ADVERTISEMENT

ಪ್ರಗತಿ ಕಾಮಗಾರಿಗಳಲ್ಲಿ ಹಸ್ತಕ್ಷೇಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 7:10 IST
Last Updated 3 ಫೆಬ್ರುವರಿ 2011, 7:10 IST

ದೇವದುರ್ಗ: ಅರಕೇರಾ ಗ್ರಾಮದ ಜನತೆಗೆ ಜಲ ನಿರ್ಮಲ ಯೋಜನೆ ಅಡಿಯಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿಗೆ ತರಲಾಗಿದ್ದರೂ ಸ್ಥಳೀಯ ಮಾಜಿ ಸಚಿವರು ಕಾಮಗಾರಿಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಿರುವುದರಿಂದ ಕಾಮಗಾರಿ ನೆನೆಗುದಿಗೆ ಬೀಳಲು ಮುಖ್ಯ ಕಾರಣ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರ ನಾಯಕ ಆರೋಪಿಸಿದರು.

ಅರಕೇರಾದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ, ಸಂಸದರ ಮತ್ತು ಶಾಸಕರ ಅನುದಾನದಲ್ಲಿ ಸುಮಾರು 8 ಕೋಟಿ ರೂಪಾಯಿಯಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದರಲ್ಲಿ 5 ಕೋಟಿ ರೂಪಾಯಿ ಕಾಮಗಾರಿಗಳು ಮುಗಿದಿವೆ. ಉಳಿದವು ಪ್ರಗತಿಯಲ್ಲಿವೆ ಎಂದರು.

ಮಾಜಿ ಸಚಿವರು ವಿನಾ ಕಾರಣ ಕಾಮಗಾರಿಗಳಲ್ಲಿ ಹಸ್ತಕ್ಷೇಪ ಮಾಡಿ ಅವನ್ನು ತಡೆ ಹಿಡಿಯುವ ಪ್ರಯತ್ನ ಮಾಡಿದ್ದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ದೂರಿದರು.

ತಾಲ್ಲೂಕಿನ ಕೊತ್ತದೊಡ್ಡಿ ಮತ್ತು ಇತರ ಐದು ಗ್ರಾಮ ಹಾಗೂ ಮುಷ್ಟೂರು- ಇತರ ಐದು ಗ್ರಾಮಗಳಿಗೆ ನಂಜುಂಡಪ್ಪ ವರದಿ ಆಧಾರದ ಮೇಲೆ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದರೂ ಅಲ್ಲಿಯೂ ಮಾಜಿ ಸಚಿವರ ದುರುದ್ದೇಶದಿಂದ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಕ್ಯಾದಿಗೇರಾ ಗ್ರಾಮಕ್ಕೆ ತುಂಗಭದ್ರಾ ಕಾಲುವೆಯಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರಿನ ಯೋಜನೆಗಾಗಿ ಸುಮಾರು ಮೂರು ಕೋಟಿ ರೂಪಾಯಿ ನೀಡಲಾಗಿದ್ದರೂ ಅದು ಸಹ ನೆನಗುದಿಗೆ ಬೀಳಲು ಕೆಟ್ಟ ರಾಜಕೀಯವೇ ಕಾರಣ ಎಂದು ಆಪಾದಿಸಿದರು.

ಹಿನ್ನಡೆ ಶಾಶ್ವತವಲ್ಲ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯನ್ನು ಒಪ್ಪಿಕೊಂಡ ಅವರು, ಹಿನ್ನಡೆ ಶಾಶ್ವತವಲ್ಲ.  ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ತಾಲ್ಲೂಕಿನ ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಅತಿ ಹೆಚ್ಚು ಸ್ಥಾನ ಪಡೆಯುವ ಮೂಲಕ ವಿರೋಧ ಪಕ್ಷಗಳಿಗೆ ಹಿನ್ನಡೆಯಾಗಿರುವುದನ್ನು ಕಂಡಿದ್ದೇವೆ. ತಾಲ್ಲೂಕಿನಲ್ಲಿ ಮುಂದೆ ಪಕ್ಷ ಬಲಿಷ್ಠ ಪಕ್ಷವಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಬಸ್ಸಯ್ಯ ಶಾಖೆ, ಭೀಮನಗೌಡ ನಾಗಡದಿನ್ನಿ, ಮುಖಂಡರಾದ ಡಾ. ಎಚ್.ಎನ್. ನಾಡಗೌಡ, ಹುಸೇನಸಾಬ ನಿಲವಂಜಿ, ಡಾ. ಮಾಜೀದ್ ಚಿಂಚೋಳಿಕರ್, ಮೌನಪ್ಪ ನಾಯಕ ಕ್ಯಾದಿಗೇರಾ, ಬಾಪೂಗೌಡ ಪಾಟೀಲ, ಸಿ. ರಮೇಶ, ಲಕ್ಷ್ಮಣ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

ಸಮಾವೇಶದ ಅಂಗವಾಗಿ ಮೆರವಣಿಗೆ
ಸಿಂಧನೂರು: ನಗರದ ಆರ್.ಜಿ.ಎಂ.ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಿಂದೂ ವಿರಾಟ್ ಸಮಾವೇಶದ ಅಂಗವಾಗಿ ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲದ ವರೆಗೂ ಶೋಭಾಯಾತ್ರೆ ಹಾಗೂ ಧ್ವಜ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ನಗರದ ಕಿತ್ತೂರು ಚೆನ್ನಮ್ಮ,ಬಸವೇಶ್ವರ ಹಾಗೂ ಗಾಂಧಿ ಸರ್ಕಲ್, ಬಡಿಬೇಸ್, ನಟರಾಜ ಕಾಲೊನಿಯ ರಸ್ತೆಗಳ ಮೂಲಕ ಕೆಂಪು ಬಣ್ಣದ ಧ್ವಜ ಹಿಡಿದು ಹಿಂದೂಪರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದ ನೂರಾರು ಕಾರ್ಯಕರ್ತರು ಕೊನೆಯಲ್ಲಿ ಆರ್.ಜಿ.ಎಂ. ಶಾಲಾ ಮೈದಾನದಲ್ಲಿ ಸಮಾವೇಶಗೊಂಡರು. ಶಿವ ಮತ್ತು ಭಾರತ ಮಾತೆಯ ಚಿತ್ರಗಳನ್ನು ತೆರೆದ ವಾಹನಗಳಲ್ಲಿಟ್ಟು ಮೆರೆಸಲಾಯಿತು. ವಿವಿಧ ವಾದ್ಯಗಳು ಮೊಳಗಿದವು.

ಎಸ್.ಎಲ್. ಭಟ್, ಮಧ್ವರಾಜ ಅಚ್ಚಡಕರ್, ಎಂ.ಕೆ. ಗೌರಕರ್, ಶಂಕ್ರಯ್ಯ ಶೆಟ್ಟಿ, ವೆಂಕಟೇಶ ಉದ್ಬಾಳ, ವೆಂಕಟೇಶ ಕೆಂಗಲ್, ನಿರುಪಾದೆಪ್ಪ ಜೋಳದರಾಶಿ, ಗುರುರಾಜ ಜಹಗೀರದಾರ, ಹನುಮೇಶ ವಾಲೇಕಾರ, ಪ್ರಾಣೇಶ ದೇಶಪಾಂಡೆ ಮತ್ತಿತರರು ಮೆರವಣಿಗೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.