ADVERTISEMENT

ಬಯ್ಯಾಪೂರ ಕೊಡುಗೆ ಸ್ಮರಣೀಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 9:25 IST
Last Updated 20 ಜೂನ್ 2012, 9:25 IST

ಲಿಂಗಸುಗೂರ: ಲಿಂಗಸುಗೂರ ಕ್ಷೇತ್ರ ಸೇರಿದಂತೆ ರಾಯಚೂರು ಜಿಲ್ಲೆಗೆ ಶಾಸಕ ಅಮರೆಗೌಡ ಪಾಟೀಲ ಅವರ ಕೊಡುಗೆ ಸ್ಮರಣೀಯ. ಅಂತಹ ಅಭಿವೃದ್ಧಿಯ ಹರಿಕಾರರ ಬಗ್ಗೆ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ ಅವರು ಹಗುರವಾಗಿ ಮಾತನಾಡಿರುವುದು ವಿಷಾದನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ ಶಾಸಕ ಮಾನಪ್ಪ ವಜ್ಜಲರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಯ್ಯಾಪೂರ ಅವರ 13 ವರ್ಷಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ ಶೈಕ್ಷಣಿಕ ಮತ್ತು ಹಸಿರು ಕ್ರಾಂತಿಯನ್ನೆ ನಡೆಸಲಾಗಿದೆ. ಶಾಲಾ ಕಾಲೇಜುಗಳ ಮಂಜೂರು, ನಾರಾಯಣಪುರ ಬಲದಂಡೆ ನಾಲೆ, ರಾಂಪೂರ ಏತ ನೀರಾವರಿ, ಮಸ್ಕಿ ನಾಲಾ ಯೋಜನೆ ಪುನಶ್ಚೇತನದಂತಹ ಹತ್ತು ಹಲವು ಯೋಜನೆ ನೀಡಿದ್ದಾರೆ. ರಸ್ತೆಗಳ ಅಭಿವೃದ್ಧಿ, ಸೇತುವೆ ನಿರ್ಮಾಣ, ಆರೋಗ್ಯ ಕೇಂದ್ರಗಳ ಸ್ಥಾಪನೆ, ಕುಡಿಯುವ ನೀರು, ವಸತಿ ನಿಲಯಗಳ ಹೆಚ್ಚಳ ಸೇರಿದಂತೆ ಮಹಾನ್ ಕೊಡುಗೆ ನೀಡಿರುವ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ, ಜಿ.ಪಂ ಸದಸ್ಯ ಭೂಪನಗೌಡ ಕರಡಕಲ್ಲ, ಶಾಸಕ ಬಯ್ಯಾಪೂರ ಮಾಡಿದಂತಹ ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ.

ಶಾಸಕ ವಜ್ಜಲರು ರಾಜಕೀಯ ದೊಂಬರಾಟದಲ್ಲಿ ಜನತೆಗೆ ಮೋಸ ಮಾಡುವ ಮೂಲಕ ಯಾವ ಪಕ್ಷದಲ್ಲಿದ್ದೇವೆ ಎಂಬುದು ತಿಳಿಯದೇ ಹಿಂದಿನ ಶಾಸಕರ ಬಗ್ಗೆ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಶೇಖರ ಐದನಾಳ, ಜಿಪಂ ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಣ್ಣ ವಾರದ, ಮುಖಂಡರಾದ ಮಲ್ಲಪ್ಪ ಹಂದ್ರಾಳ, ಸುರೇಶ ಪಾಟೀಲ, ಎಂ.ಡಿ. ರಫಿ, ಬಸನಗೌಡ ಪಾಟೀಲ, ಚೆನ್ನಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.