ADVERTISEMENT

ಪಿಯು ಪರೀಕ್ಷೆ ಅವ್ಯವಸ್ಥೆ: ಪರದಾಟ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 6:25 IST
Last Updated 16 ಮಾರ್ಚ್ 2012, 6:25 IST

ದೇವದುರ್ಗ: ಇಲ್ಲಿನ ಎರಡು ಪಿಯುಸಿ ದ್ವಿತೀಯ ಪರೀಕ್ಷಾ ಕೇಂದ್ರಗಳಿಗೆ ಅಗತ್ಯವಿರುವ ಕನಿಷ್ಠ ಮೂಲ ಸೌಕರ್ಯಗಳನ್ನು ಕಲ್ಪಿಸದಿರುವುದರಿಂದ ಪರೀಕ್ಷೆ ಆರಂಭದ ದಿನವಾದ ಗುರುವಾರ ನೂರಾರು ವಿದ್ಯಾರ್ಥಿಗಳು ಪರದಾಡಬೇಕಾಯಿತು.

ಸರ್ಕಾರಿ ಬಾಲಕರ ಪ್ರೌಢ ಶಾಲೆ ಮತ್ತು ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಮಾಡಲಾಗಿದೆ. ಇದರಲ್ಲಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಅವ್ಯವಸ್ಥೆಯಿಂದ ಕೂಡಿದ್ದರೂ ಅಧಿಕಾರಿಗಳು ಇದನ್ನು ಪರೀಕ್ಷಾ ಕೇಂದ್ರವನ್ನಾಗಿ ಮಾಡಿರುವುದಕ್ಕೆ ಪಾಲಕರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಡೆಸಿದ ಪರೀಕ್ಷಾ ಪೂರ್ವ ಸಿದ್ಧತೆ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪ್ರಮುಖವಾಗಿ ಮೂಲ ಸೌಕರ್ಯ ಹೊಂದಿರುವ ಪರೀಕ್ಷಾ ಕೇಂದ್ರ ಮತ್ತು ಕಟ್ಟುನಿಟ್ಟಾಗಿ ನಡೆಸಲು ಕೈಗೊಂಡ ಪ್ರಮುಖ ನಿರ್ಣಯಗಳು ಹುಸಿಯಾಗಿವೆ.

ಸದರಿ ಶಾಲೆಯ ಅವ್ಯವಸ್ಥೆ ಕುರಿತು ಸಂಬಂಧಿಸಿದ ಶಾಲೆಯ ಪ್ರಾಚಾರ್ಯರು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಪರೀಕ್ಷೆ ದಿನವಾದ ಗುರುವಾರದವರೆಗೂ ಅಗತ್ಯ ಸೌಕರ್ಯ ಕಲ್ಪಿಸದೆ ಇರುವುದರಿಂದ ಪರೀಕ್ಷೆ ಬರೆಯಲು ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಅವ್ಯವಸ್ಥೆಯ ನಡುವೆಯೇ ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅವ್ಯವಸ್ಥೆ: ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಕೊಠಡಿ, ಡೆಸ್ಕ್, ಮೇಲ್ವಿಚಾರಕರು, ಕುಡಿಯುವ ನೀರು, ವಿದ್ಯುತ್ ಇಲ್ಲದಿರುವ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯನ್ನು ಪರೀಕ್ಷಾ ಕೇಂದ್ರವನ್ನಾಗಿ ಮಾಡಿರುವುದು  ಇಲಾಖೆಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಈ ಶಾಲಾ ಕಟ್ಟಡದಲ್ಲಿ ಗುರುವಾರ ನಡೆದ ಇತಿಹಾಸ ಪರೀಕ್ಷೆಯಲ್ಲಿ 438ರ 367 ವಿದ್ಯಾರ್ಥಿಗಳು ಹಾಜರಾಗಿದ್ದರು.

ಇರುವ ಏಳು ಕೊಠಡಿಗಳಲ್ಲಿ ಅನಿವಾರ್ಯವಾಗಿ 15 ಬ್ಲಾಕ್‌ಗಳನ್ನು ಮಾಡಿಕೊಂಡು ಪ್ರತಿ ಡೆಸ್ಕ್‌ನಲ್ಲಿ ಮೂವರು ವಿದ್ಯಾರ್ಥಿಗಳನ್ನು ಕೂರಿಸಿ ಪರೀಕ್ಷೆ ನಡೆಸಲಾಯಿತು.

ಕೊರತೆ: ಪರೀಕ್ಷೆಯ ಆರಂಭದ ದಿನವೇ ಸಮಸ್ಯೆ ಎದುರಾಗಿದ್ದು, ಮುಂದಿನ ವಿಷಯಗಳ ಪರೀಕ್ಷೆಗೆ ಇನ್ನಷ್ಟು ವಿದ್ಯಾರ್ಥಿಗಳು ಹಾಜರಾಗುವ ಸಂಭವ ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಇನ್ನೂ 10 ಕೊಠಡಿ, 70ರಿಂದ 80 ಡೆಸ್ಕ್, 15 ಕೊಠಡಿ ಮೇಲ್ವಿಚಾರಕರು, ಕುಡಿಯುವ ನೀರು ಮತ್ತು ಕೊಠಡಿಗಳಿಗೆ ವಿದ್ಯುತ್ ಅವಶ್ಯಕತೆ ಇದೆ ಎಂದು ಕಾಲೇಜಿನ ಪ್ರಾಚಾರ್ಯ ಹಾಗೂ ಪರೀಕ್ಷೆಯ ಮುಖ್ಯ ಅಧೀಕ್ಷಕ ಪ್ರಶಾಂತ `ಪ್ರಜಾವಾಣಿ~ಗೆ ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.