ADVERTISEMENT

ಪಾದಯಾತ್ರೆಗೆ ಶ್ರೀಗಳ ಹಾರೈಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:20 IST
Last Updated 11 ಫೆಬ್ರುವರಿ 2011, 7:20 IST

ಲಿಂಗಸುಗೂರ:  ಬಾಗಲಕೋಟೆ ಜಿಲ್ಲೆಯ ಹುನಗುಂದ ಮತ್ತು ರಾಯಚೂರು ಜಿಲ್ಲೆಯ ಲಿಂಗಸುಗೂರ ಮತ್ತು ಮಾನ್ವಿ ತಾಲ್ಲೂಕುಗಳ 30ಕ್ಕೂ ಹೆಚ್ಚು ಗ್ರಾಮಗಗಳ ರೈತರ ಕನಸಿನ ಕೂಸಾದ ನಂದವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ರೈತ ಜಾಗೃತಿ ಪಾದಯಾತ್ರೆಗೆ ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು ಹಸಿರು ನಿಶಾನೆ ತೋರಿಸುವ ಮೂಲಕ ಶುಭ ಹಾರೈಸಿದರು.

ಗುರುವಾರ ನಂದವಾಡಗಿ ಶ್ರೀಮಠದಲ್ಲಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನೀ ಇರುವಲ್ಲಿ ನೀರು ಇರುತ್ತದೆ. ನೀರು ಇದ್ದಲ್ಲಿ ನೀ ಇರುವುದು ಅಷ್ಟೆ ಮುಖ್ಯ. ಕಾರಣ ರೈತರ ಜಮೀನುಗಳಿಗೆ ನೀರು ಹರಿಯುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದರಿಂದ, ಪ್ರತಿಯೋರ್ವ ರೈತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಯಾವುದೆ ಊರು, ರೈತರಿಗೆ ಅನುಕೂಲವಾಗುತ್ತಿದ್ದರು ಕೂಡ ಅದು ರೈತ ಸಂಕುಲಕ್ಕೆ ಎಂಬ ಮನೋಭಾವ ನಮ್ಮಲ್ಲಿ ಮೂಡಿಬರಲಿ ಎಂದರು.

ಈಗಾಗಲೆ ಕೃಷ್ಣಾ ಹಿನ್ನೀರು ಬಳಸಿಕೊಂಡು ಅದಕ್ಕೆ ನಂದವಾಡಗಿ ಏತ ನೀರಾವರಿ ಯೋಜನೆ ಎಂದು ಹೆಸರು ಇಟ್ಟುಕೊಂಡಿರುವುದು ತಮಗೆ ಹರ್ಷ ತಂದಿದೆ. ಈಗಾಗಲೆ ಸರ್ವೆ ಕಾರ್ಯ ನಡೆದಿರುವುದು ತಮ್ಮ ಗಮನಕ್ಕೆ ಬಂದಿದೆ. ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ಒತ್ತಡ ಹೇರಲು ರೈತರಲ್ಲಿ ಜಾಗೃತಿ ಮೂಡಿಸುತ್ತಿರುವ ಈ ಹೋರಾಟ ಜಯಶಾಲಿಯಾಗಲಿ. ಹೆಚ್ಚು ಸಂಖ್ಯೆಯಲ್ಲಿ ರೈತರು ಬೆಂಬಲಿಸುವಂತೆ ಕರೆ ನೀಡಿದರು.

ಸಜ್ಜಲಗುಡ್ಡದ ದೊಡ್ಡಬಸವಾಚಾರ್ಯ ಶರಣರು, ಹುನಕುಂಟಿಯ ಶರಣಯ್ಯ ತಾತ ಸಾರಥ್ಯ ವಹಿಸಿದ್ದರು. ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಮುಖಂಡರಾದ ಸಿದ್ರಾಮಪ್ಪ ಸಾಹುಕಾರ, ಲಿಂಗರಾಜ ಭೂಪಾಲ, ಬಸವಂತರಾಯ ಕುರಿ, ಎಚ್.ಬಿ ಮುರಾರಿ, ಶರಣಗೌಡ ಬಸಾಪೂರ, ರಮೇಶ ಶಾಸ್ತ್ರಿ, ಅಮರಣ್ಣ ಗುಡಿಹಾಳ ಸೇರಿದಂತೆ ಅಚ್ಚುಕಟ್ಟು ವ್ಯಾಪ್ತಿ ಪ್ರದೇಶದ ನೂರಾರು ರೈತ ಮುಖಂಡರು ಪಾಲ್ಗೊಂಡಿದ್ದರು.
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.