ADVERTISEMENT

‘ಬಿಜೆಪಿ ಮಿಷನ್ 150 ಹುಸಿ’

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 11:24 IST
Last Updated 12 ಅಕ್ಟೋಬರ್ 2017, 11:24 IST

ದೇವದುರ್ಗ: ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಎಲ್ಲ ವರ್ಗದ ಧ್ವನಿಯಾಗುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳಿವೆ. ಬಿಜೆಪಿ ಮಿಷನ್‌ 150 ಹುಸಿಯಾಗಲಿದೆ’ ಎಂದು ದೇವದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಉಸ್ತುವಾರಿ ಅಂಭಾರಾವ್‌ ಬೆಳಕೊಟ್ಟೆ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಬಿಜೆಪಿ ಸರ್ಕಾರದ ವೈಫಲ್ಯವನ್ನು ಜನರಿಗೆ ಮುಟ್ಟಿಸುವುದಕ್ಕಾಗಿಯೇ ಮನೆ ಮನೆಗೆ ಕಾಂಗ್ರೆಸ್‌ ಎಂಬ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಜನರ ಒಲವು ಇದೆ. ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಗೊಳಿಸುವ ಮೂಲಕ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಸಾಮಾನ್ಯ ಜನರು ಬದುಕುವುದಕ್ಕೆ ಕಷ್ಟವಾಗಿದೆ. ಇದನ್ನು ಪಕ್ಷದ ಸಾಧನೆ ಎಂದು ಹೇಳಿಕೊಳ್ಳುವ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

ಮುಂದಿನ ದಿನಗಳಲ್ಲಿ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸುವ ಮೂಲಕ 2018ರ ಚುನಾವಣೆಗೆ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದಕ್ಕಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಶ್ರಮಿಸುವಂತೆ ಕರೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ಪಕ್ಷದ ಮುಖಂಡರಲ್ಲಿ ಗುಂಪುಗಾರಿಕೆ ಇರುವುದು ನಿಜ. ಇದು ಎಲ್ಲ ಪಕ್ಷದಲ್ಲಿ ಸಾಮಾನ್ಯ, ಆದರೆ ಇದು ಅತಿಯಾಗಬಾರದು. ಈಗಾಗಲೇ ಮುಖಂಡರ ಅಶಿಸ್ತು ಮತ್ತು ಗುಂಪುಗಾರಿಕೆ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ಹೋಗಿದೆ. ಸಂಬಂಧಿಸಿದವರಿಗೆ ನೊಟೀಸ್‌ ಜಾರಿಗೊಳಿಸಲಾಗಿದ್ದು, ಇದಕ್ಕೂ ಸರಿ ಹೋಗದಿದ್ದರೆ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳುತ್ತದೆ’ ಎಂದರು.

ಮುಖಂಡರಾದ ರಾಜಶೇಖರ ನಾಯಕ, ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಅಕ್ಕಮಾಹದೇವಿ, ಸುರೇಶ ನಾಯಕ, ಶಿವನಗೌಡ ಗೌರಂಪೇಟೆ, ಇಕ್ಬಾಲ್‌ಸಾಬ್ ಹೌದೊಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.