ADVERTISEMENT

ಪರಿಶಿಷ್ಟರ ಪ್ರಗತಿಗೆ ಯೋಜನೆ ರೂಪಿಸಿ

​ಪ್ರಜಾವಾಣಿ ವಾರ್ತೆ
Published 10 ಮೇ 2012, 7:30 IST
Last Updated 10 ಮೇ 2012, 7:30 IST

ರಾಯಚೂರು: ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆಯಡಿ(ಬಿ.ಆರ್.ಜಿ.ಎಫ್) ಹೈದರಾಬಾದ್ ಕರ್ನಾಟಕ  ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿನ ಪರಿಶಿಷ್ಟ ಪಂಗಡಗಳ ಪ್ರಗತಿಗೆ ಪೂರಕವಾದ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಸಮಾಜ ಕಲ್ಯಾಣ ಇಲಾಖೆ ಅಭಿವೃದ್ಧಿ ಕಾರ್ಯ ಕುರಿತು ಗುಲ್ಬರ್ಗ ಪ್ರಾದೇಶಿಕ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಹೈದರಾಬಾದ್ ಕರ್ನಾಟಕ ಪ್ರದೇಶದ ಈ ಭಾಗದ ಜಿಲ್ಲೆಗಳಿಗೆ ಹಿಂದುಳಿದ ಪ್ರದೇಶ ಅಭಿವೃದ್ಧಿ ಯೋಜನೆಯಡಿ( ಬಿ.ಆರ್.ಜಿ.ಎಫ್) ಸಾಕಷ್ಟು ಅನುದಾನ ದೊರಕುತ್ತದೆ. ಬರೀ ರಸ್ತೆ, ಕಟ್ಟಡ, ಸಮುದಾಯ ಭವನದಂಥ ಕಾರ್ಯ ಸೇರಿದಂತೆ ಬೇರೆ ಕೆಲಸಗಳಿಗೆ ಬಳಸಿರಬಹುದು. ಆದರೆ, ಹಿಂದುಳಿದ ಪ್ರದೇಶದ ಈ ಭಾಗದ ಪರಿಶಿಷ್ಟ ವರ್ಗ- ಪರಿಶಿಷ್ಟ ಪಂಗಡದವರ ಜೀವನ ಮಟ್ಟ ಸುಧಾರಣೆಗೆ, ಸಮಗ್ರ ಪ್ರಗತಿಗೆ ಉಪಯುಕ್ತ ಯೋಜನೆ ರೂಪಿಸಿದ್ದು ಕಂಡಿಲ್ಲ ಎಂದು ವಿಷಾದಿಸಿದರು.

ಹೀಗಾಗಿ ಈ ವರ್ಷದಿಂದಲೇ ಬಿ.ಆರ್.ಜಿ.ಎಫ್ ಅನುದಾನದಡಿ ಪರಿಶಿಷ್ಟ ವರ್ಗ-ಪರಿಶಿಷ್ಟ ಪಂಗಡದ ಏಳ್ಗೆಗೆ ಈ ಭಾಗದ ಜಿಲ್ಲಾಧಿಕಾರಿಗಳೇ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮುಂದಾಗಬೇಕು. ಯಾವುದೇ ಕಾರಣಕ್ಕೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ತಿಳಿಸಿದರು.

ಬಿ.ಆರ್.ಜಿ.ಎಫ್ ಯೋಜನೆ ಕೇಂದ್ರ ಸರ್ಕಾರ ರೂಪಿಸಿದ ಯೋಜನೆ. ಯೋಜನೆ ನಿಯಮಗಳಂತೆ ಅನುಷ್ಠಾನ ಮಾಡಬೇಕಾಗುತ್ತದೆ. ತಾವು ಈಗ ಸೂಚಿಸುತ್ತಿರುವ ಅಂಶ ಈ ಯೋಜನೆ ನಿಯಮ ವ್ಯಾಪ್ತಿಯಲ್ಲಿ ಬರದೇ ಇರುವುದರಿಂದ ಆಡಳಿತಾತ್ಮಕ ಸಮಸ್ಯೆಗೆ ಕಾರಣ ಆಗಬಹುದು ಎಂದು ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲಾಧಿಕಾರಿಗಳು ಸಚಿವರಿಗೆ ವಿವರಣೆ ನೀಡಿದರು.

