ADVERTISEMENT

ಪ್ರತ್ಯೇಕ ಸಮಾವೇಶಗಳಿಗೆ ಅವಕಾಶ ಇಲ್ಲ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 5:52 IST
Last Updated 12 ಜುಲೈ 2017, 5:52 IST
ಲಿಂಗಸುಗೂರು ಪಟ್ಟಣದ ಬೈಪಾಸ್‌ ರಸ್ತೆಯಲ್ಲಿ ಮಾದಿಗ ಹೋರಾಟ ಸಮಿತಿ ಸಮಾವೇಶದ ಜಾಗವನ್ನು ಮಂಗಳವಾರ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ನೇತೃತ್ವದ ತಂಡ ಪರಿಶೀಲಿಸಿತು
ಲಿಂಗಸುಗೂರು ಪಟ್ಟಣದ ಬೈಪಾಸ್‌ ರಸ್ತೆಯಲ್ಲಿ ಮಾದಿಗ ಹೋರಾಟ ಸಮಿತಿ ಸಮಾವೇಶದ ಜಾಗವನ್ನು ಮಂಗಳವಾರ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ನೇತೃತ್ವದ ತಂಡ ಪರಿಶೀಲಿಸಿತು   

ಲಿಂಗಸುಗೂರು: ‘ಸ್ಥಳೀಯ ವಿಸಿಬಿ ಕಾಲೇಜು ಮೈದಾನದಲ್ಲಿ ಜುಲೈ 13ರಂದು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಇದೇ ಸಂದರ್ಭದಲ್ಲಿ ಇತರರು ಪ್ರತ್ಯೇಕ ಸಮಾವೇಶ ನಡೆಸಲು ಅವಕಾಶ ನೀಡುವುದಿಲ್ಲ’ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ತಿಳಿಸಿದರು.

ಮಂಗಳವಾರ ಮಾತನಾಡಿದ ಅವರು, ಜುಲೈ 13ರಂದು ಬೆಳಗ್ಗೆ ಮುಖ್ಯಮಂತ್ರಿಗಳು ತೊಂಡಿಹಾಳ ಬಳಿ ನಂದವಾಡಗಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ ಪಟ್ಟಣದಲ್ಲಿ ಆಯೋಜಿಸಿರುವ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವ ವೇಳಾಪಟ್ಟಿ ಬಂದಿದೆ. ಹೀಗಾಗಿ ಪೂರ್ವಭಾವಿಯಾಗಿ ಸ್ಥಳ ಪರಿಶೀಲಿಸಲಾಗಿದೆ’ ಎಂದರು

‘ಜುಲೈ 13ರಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸಂಬಂಧಿಸಿ ಪ್ರತ್ಯೇಕ ಸಮಾವೇಶ ನಡೆಸಲು ತೀರ್ಮಾನಿಸಿತ್ತು. ಸಮಾವೇಶಕ್ಕೆ ಮುಖ್ಯಮಂತ್ರಿಗಳು ಭಾಗವಹಿಸಬೇಕು ಎಂದು ಆಗ್ರಹಿಸಿತು. ಆದರೆ, ಸಮಾವೇಶಗೆ ಒಪ್ಪಿಗೆ ನೀಡಿಲ್ಲ. ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಅವಕಾಶ ಇದೆ’ ಎಂದರು.

ADVERTISEMENT

ದೇವದುರ್ಗ ಶಾಸಕ ಶಿವನಗೌಡ ನಾಯಕ ನೇತೃತ್ವದಲ್ಲಿ ಆ ಕ್ಷೇತ್ರದ ಜನತೆ ಅಭಿವೃದ್ಧಿ ಕುರಿತಂತೆ ಪ್ರತಿಭಟನೆ ನಡೆಸಲು ಲಿಂಗಸುಗೂರಿಗೆ ಬರುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ, ‘ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಬಹುದು. ಆದರೆ,  ಪ್ರತಿಭಟನೆಗೆ ಅವಕಾಶ ಇಲ್ಲ’ ಎಂದರು.

ಈಗಾಗಲೆ ಹಲ್ಕಾವಟಗಿ ಸರ್ಕಾರಿ ಪ್ರೌಢಶಾಲೆ ಮತ್ತು ಲಿಂಗಸುಗೂರು ಜೂನಿಯರ್‌ ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್‌ ವ್ಯವಸ್ಥೆ ಮಾಡಲಾಗಿದೆ ಎಂದರು. ಪೊಲೀಸ್‌ ವರಿಷ್ಠಾಧಿಕಾರಿ ನಿಷಾಜೇಮ್ಸ್‌, ಉಪ ವಿಭಾಗಾಧಿಕಾರಿ ದಿವ್ಯಾ ಪ್ರಭು, ಡಿವೈಎಸ್ಪಿ ಎಸ್‌.ಎಚ್‌. ಸುಬೇದಾರ, ಸಿಪಿಐ ವಿ.ಎಸ್‌. ಹಿರೇಮಠ, ತಹಶೀಲ್ದಾರ್‌ ಶಿವಾನಂದ ಸಾಗರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಂದ್ರಕುಮಾರ, ದಲಿತ ಮುಖಂಡ ಎಚ್‌.ಬಿ. ಮುರಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.