ADVERTISEMENT

ಪರಸಾಪುರ: ಪೂರ್ಣಗೊಳ್ಳದ ಕೆರೆ ಕಾಮಗಾರಿ

ಮರೀಚಿಕೆಯಾದ ಶುದ್ಧ ಕುಡಿಯುವ ನೀರು

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 11:12 IST
Last Updated 17 ಜೂನ್ 2013, 11:12 IST

ಕವಿತಾಳ: ಪಟ್ಟಣದ ಜನತೆಗೆ ತುಂಗಭದ್ರ ಎಡದಂಡೆ ಕಾಲುವೆಯಿಂದ ಶುದ್ಧ ಮತ್ತು ಶಾಶ್ವತ ಕುಡಿಯುವ ನೀರು ಒದಗಿಸಲು ಸಮೀಪದ ಪರಸಾಪುರ ಹತ್ತಿರ ನಿರ್ಮಿಸಿದ ಕೆರೆ ಕಾಮಗಾರಿ ಕಳೆದ 8 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಜನತೆಗೆ ಫ್ಲೋರೈಡ್‌ಯುಕ್ತ ನೀರನ್ನೇ ಕುಡಿಯುವಂತಾಗಿದೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಅನುದಾನದಲ್ಲಿ ಅಂದಾಜು ರೂ. 80 ಲಕ್ಷ ರೂಪಾಯಿಗಳಲ್ಲಿ ಕೆರೆ ನಿರ್ಮಿಸಿ ಶುದ್ಧೀಕರಣ ಘಟಕ ಸ್ಥಾಪನೆಯ  ಉದ್ದೇಶದಿಂದ ಅಂದಿನ ಶಾಸಕರಾಗಿದ್ದ ಎನ್.ಎಸ್.ಬೋಸರಾಜು ಅವರು ಕೆರೆ ಕಾಮಗಾರಿಗೆ ಭೂಮಿಪೂಜೆ ಮಾಡಿದರು. ಈ ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸಿದ್ದರು.

ಕಾಮಗಾರಿಯ ಆರಂಭಿಕ ಹಂತದಲ್ಲಿಯೇ ಕೆಲವರು  ಗುಣಮಟ್ಟದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಇನ್ನೂ ಹೆಚ್ಚಿನ ಆಳದಲ್ಲಿ ಅಗೆಯುವಂತೆ ಮತ್ತು ತಳಭಾಗದಲ್ಲಿ ಕಾಂಕ್ರೀಟ್ ಹಾಸು ನಿರ್ಮಿಸುವಂತೆ ಪ್ರತಿಭಟನೆ ನಡೆಸಿದರು. ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ ಜನಪ್ರತಿನಿಧಿಗಳು ಕಾಮಗಾರಿ ಮುಂದುವರೆಸಲು ಆಸಕ್ತಿ ತೋರಲಿಲ್ಲ.

ಅದಾಗಲೇ ಕೆರೆಯನ್ನು ಒಂದು ಹಂತಕ್ಕೆ ಅಗೆದ ಭೂಸೇನಾ ನಿಗಮದ ಅಧಿಕಾರಿಗಳು ಕಾಲುವೆ ಮತ್ತು ಕೆರೆಯ ಮಧ್ಯದಲ್ಲಿ ಸಂಪರ್ಕ ಇಲ್ಲದೆಯೇ ಪೈಪ್ ಹಾಕಿ ಕಾಮಗಾರಿ ನಿಲ್ಲಿಸಿದರು. ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಗ್ರಾಮಸ್ಥರು, ಸಂಘ ಸಂಸ್ಥೆಗಳು ಕೆರೆ ಕಾಮಗಾರಿ ಪುನರ್ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆದರು.

ಅಂದಿನ ಜಿಲ್ಲಾ ಪಂಚಾಯಿತಿ ಸಿಇಒ  ಮನೋಜ್‌ಜೈನ್ ಭೇಟಿ ನೀಡಿ ಪರಿಶೀಲಿಸಿ, ಯೋಜನಾ ವೆಚ್ಚವನ್ನು ಮರು ಪರಿಶೀಲಿಸಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರು. ಅದರಂತೆ ಎರಡನೇ ಬಾರಿಗೆ ಅಂದಾಜು ರೂ.2.60 ಕೋಟಿ ಅಂದಾಜು ವೆಚ್ಚ ಹಿಗ್ಗಿದರೂ ವಾರ ಕಾಲ ನಡೆದ ಕೆರೆಯ ಅಗೆತ ಬಿಟ್ಟರೆ ಬೇರೆ ಕಾಮಗಾರಿ ನಡೆಯಲಿಲ್ಲ. ಜನರ ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಅಂದಾಜು ರೂ.10 ಲಕ್ಷ ಮೊತ್ತದಲ್ಲಿ ಪಂಪ್‌ಹೌಸ್ ನಿರ್ಮಾಣಕ್ಕೆ ಚಾಲನೆ ನೀಡಿದರು.

ಇತ್ತ ಕೆರೆ ಕಾಮಗಾರಿ ಅಪೂರ್ಣವಾಗಿದ್ದರೂ ಪಂಪ್‌ಹೌಸ್ ನಿರ್ಮಾಣ ಮಾಡಲಾಯಿತು. ಇದೀಗ ತುಂಗಭದ್ರ ಎಡದಂಡೆ ಕಾಲುವೆಯಿಂದ ಪಂಪ್‌ಹೌಸ್‌ಗೆ ಪೈಪ್‌ಲೈನ್ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಇಷ್ಟಾಗಿಯೂ ಕೆರೆ ಕಾಮಗಾರಿ ಅಪೂರ್ಣವಾಗಿದೆ.

ಇದೀಗ ಕೆರೆ ನಿರ್ಮಾಣಕ್ಕೆ ರೂ.5.5ಕೋಟಿ ಅಂದಾಜು ಪಟ್ಟಿ ತಯಾರಿಸಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗುತ್ತಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಕಳೆದ 8ವರ್ಷಗಳಲ್ಲಿ ಮೂರು ಬಾರಿ ಅಂದಾಜು ವೆಚ್ಚ ಹಿಗ್ಗಿಸಿಕೊಂಡು, ಮೂರು ಬಾರಿ ಅದ್ದೂರಿ ಶಂಕುಸ್ಥಾಪನೆ ನೆರವೇರಿಸಿದ್ದರೂ ಪಟ್ಟಣದ ಜನತೆ ಶುದ್ಧ ಕುಡಿಯುವ ಮಾತು ದೂರವೇ ಉಳಿದಿದೆ.

ಜೂನ್ 17 ರ ಸೋಮವಾರ ಕೆರೆಗೆ ಭೇಟಿ ನೀಡಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರಾದರೂ ಕೆರೆಗೆ ಮೋಕ್ಷ ಕಾಣಿಸುವರೇ ಎಂದು ಪಟ್ಟಣದ ಜನತೆ ಕಾಯುತ್ತಿದ್ದಾರೆ.
-ಮಂಜುನಾಥ ಎನ್.ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.