ತಾವು ಬಿ.ಆರ್.ಜಿ.ಎಫ್ ಯೋಜನೆಯಡಿ ಈ ಸಮುದಾಯದ ಅಭಿವೃದ್ಧಿಗೆ ಏನು ಮಾಡಬಹುದು ಎಂಬ ಯೋಜನೆ ರೂಪಿಸಿ ಕಳುಹಿಸಿಕೊಡಿ. ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಸಚಿವ, ಅಧಿಕಾರಿಗಳ ಸಮ್ಮುಖದಲ್ಲಿಯೇ ಚರ್ಚಿಸಿ ರಾಜ್ಯ ಸರ್ಕಾರದಿಂದ ಒಪ್ಪಿಗೆ ಸೂಚಿಸಿ ಆಡಳಿತಾತ್ಮಕ ತೊಂದರೆ ಆಗದ ರೀತಿ ನೋಡಿಕೊಳ್ಳುವುದು ತಮ್ಮ ಜವಾಬ್ದಾರಿ ಎಂದು ಸಚಿವರು ಅಧಿಕಾರಿಗಳಿಗೆ ಭರವಸೆ ನೀಡಿದರು.

ಪ್ರತಿ ಜಿಲ್ಲೆಗೆ 5 ಕೋಟಿ: ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿನ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗ ಕುಟುಂಬ ವರ್ಗಕ್ಕೆ ಶೌಚಾಲಯ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯು 30 ಕೋಟಿ ಅನುದಾನ ದೊರಕಿಸುತ್ತಿದೆ. ಪ್ರತಿ ಜಿಲ್ಲೆಗೂ 5 ಕೋಟಿ ಅನುದಾನ ದೊರಕಲಿದೆ. ಈ ಸಮುದಾಯದ ಕುಟುಂಬ ವರ್ಗಗಳನ್ನು ಗುರುತಿಸಿ ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಿ ಶೀಘ್ರ ಇಲಾಖೆಗೆ ಕಳುಹಿಸಿಕೊಡಬೇಕು. ಯೋಜನೆ ವರದಿ ಸಲ್ಲಿಕೆಯಾಗುತ್ತಿದ್ದಂತೆಯೇ ಹಣ ಬಿಡುಗಡೆ ಮಾಡಲಾಗುವುದು. ಆಯಾ ಜಿಲ್ಲಾಧಿಕಾರಿಗಳೇ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ದಾಖಲೆ ಪ್ರಕಾರ 5.50 ಲಕ್ಷ ದಲಿತ ಕುಟುಂಬಗಳಿವೆ. 7 ವರ್ಷದಲ್ಲಿ 80 ಸಾವಿರ ಶೌಚಾಲಯ ಈ ಕುಟುಂಬಕ್ಕೆ ನಿರ್ಮಿಸಲಾಗಿದೆ. ಇವುಗಳನ್ನು ಸಮರ್ಪಕ ರೀತಿ ನಿರ್ಮಿಸಿ ಕೊಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಅಲ್ಲದೇ ಇಲಾಖೆಯಿಂದ ಪ್ರತಿ ಕುಟುಂಬಕ್ಕೆ 10 ಸಾವಿರ ದೊರಕಿಸಿ ಉತ್ತಮ ಶೌಚಾಲಯ ನಿರ್ಮಿಸಿಕೊಡುವ ಉದ್ದೇಶ ಇಲಾಖೆಯದ್ದು. ಇದನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಅನುಷ್ಠಾನ ಮಾಡಬೇಕು ಎಂದು ಹೇಳಿದರು.

ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಪಂಚಾಯಿತಿಗೆ 25 ಲಕ್ಷ ವಿಶೇಷ ಅನುದಾನ ಮತ್ತು ಚಿನ್ನದ ಪದಕ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.

ಅಟಲ್ ನವೋದಯ ವಿದ್ಯಾರ್ಥಿ ವಸತಿ ನಿಲಯ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ. 20 ಎಕರೆ ಜಮೀನು ನೀಡಿದ ಜಿಲ್ಲೆಗಳಿಗೆ 10 ಕೋಟಿ ಅನುದಾನ ದೊರಕಿಸಲು ಇಲಾಖೆ ಸಿದ್ಧವಿದೆ ಎಂದು ಹೇಳಿದರು.

