ADVERTISEMENT

ಬಣ್ಣದಲ್ಲಿ ಮಿಂದೆದ್ದ ಜನರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 10:18 IST
Last Updated 1 ಏಪ್ರಿಲ್ 2013, 10:18 IST

ಕುಕನೂರು:  ಪ್ರತಿ ವರ್ಷದ ಸಂಪ್ರದಾಯದಂತೆ ಹೋಳಿ ಹುಣ್ಣಿಮೆ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಓಕುಳಿಯನ್ನು ಸಡಗರ-ಸಂಭ್ರಮದಿಂದ ಶಾಂತಿಯುತವಾಗಿ ಆಚರಿಸಲಾಯಿತು.

ಕೋಳಿಪೇಟೆಯ ರಾಘವಾನಂದ ಮಠದಿಂದ ಹೊರಟ ಹೋಳಿ ಬಂಡಿ ಶಿರೂರ ವೀರಭದ್ರಪ್ಪ ವರ್ತುಳದ ವರೆಗೂ ಸಾಗಿತು. ಈ ನಡುವೆ ಹಲವಾರು ರೈತರು ತಮ್ಮ ಎತ್ತುಗಳನ್ನು ಶೃಂಗರಿಸಿಕೊಂಡು ಅದ್ಧೂರಿ ಮೆರವಣಿಗೆ ನಡೆಸಿದರು. ಹಳೆ ಬಜಾರ, ಕಿಲ್ಲೇದ ಓಣಿ, ಮುಖ್ಯ ಬಜಾರ, ಗಾಂಧಿನಗರ, ಯಲಬುರ್ಗಾ-ಕೊಪ್ಪಳ ಮುಖ್ಯರಸ್ತೆ ಸೇರಿದಂತೆ ಎಲ್ಲೆಡೆ ಓಕುಳಿ ಹಬ್ಬ ರಂಗುನಿಂದ ಕೂಡಿತ್ತು. ಯುವಕರು, ಮಕ್ಕಳು ವಿವಿಧ ಬಣ್ಣದಲ್ಲಿ ಮಿಂದು ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅದೂ ಸಾಲದೆಂಬಂತೆ ಹಲವು ಯುವಕರು ಗ್ರೀಸ್, ಆಯಿಲ್, ಮೊಟ್ಟೆ ಒಡೆದು ಒಬ್ಬರಿಗೊಬ್ಬರು ಎರಚಾಡುತ್ತಿದ್ದರು.

ಓಕುಳಿ ಇದ್ದ ಸಂಗತಿ ತಿಳಿದ ಬಹುತೇಕ ವ್ಯಾಪಾರಸ್ಥರು, ನೌಕರರು ಬಣ್ಣದಿಂದ ತಪ್ಪಿಸಿಕೊಳ್ಳಲು ಬೆಳಗಿನ ಹೊತ್ತಿಗೆ ಅಜ್ಞಾತ ಸ್ಥಳಕ್ಕೆ ಹೋಗುತ್ತಿದ್ದರು. ಸಾರಿಗೆ ಸಂಸ್ಥೆ ವಾಹನ ಸಂಚಾರ ಬಹುತೇಕ ಕಡಿಮೆಯಾಗಿತ್ತು. ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೇ ಹೆಚ್ಚಾಗಿ ಕಂಡುಬಂದರು. ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪೊಲೀಸ್ ಇಲಾಖೆ ಅಧಿಕಾರಿಗಳು ಆಗಿಂದಾಗ್ಗೆ ನಗರದ ತುಂಬೆಲ್ಲಾ ಮಿಂಚಿನ ಸಂಚಾರ ಕೈಗೊಂಡು ಬಣ್ಣದಾಟದಲ್ಲಿ ತೊಡಗಿದವರನ್ನು ಎಚ್ಚರಿಸುತ್ತಿದ್ದರು.

ಬೆಳಗಿನಿಂದ ಮಧ್ಯಾಹ್ನದ ವರೆಗೂ ಬಣ್ಣದಾಡ ಜೋರಾಗಿತ್ತು. ಅಲ್ಲೊಂದು ಇಲ್ಲೊಂದು ಅಂಗಡಿ ತೆರೆದಿದ್ದನ್ನು ಹೊರತುಪಡಿಸಿದರೆ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದರಿಂದಾಗಿ ಎಲ್ಲೆಡೆ ಬಂದ್ ವಾತಾವರಣ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.