್ಯವಿಲ್ಲದ ಕಾರಣದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಪ್ರಾಮಾಣಿಕವಾಗಿ ಚುನಾವಣೆ ನಡೆದರೆ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದರು. ಸ್ಥಳೀಯ ಪರಿಸ್ಥಿತಿ ಬಗ್ಗೆ ಈಗಾಗಲೇ ರಾಜ್ಯದ ಮುಖಂಡರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಭವಿಷ್ಯವಿದೆ ಎಂದರು.

ರಾಯಚೂರು ಜಿಪಂಗೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಪಕ್ಷ ನಮ್ಮ ಪಕ್ಷದ ಸದಸ್ಯರ ಖರೀದಿಗೆ ಮುಂದಾಗಿರುವ ಬಗ್ಗೆ ವರದಿಯಾಗಿದ್ದು, ಈ ಕುರಿತು ರಾಜ್ಯ ಮುಖಂಡರು ಗಂಬೀರವಾಗಿ ಪರಿಗಣಿಸಿದ್ದಾರೆ. ಅತಂತ್ರ ಸ್ಥಿತಿಯ ಜಿಪಂಗೆ ಯಾವ ಸೂತ್ರ ಅನುಸರಿಸಬೇಕು ಎಂಬ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಹೈಕಮಾಂಡ್ ಸೂಚನೆಯಂತೆ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಿಗಿ, ಪಕ್ಷದ ತಾಲ್ಲೂಕು ಅಧ್ಯಕ್ಷ ಬಸ್ಸಯ್ಯ ಶಾಖೆ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಲ್ಲನಗೌಡ ಗುಂಡಗುರ್ತಿ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಮುಖಂಡರು ಉಪಸ್ಥಿತರಿದ್ದರು. ರಾಜೀನಾಮೆ: ಕಾಂಗ್ರೆಸ್ ಪಕ್ಷದ ಮುಖಂಡರ ಬಗ್ಗೆ ಗುರುವಾರ ಬಹಿರಂಗವಾಗಿ ಆರೋಪ ಮಾಡಿದ್ದ ಮಾಜಿ ಶಾಸಕ ಯಲ್ಲಪ್ಪ ಅಕ್ಕರಿಕಿ ಅವರು ಶುಕ್ರವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪಕ್ಷದ ಸ್ಥಳೀಯ ಹೈಕಮಾಂಡ್ ಈಚೆಗೆ ನಡೆದ ಜಿಪಂ, ತಾಪಂ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಟಿಕೇಟ್ ಹಂಚಿಕೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ. ಕಷ್ಟ ಕಾಲದಲ್ಲಿ ಪಕ್ಷವನ್ನು ಬೆಳೆಸಿದ ನನ್ನಗೆ ಪಕ್ಷದ ಯಾವುದೇ ಕಾರ್ಯಚಟುವಟಿಕೆಗಳಲ್ಲಿ ಪರಿಗಣಿಸಿದೆ ಸ್ಥಳೀಯ ಮತ್ತು ರಾಜ್ಯ ಮುಖಂಡರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT