ADVERTISEMENT

ಬಿಜೆಪಿ ಧಿಕ್ಕರಿಸಿ-ರಾಯರೆಡ್ಡಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 9:44 IST
Last Updated 24 ಏಪ್ರಿಲ್ 2013, 9:44 IST

ಯಲಬುರ್ಗಾ:  ಭ್ರಷ್ಟಾಚಾರ, ಅನಾಚಾರ ಹಾಗೂ ಅತ್ಯಾಚಾರದಂತೆ ಹೇಯ ಕೃತ್ಯಗಳ ಖ್ಯಾತಿ ಬಿಜೆಪಿಯ ಕೆಲ ಶಾಸಕರು ಹಾಗೂ ಸಚಿವರು ಸೇರಿದಂತೆ ಸುಮಾರು 22ಜನರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿವೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕರು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಕೆಲವರು ಜಾಮೀನಿನ ಮೇಲೆ ಹೊರಗಡೆ ಬಂದಿದ್ದು, ಮತ್ತೆ ಕೆಲವರು ಇನ್ನೂ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಇಂತವರನ್ನೊಳಗಂಡ ಬಿಜೆಪಿಗೆ ಯಾವುದೇ ಕಾರಣಕ್ಕೂ ಬೆಂಬಲಿಸಬಾರದು ಎಂದು ಮಾಜಿ ಸಂಸದ ಬಸವರಾಜ ರಾಯರೆಡ್ಡಿ ಹೇಳಿದರು.

ತಾಲ್ಲೂಕಿನ ಕರಮುಡಿ, ಕಾತ್ರಾಳ, ಶಿರಗುಂಪಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸೋಮವಾರ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದ ಅವರು, ಅಗ್ಗದ ಪ್ರಚಾರಮಾಡಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಿಯಾಗಿ ಆಡಳಿತ ನಡೆಸಲು ಸಾಧ್ಯವಾಗದೇ ಬರೀ ಆಂತರಿಕ ಕಚ್ಚಾಟ, ಅಧಿಕಾರ ದುರ್ಬಳಕೆ, ಅಕ್ರಮ ಹಣ ಸಂಪಾದನೆಯಲ್ಲಿಯೇ ಮುಳುಗಿ ಜನರ ಹಿತವನ್ನು ಸಂಪೂರ್ಣವಾಗಿ ಮರೆತೆ ಬಿಟ್ಟಿತ್ತು.

ಸಾಲದೇ ಈಗ ಬಿಎಸ್‌ಆರ್, ಕೆಜೆಪಿ ಹಾಗೂ ಬಿಜೆಪಿ ಎಂಬ ಮೂರು ಹೋಳಾಗಿ ಛಿತ್ರಗೊಂಡಿದೆ. ಇವೇ ಧೋರಣೆಗಳನ್ನು ಹೊಂದಿರುವ ಜೆಡಿಎಸ್ ಪಕ್ಷವನ್ನು ಕೂಡಾ ಬುಡಸಮೇತ ಕಿತ್ತುಹಾಕಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಭಾರಿ ಬೆಂಬಲದೊಂದಿಗೆ ಅಧಿಕಾರಕ್ಕೆ ತರುವ ಜವಾಬ್ದಾರಿ ಕ್ಷೇತ್ರದ ಜನತೆಯ ಮೇಲಿದೆ ಎಂದರು.

ಅಕ್ರಮ ಗಣಿಗಾರಿಕೆಯಲ್ಲಿ ಸುಮಾರು 20ಸಾವಿರ ಕೋಟಿಯಷ್ಟು ಅಕ್ರಮವೆಸಗಿ ರಾಜ್ಯದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದ ಬಿಜೆಪಿಯವರಿಗೆ ಮತ್ತೆ ಅಧಿಕಾರ ಕೊಟ್ಟರೆ ಇಡೀ ರಾಜ್ಯವನ್ನೆ ಸರ್ವನಾಶ ಮಾಡಿಬಿಡುತ್ತಾರೆ, ಈಗಲೇ ಜನತೆ ಜಾಗೃತಿಗೊಳ್ಳದೇ ಹೋದರೆ ಮುಂದಿನ ಪೀಳಿಗೆಗೆ ಏನನ್ನು ಕೊಡಲು ಸಾಧ್ಯವಾಗುವುದಿಲ್ಲ, ಹಣಕೊಟ್ಟು ಮತದಾರರರನ್ನು ಖರೀದಿಸುತ್ತಿರುವ ಬಿಜೆಪಿಗೆ ಕ್ಷೇತ್ರದಲ್ಲಿ ತಕ್ಕಪಾಠ ಕಲಿಸಬೇಕಾಗಿದೆ.

ವಾಮಮಾರ್ಗ ಅನುಸರಿಸಿ ಮನೆಮುರುಕುತನದ ಪ್ರವೃತಿಯನ್ನು ಮೈಗೂಡಿಸಿಕೊಂಡು ಈ ಜನಪ್ರತಿನಿಧಿಯಾಗಲು ಹೊರಟಿರುವ ಕೆಲ ಅಭ್ಯರ್ಥಿಗಳ ಬಣ್ಣದ ಮಾತುಗಳಿಗೆ ಮರುಳಾಗಬೇಡಿ, ಆಮೀಷಗಳಿಗೆ ಬಲಿಯಾಗಿ ಆತ್ಮವಂಚನೆಗೆ ಗುರಿಯಾಗದೇ ಅಭಿವೃದ್ಧಿಗೆ ಬದ್ಧರಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲಿಸಿ ಸ್ವಚ್ಛ ಹಾಗೂ ಜನಪರ ಆಡಳಿತಕ್ಕಾಗಿ ಅನುಕೂಲ ಮಾಡಿಕೊಡುವಂತೆ ಜನರಲ್ಲಿ ಮನವಿ ಮಾಡಿದರು.

ಕೆಪಿಸಿಸಿ ಸದಸ್ಯ ಬಸವರಾಜ ಉಳ್ಳಾಗಡ್ಡಿ, ಮುಖಂಡ ವೀರನಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ ಸೇರಿದಂತೆ ಅನೇಕರು ಮಾತನಾಡಿದರು. ಮುಖಂಡರಾದ ಸಂಗಣ್ಣ ತೆಂಗಿನಕಾಯಿ, ಹನಮಂತರಾವ್ ದೇಸಾಯಿ, ಬಸವರಾಜ ಕರೆಂಡಿ, ಟೋಪಣ್ಣ ನಾಯಕ, ಬಿ.ಎಂ. ಶಿರೂರು, ಮೌಲಾಹುಸೇನ ಬುಲ್ಡಿಯಾರ, ಸಂಗಪ್ಪ ವದ್ನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.