ADVERTISEMENT

ಪಕ್ಷಾತೀತ ಹೋರಾಟ; ರಾಘವೇಂದ್ರ ಕುಷ್ಟಗಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 6:59 IST
Last Updated 20 ಸೆಪ್ಟೆಂಬರ್ 2013, 6:59 IST

ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆ 95ರಿಂದ 157 ಕಿ.ಮೀವರೆಗೆ ನಿರ್ಮಾಣ ಆಗಬೇಕು. 371(ಜೆ) ಕಲಂ ಜಾರಿಗೆ ನಡೆಸಿದ ಹೋರಾಟದಂತೆಯೇ ಈ ಬಗ್ಗೆ ಪಕ್ಷಾತೀತ ಹೋರಾಟ ನಡೆಸಲು ಜನಸಂಗ್ರಾಮ ಪರಿಷತು ನಿರ್ಧಾರ ಮಾಡಿದೆ.
ಕಾಲುವೆ ನಿರ್ಮಾಣ ಕಾಮಗಾರಿ ಬಗ್ಗೆ ಸರ್ಕಾದ ಮಟ್ಟದಲ್ಲಿ ಪಕ್ಕಾ ತೀರ್ಮಾನ ಆಗುವವರೆಗೂ ಹೋರಾಟ ನಡೆಸಲಾಗುವುದು ಎಂದು ಜನ­ಸಂಗ್ರಾಮ ಪರಿಷತಿನ ಮುಖಂಡ ರಾಘವೇಂದ್ರ ಕುಷ್ಟಗಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾರಾಯಣಪುರ ಬಲ­ದಂಡೆ ಕಾಲುವೆ ವಿಸ್ತರಣೆಗೆ ಒತ್ತಾಯಿಸಿ ಸೆಪ್ಟೆಂಬರ್‌ 19ರಂದು ಜಿಲ್ಲಾ ಕಾಂಗ್ರೆಸ್‌ ಕಚೇರಿ ಎದುರು ಪ್ರತಿಭಟನೆ ನಡೆಸಲು ಘೋಷಣೆ ಮಾಡಲಾಗಿತ್ತು. ಸತತ ಮಳೆ ಕಾರಣದಿಂದ ಜಿಲ್ಲೆಯ ಬೇರೆ ಕಡೆ ಇರುವ ಸಂಘಟನೆ ಸದಸ್ಯರು, ರೈತರು, ಮುಖಂಡರು ಪಾಲ್ಗೊಳ್ಳಲು ಅಡಚಣೆ­ಯಾಗಿದೆ. ಹೀಗಾಗಿ ಸದ್ಯಕ್ಕೆ ಈ ಪ್ರತಿ­ಭಟನೆ ಮುಂದೂಡಲಾಗಿದೆ ಎಂದರು.

ನಾರಾಯಣಪುರ ಬಲದಂಡೆ ಕಾಲುವೆ ನಂ.157 ಕಿ.ಮೀ. ವರೆಗೆ ನಿರ್ಮಾಣದ ಬಗ್ಗೆ ಹಿಂದಿನ ಸರ್ಕಾರದ ನಿರ್ಧಾರಗಳ ಬಗ್ಗೆ ಗೊತ್ತಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಲಾಗಿದೆ. ಈ ಕುರಿತು ದಾಖಲೆಗಳೊಂದಿಗೆ ಸಂಘಟಿತ ಹೋರಾಟ ಮಾಡಲಾಗುತ್ತದೆ ಎಂದರು.

ಏಳು ಮೈಲ್‌ ಕ್ರಾಸ್‌ ಹತ್ತಿರ ಕೆರೆ ನಿರ್ಮಾಣ: ರಾಯಚೂರು ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಏಳು ಮೈಲ್‌ ಕ್ರಾಸ್‌ ಹತ್ತಿರ ಬೃಹತ್ ಕೆರೆ ನಿರ್ಮಾಣ ಮಾಡಬೇಕು. ಎಷ್ಟು  ಜಮೀನು ಬೇಕಾಗುತ್ತದೆ, ಕಾಲುವೆ ಮೂಲಕ ಹೇಗೆ ನೀರು ಭರ್ತಿ ಮಾಡಬೇಕು ಎಂಬುದು ಸರ್ಕಾರ ನಿರ್ಧಾರ ಮಾಡಬೇಕು ಎಂದರು.

