ADVERTISEMENT

ಬಿಜೆಪಿ ಸರ್ಕಾರ ವಜಾಕ್ಕೆ ಆಗ್ರಹಿಸಿ ದಸಂಸ ಹೋರಾಟ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 6:10 IST
Last Updated 11 ಫೆಬ್ರುವರಿ 2012, 6:10 IST

ರಾಯಚೂರು: ಆಡಳಿತರೂಢ ಬಿಜೆಪಿ ಸರ್ಕಾರವು ಮೂರನ್ನು ಬಿಟ್ಟ ಭಂಡತನದಿಂದ ವರ್ತಿಸುತ್ತಿದೆ. ಮತ ಪಡೆಯಲು ಹಣದ ಆಮಿಷ,ಜನಪ್ರತಿನಿಧಿಗಳನ್ನೇ ಖರೀದಿ ಮಾಡಿ ರಾಜ್ಯವನ್ನೇ ಹಾಳು ಮಾಡಿದೆ. ಮೂರು ವರ್ಷ ಅಧಿಕಾರದಲ್ಲಿ ಇದ್ದುದೇ ತನ್ನ ಸಾಧನೆ ಎಂಬಂತೆ ತೋರಿಸಿಕೊಳ್ಳುತ್ತಿದೆ.
 
ಈ ಸರ್ಕಾರ ವಜಾಕ್ಕೆ ಒತ್ತಾಯಿಸುವ ಹೋರಾಟದ ಭಾಗವಾಗಿ ಇದೇ 14ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಶಾಂತಪ್ಪ ದೊಡ್ಡಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹಗರಣದಲ್ಲಿಯೇ ಕಾಲ ಹರಣ ಮಾಡಿದೆ.  ರಸಗೊಬ್ಬರ ಕೇಳಿದ ರೈತ ಸಮುದಾಯದ ಮೇಲೆ ದೌರ್ಜನ್ಯ ನಡೆಸಿ ಗೋಲಿಬಾರ್ ಮಾಡಿದೆ. ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನು ಕಿತ್ತುಕೊಳ್ಳುವ ಹುನ್ನಾರವನ್ನು ನಿರಂತರ ಮಾಡುತ್ತಿದೆ. ಡಿ ನೋಟಿಫಿಕೇಶನ್ ಮೂಲಕ ಜಮೀನು ಕಬಳಿಸುತ್ತಿದೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಸಿದೆ. ಗೋ ಹತ್ಯೆ ನಿಷೇಧದ ಪ್ರಸ್ತಾಪಿಸಿದ ಸರ್ಕಾರ ಕಾನೂನು ಪ್ರಕಾರ ಕ್ರಮ ಜರುಗಿಸದೇ ಅಲ್ಪಸಂಖ್ಯಾತರ ಮೇಲೆ ನೇರ ದಾಳಿಗೆ ಕುಮ್ಮಕ್ಕು ನೀಡುತ್ತ ಬಂದಿದೆ. ಧಾರ್ಮಿಕ ಅಲ್ಪಸಂಖ್ಯಾತರ, ದಲಿತರ ಆಹಾರದ ಹಕ್ಕನ್ನು ಹಾಳು ಮಾಡುವ ಪ್ರಯತ್ನ ಮಾಡಿದೆ ಎಂದು ಆಪಾದಿಸಿದರು.

ಮಹಿಳೆಯರ ಬಗ್ಗೆ ಗೌರವ ಹೊಂದಿರುವ ಪಕ್ಷ ಎಂದು ಹೇಳಿಕೊಂಡ ಬಿಜೆಪಿಯ ಸಚಿವರೇ ಅಧಿವೇಶನದಲ್ಲಿ ಅಶ್ಲೆಲ ಚಿತ್ರ ವೀಕ್ಷಿಸಿದ್ದಾರೆ.  ಪ್ರವಾಹದಲ್ಲಿ ಮನೆ ಕಳೆದುಕೊಂಡ ಜನತೆಗೆ 3 ವರ್ಷ ಆದರೂ ಮನೆ ನಿರ್ಮಿಸಿ ಕೊಟ್ಟಿಲ್ಲ.

ಎಲ್ಲ ಸಮುದಾಯದ ವಿರೋಧಿಯಾದ ಬಿಜೆಪಿಯದ್ದು ವಚನಭ್ರಷ್ಟ ಸರ್ಕಾರ. ಈ ಸರ್ಕಾರ ಶೀಘ್ರ ತೊಲಗಬೇಕು. ಹಂತ ಹಂತವಾಗಿ ಸಂಘಟನೆ ಹೋರಾಟ ರೂಪಿಸಲಿದೆ ಎಂದು ಹೇಳಿದರು.
ವಿಭಾಗೀಯ ಸಂಚಾಲಕ ರವೀಂದ್ರನಾಥ ಪಟ್ಟಿ, ಈರಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.