ತೀರಾ ದುಸ್ಥಿತಿಯಲ್ಲಿರುವ ಇಲಾಖೆ ವಸತಿ ನಿಲಯಗಳನ್ನು ಕೆಡವಬೇಕು. ಹೊಸ ಕಟ್ಟಡ ನಿರ್ಮಾಣಕ್ಕೆ ಇಲಾಖೆಯೇ ಅನುದಾನ ದೊರಕಿಸಲಿದೆ. ಆಯಾ ಜಿಲ್ಲಾಧಿಕಾರಿಗಳೇ ಇದಕ್ಕೆ ಯೋಜನೆ ರೂಪಿಸಬೇಕು. ಅದು 20 ವರ್ಷ ಭವಿಷ್ಯದ ಯೋಜನೆ ಆಗಿರಬೇಕು. ತಮ್ಮ ಮಕ್ಕಳು ವ್ಯಾಸಂಗ ಮಾಡುವ ಸ್ಥಳ, ಮನೆ ಎಷ್ಟೊಂದು ಅಚ್ಚುಕಟ್ಟಾಗಿರುತ್ತದೆ ಆ ಪರಿಕಲ್ಪನೆಯಲ್ಲಿ ಪರಿಶಿಷ್ಟ ವರ್ಗ-ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣದಲ್ಲೂ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ವಿದ್ಯಾರ್ಥಿ ವಸತಿ ನಿಲಯ ದುರಸ್ತಿ ಕಾಮಗಾರಿಗೂ ಹಣ ದೊರಕಿಸಲಾಗುತ್ತದೆ. ಜಿಲ್ಲಾಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡಿ, ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಈ ಸಮಸ್ಯೆ ಪರಿಹರಿಸಬೇಕು. ಹೊಸ ವಸತಿ ನಿಲಯಕ್ಕೆ ಇಲಾಖೆ ಮುಂದಾಗಿದೆ. ಜಿಲ್ಲಾಧಿಕಾರಿಗಳು ನಿವೇಶನ, ಕಟ್ಟಡ ನಿರ್ಮಾಣ ಯೋಜನೆ ಕಳುಹಿಸಿಕೊಡಬೇಕು ಎಂದು ಸೂಚಿಸಿದರು.

ಆಹಾರ ಪೂರೈಕೆಗೆ ನಿಗಾ: ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಆಹಾರ ಸಾಮಗ್ರಿ ಪೂರೈಕೆ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗುವುದು. ಹಲವು ವರ್ಷಗಳಿಂದ ಒಬ್ಬರೇ ಗುತ್ತಿಗೆದಾರ, ಗುಣಮಟ್ಟವಲ್ಲದ ಆಹಾರ ಸಾಮಗ್ರಿ ಪೂರೈಕೆ, ವಿದ್ಯಾರ್ಥಿಗಳ ಸಂಖ್ಯೆಗೂ, ದಾಖಲೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೂ ವ್ಯತ್ಯಾಸ ಇರುವುದು ಹೀಗೆ ಅನೇಕ ಲೋಪಗಳಿವೆ. ಹೀಗಾಗಿ ರಾಜ್ಯ ಮಟ್ಟದಲ್ಲಿ ಕೇಂದ್ರಿಕೃತ ವ್ಯವಸ್ಥೆಯಲ್ಲಿ ಟೆಂಡರ್ ಕರೆದು ಗುಣಮಟ್ಟದ ಮತ್ತು ಅಚ್ಚುಕಟ್ಟಾಗಿ ಆಹಾರ ಸಾಮಗ್ರಿ ಪೂರೈಸುವ ಸಂಸ್ಥೆಗೆ ವಹಿಸಿಕೊಡುವ ಚಿಂತನೆ ನಡೆದಿದೆ ಎಂದು ಹೇಳಿದರು.

ಗುಲ್ಬರ್ಗ ಪ್ರಾದೇಶಿಕ ಆಯುಕ್ತೆ ಕೆ ರತ್ನಪ್ರಭಾ, ಸಮಾಜ ಕಲ್ಯಾಣ ಇಲಾಖೆ  ಪ್ರಧಾನ ಕಾರ್ಯದರ್ಶಿ ಇ ವೆಂಕಟಯ್ಯ, ಶಾಸಕರಾದ ವೆಂಕಟರಾವ್ ನಾಡಗೌಡ, ಹಂಪಯ್ಯ ನಾಯಕ, ಸಯ್ಯದ್ ಯಾಸಿನ್, ರಾಯಪ್ಪ ನಾಯಕ, ಜಿಲ್ಲಾಧಿಕಾರಿ ಎಂ.ವಿ ಸಾವಿತ್ರಿ  ವೇದಿಕೆಯಲ್ಲಿದ್ದರು.

ರಾಯಚೂರು, ಬೀದರ್, ಕೊಪ್ಪಳ, ಯಾದಗಿರಿ, ಬಳ್ಳಾರಿ ಮತ್ತು ಗುಲ್ಬರ್ಗ ಜಿಲ್ಲೆಯ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.