ಕೆಪಿಎಸ್‌ಸಿ ಹಗರಣ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ: ಕರ್ನಾಟಕ ಲೋಕ ಸೇವಾ ಆಯೋಗವು 1998,99,2004ರಲ್ಲಿ ಪ್ರಥಮ ದರ್ಜೆಯ 800 ಹುದ್ದೆಗಳಿಗೆ ನೇಮ­ಕಾತಿ ಮಾಡಿದೆ. ಇದರಲ್ಲಿ ಶೇ 80ರಷ್ಟು ಹುದ್ದೆಗಳು ‘3ಎ’ಗೆ ಪ್ರವರ್ಗದ ಪಾಲಾ­ಗಿವೆ. ಈ ನೇಮಕಾತಿಯಲ್ಲಿ ವ್ಯಾಪಕ ಜಾತಿ ಪ್ರಭಾವ ಮತ್ತು ರಾಜಕೀಯ ಭ್ರಷ್ಟಾಚಾರ ನಡೆದಿದೆ.

ಕೆಲ ವರ್ಷಗಳಲ್ಲಿ ಸರ್ಕಾರದ ಕಚೇರಿಗಳ ಆಯಕಟ್ಟಿನ ಸ್ಥಳಗಳಲ್ಲಿ ಇವರೇ ಇರುತ್ತಾರೆ. ಇಂಥದಕ್ಕೆ ಭ್ರಷ್ಟ ಆಡಳಿತ ವ್ಯವಸ್ಥೆ ಕಾರಣ. ಈ ಬಗ್ಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದೇ ಇದ್ದರೆ ಭ್ರಷ್ಟ ಅಧಿಕಾರಿಗಳನ್ನೇ ಇಟ್ಟುಕೊಂಡು ಅವರು ಅಧಿಕಾರ ನಡೆಸಿದಂತಾಗುತ್ತದೆ ಎಂದು ಹೇಳಿದರು.

ಲೋಕಸೇವಾ ಆಯೋಗವು ಹುದ್ದೆ ನೇಮಕಾತಿಯಲ್ಲಿ ನಡೆಸಿದ ಅಕ್ರಮಗಳ ಬಗ್ಗೆ ಈಗ ವಿಚಾರಣೆ ನಡೆಸುತ್ತಿರುವ  ನ್ಯಾಯಾಲಯವೂ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದೆ. ಆಡಳಿತ ವರ್ಗದ ಲಾಬಿಗೆ ಮುಖ್ಯಮಂತ್ರಿ ಬಲಿಯಾಗಬಾರದು ಎಂದು ಒತ್ತಾಯಿಸಿದರು.
ಹಾಗೆ ಅಕ್ರಮ ಗಣಿಗಾರಿಕೆಗೆ ಸಂಬಂಧಿ­ಸಿದಂತೆ ಹಿಂದಿನ ಲೋಕಾ­ಯುಕ್ತ ಸಂತೋಷ ಹೆಗಡೆ ಅವರು ಕೊಟ್ಟ ವರದಿಯಲ್ಲಿ 700 ಅಧಿಕಾರಿಗಳ ಹೆಸರು ಉಲ್ಲೇಖಿಸಿದ್ದಾರೆ.

ಆ ಅಧಿಕಾರಿ­ಗಳ ವಿರುದ್ಧ ಕ್ರಮ ಜರುಗಿಸಬೇಕು. ಅಂದಾಗ ಬೆಂಗಳೂರಿನಿಂದ ಬಳ್ಳಾರಿ­ವರೆಗೆ ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ಪಾದಯಾತ್ರೆಗೆ ಅರ್ಥ ಬರುತ್ತದೆ. ಆಗ ಸ್ಪೆಷಲ್‌ ಕೋರ್ಟ್‌ ಸ್ಥಾಪನೆಯನ್ನು ಅಕ್ರಮ ಗಣಿಗಾರಿಕೆ ಪ್ರಕರಣ ವಿಚಾರಣೆಗಾಗಿಯೇ ಮಾಡು­ವು­­­ದಾಗಿ ಹೇಳಿದ್ದರು. ಈಗ ಅದಕ್ಕೆ ಬದ್ದರಾಗಿ ಮುಖ್ಯಮಂತ್ರಿ ಕಾರ್ಯ­ನಿರ್ವಹಿಸಬೇಕು ಎಂದು ಹೇಳಿದರು. ಡಾ.ವಿ.ಎ ಮಾಲಿಪಾಟೀಲ್‌, ರಾಮನಗೌಡ ಜಾಲಿಬೆಂಚಿ, ಅಕ್ಬರ್‌ ಸಾಬ್‌, ಈಶಪ್ಪ, ವೆಂಕಟೇಶ ಯಾದವ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT