ADVERTISEMENT

ಬದುಕಿನ ಅನುಭವದಿಂದ ಬರವಣಿಗೆ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಮರೇಶ ನುಗಡೋಣಿ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:24 IST
Last Updated 30 ಮಾರ್ಚ್ 2018, 9:24 IST
ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗುರುವಾರದಿಂದ ಆಯೋಜಿಸಿರುವ ಎರಡು ದಿನಗಳ ಕಾವ್ಯಕಮ್ಮಟವನ್ನು ಹಿರಿಯ ಸಾಹಿತಿ ಜಿ.ಪಿ. ಬಸವರಾಜ ಉದ್ಘಾಟಿಸಿ ಮಾತನಾಡಿದರು
ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಗುರುವಾರದಿಂದ ಆಯೋಜಿಸಿರುವ ಎರಡು ದಿನಗಳ ಕಾವ್ಯಕಮ್ಮಟವನ್ನು ಹಿರಿಯ ಸಾಹಿತಿ ಜಿ.ಪಿ. ಬಸವರಾಜ ಉದ್ಘಾಟಿಸಿ ಮಾತನಾಡಿದರು   

ರಾಯಚೂರು: ಬರಹಗಾರನ ಬದುಕಿನ ಅನುಭವ ವಿಸ್ತಾರವಾದಂತೆ ಬರೆಯುವ ಕಥೆಗಳಲ್ಲಿ ಹೊಸತನ ಬರುತ್ತದೆ. ಬರವಣಿಗೆ ಮತ್ತು ಬದುಕು ಬೇರೆಬೇರೆಯಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಮರೇಶ ನುಗಡೋಣಿ ಅಭಿಪ್ರಾಯಪಟ್ಟರು.

ನಗರದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಹೈದರಾಬಾದ್‌ ಕರ್ನಾಟಕ ಭಾಗದ ಯುವ ಕಥೆಗಾರರಿಗಾಗಿ ಗುರುವಾರದಿಂದ ಏರ್ಪಡಿಸಿದ ಎರಡು ದಿನಗಳ ‘ಸಣ್ಣ ಕಥೆಗಳ ಕಥನ ಮಾದರಿಯ ಕಥಾ ಕಮ್ಮಟ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಬರವಣಿಗೆಯು ಚಿಂತನಾ ಕ್ರಮ ಆಗಿರುವುದರಿಂದ ಅದನ್ನು ಪೋಷಿಸಿ ಬೆಳೆಸಲು ಚಿಂತನಾ ಕ್ರಮದಲ್ಲಿ ವಿಭಿನ್ನತೆ ಮಾಡಿಕೊಳ್ಳಬೇಕು. ಕಥೆಯ ಸ್ವರೂಪವನ್ನು ಮನಸ್ಸಿನಲ್ಲೆ ಸೃಷ್ಟಿಸಿಕೊಳ್ಳಬೇಕು. ಇದರಿಂದ ಯಾವುದೇ ಗೊಂದಲ ಇರುವುದಿಲ್ಲ ಎಂದರು.

ADVERTISEMENT

ಕಥೆಯ ರಚನೆಯನ್ನು ಮೊದಲೇ ಆಲೋಚನೆ ಮಾಡಿಕೊಳ್ಳದಿದ್ದರೆ; ಕಥೆಯನ್ನು ಮುಕ್ತಾಯಗೊಳಿಸುವುದಕ್ಕೆ ಗೊಂದಲವಾಗುತ್ತದೆ. ಕಥೆಯ ಆರಂಭ ಸುಲಭವಾಗಿ ಯೋಚಿಸುವಂತೆ, ಮುಕ್ತಾಯವನ್ನೂ ಯೋಚನಾಕ್ರಮದಲ್ಲಿ ಅಳವಡಿಸಿಕೊಳ್ಳಬೇಕು. ಕಥೆಯ ಮಾದರಿ ಸಂಪೂರ್ಣವಾಗಿದ್ದಾಗ ಸನ್ನಿವೇಶ ಹಾಗೂ ಪಾತ್ರಗಳು ಸಂದರ್ಭಾನುಸಾರ ಬರುತ್ತವೆ. ಕಥಾವಸ್ತುವಿನಲ್ಲಿ ಪಾತ್ರಗಳು ಸೇರಿಕೊಳ್ಳುತ್ತವೆ. ಇದರಿಂದ ಕಥೆಯು ಇಡಿಯಾಗಿ ಕಾಣಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಕಮ್ಮಟ ಉದ್ಘಾಟಿಸಿ ಸಾಹಿತಿ ಜಿ.ಪಿ.ಬಸವರಾಜ ಮಾತನಾಡಿ, ಏಕಾಂತ ಹಾಗೂ ಶೂನ್ಯ ಭಾವದಲ್ಲಿ ತುಂಬಾ ವ್ಯತ್ಯಾಸವಿದೆ. ಏಕಾಂತದಲ್ಲಿ ಕಥೆಗಳನ್ನು ಬರೆಯುವುದಕ್ಕೆ ಸಾಧ್ಯವಾಗುತ್ತದೆ. ಆದರೆ, ಶೂನ್ಯದಲ್ಲಿ ಭಾವದಲ್ಲಿ ಕಥೆಗಳು ಶೂನ್ಯ ಸ್ವರೂಪದಲ್ಲಿ ಹೊಮ್ಮುತ್ತವೆ. ಸಮಾಜದ ಜನರೊಂದಿಗೆ ಬೆರೆತು ಬದುಕುವುದರಿಂದ ತುಂಬಾ ಸಹಜವಾಗಿ ಕಥೆಗಳು ಹುಟ್ಟಿಕೊಳ್ಳುತ್ತವೆ. ಅದನ್ನು ಸೂಕ್ಷ್ಮವಾಗಿ ಗಮನಿಸುವ ಮನೋ ಭೂಮಿಕೆ ಕಥೆಗಾರರಿಗೆ ಇರಬೇಕು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಪ್ರತಿ ಕ್ಷೇತ್ರದ ವ್ಯಕ್ತಿಗಳು ಹಾಗೂ ಘಟನೆಗಳಿಗೆ ಕಥೆಗಾರರು ಮುಖಾಮುಖಿ ಆಗಬೇಕು. ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಸಂಗೀತ ಎಲ್ಲದರಲ್ಲೂ ಒಂದಿಷ್ಟು ಮಾಹಿತಿ ಗೊತ್ತಿರಬೇಕು. ಸಮಾಜದ ಜನರೊಂದಿಗೆ ಒಡನಾಟದಿಂದ ಈ ಅನುಭವ ಸುಲಭವಾಗಿ ದಕ್ಕುತ್ತದೆ. ಸಾಹಿತ್ಯದ ಓದು, ಚಿಂತನಾಕ್ರಮದಿಂದಲೂ ಬೇರೆ ಬೇರೆ ಕ್ಷೇತ್ರಗಳ ಅನುಭವ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶ್ರೀಧರ ಬಳಿಗಾರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಭೀಮನಗೌಡ ಇಟಗಿ, ಜೆ.ಎಸ್.ಈರಣ್ಣ, ಕಮ್ಮಟದ ಸಂಚಾಲಕ ಡಾ.ದಸ್ತಗೀರಸಾಬ್ ದಿನ್ನಿ ಇದ್ದರು.

**

ಪ್ರಬಂಧ ಹಾಗೂ ಕಥೆಗಳ ನಡುವೆ ತುಂಬಾ ತೆಳುವಾದ ಗೆರೆ ಉಳಿದುಕೊಂಡಿದೆ. ಈ ಭಾಗದಿಂದಲೂ ಪ್ರಭಾವ ಬೀರುವ ಕಥೆಗಳು ಬರುತ್ತಿವೆ.

-ಜಿ.ಪಿ.ಬಸವರಾಜ, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.