ADVERTISEMENT

`ಬಿಜೆಪಿ ಹೀನಾಯವಾಗಿ ನಡೆಸಿಕೊಂಡಿತು'

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 7:49 IST
Last Updated 13 ಏಪ್ರಿಲ್ 2013, 7:49 IST

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಬಿಜೆಪಿ ಕೇಳುವವರೇ ಇರಲಿಲ್ಲ. ಆ ದಿನಗಳಿಂದ ಪಕ್ಷ ಕಟ್ಟಿ ಬೆಳೆಸಿದ ತಮ್ಮನ್ನು ಈಗ ಬಿಜೆಪಿ ಹೀನಾಯವಾಗಿ ನಡೆಸಿಕೊಂಡಿದೆ. ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ತಮಗೆ ಟಿಕೆಟ್ ತಪ್ಪಲು ಬಿಜೆಪಿ ರಾಷ್ಟ್ರೀಯ ಮುಖಂಡ ಅನಂತಕುಮಾರ ಹಾಗೂ ದೇವದುರ್ಗ ಶಾಸಕ ಕೆ ಶಿವನಗೌಡ ನಾಯಕ ಅವರೇ ಕಾರಣ. ಆ ಪಕ್ಷದ ಇಂಥ ಧೋರಣೆಗೆ ನೊಂದು ಆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲಿಗರೊಂದಿಗೆ ಸೇರ್ಪಡೆಗೊಂಡಿರುವುದಾಗಿ ಮಾಜಿ ಶಾಸಕ ಎ ಪಾಪಾರೆಡ್ಡಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಕಳೆದ 10ರಂದು ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿ ಆ ಪಕ್ಷದ ಅಧ್ಯಕ್ಷರಿಗೆ ರವಾನಿಸಿದ್ದಾಗಿ ಹೇಳಿದರು.

1994ರಲ್ಲಿ ಬಿಜೆಪಿ ಸದಸ್ಯತ್ವ ಪಡೆದು ಸಕ್ರಿಯ ಕಾರ್ಯಕರ್ತರಾಗಿ ನಗರ ಮತ್ತು ಜಿಲ್ಲಾ ಘಟಕಗಳಲ್ಲಿ ಪ್ರಮುಖ ಜವಾಬ್ದಾರಿ ಪಡೆದು ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಿದ್ದೆ. 1996ರಲ್ಲಿ ಪ್ರಪ್ರಥಮವಾಗಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ 19000 ಮತ ಪಡೆದು ಪಕ್ಷದ ಶಕ್ತಿ ಪ್ರದರ್ಶಿಸಿದ್ದೆ. 2000ರಲ್ಲಿ ಸ್ಪರ್ಧಿಸಿ 28,000 ಮತ ಪಡೆದು ಎರಡನೇ ಸ್ಥಾನದಲ್ಲಿದ್ದೆ. 2004ರಲ್ಲಿ 35,000 ಮತ ಪಡೆದು ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಿಜೆಪಿ ಶಾಸಕನಾಗಿ ಹೊರ ಹೊಮ್ಮಿದ್ದೆ ಎಂದು ವಿವರಿಸಿದರು.

2008ರಲ್ಲಿ ಕೆಲವೇ ಮತ ಅಂತರದಲ್ಲಿ ಪರಾಭವಗೊಂಡಿದ್ದ ನಾನು ಈ ಬಾರಿ ಮತ್ತೆ ಪಕ್ಷದ ಟಿಕೆಟ್ ಕೇಳಿದ್ದೆ. ನಗರಸಭೆ ಚುನಾವಣೆಯಲೂ 7 ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರನ್ನು ಗೆಲ್ಲಿಸಿದ್ದೆ. ಇಷ್ಟೆಲ್ಲ ಪಕ್ಷಕ್ಕೆ ಕೆಲಸ ಮಾಡಿದ ತಮಗೆ ಟಿಕೆಟ್ ಕೊಡದೇ ಒಬ್ಬ ನಗರಸಭೆ ಚುನಾವಣೆಯಲ್ಲೂ ಸ್ಪರ್ಧಿಸಿ ಗೆಲ್ಲುವ ಶಕ್ತಿ ಇಲ್ಲದ ತ್ರಿವಿಕ್ರಮ ಜೋಶಿಗೆ ಟಿಕೆಟ್ ನೀಡಲಾಗಿದೆ. ಇದು ತೀವ್ರ ಬೇಸರ ತಂದಿದೆ. ಈ ಬೆಳವಣಿಗೆಯಿಂದ ಮಾನಸಿಕವಾಗಿ ನೊಂದು ಬಿಜೆಪಿ ಪಕ್ಷ ತೊರೆದಿದ್ದಾಗಿ ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಲ್ಹಾದ ಜೋಶಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾಗಿ ಹೇಳಿದರು.

ಮೂರು ಕಡೆ ಅಭ್ಯರ್ಥಿ ಗೆಲುವಿಗೆ ಪಣ: ದೇವದುರ್ಗ ವಿಧಾನಸಭಾ ಕ್ಷೇತ್ರ, ರಾಯಚೂರು ಗ್ರಾಮೀಣ, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಅವರ ಗೆಲುವಿಗೆ ಹಗಲಿರುಳು ಶ್ರಮಿಸಲಾಗುವುದು. ಕಾಂಗ್ರೆಸ್ ಪಕ್ಷ ಹೇಗೆ ನನ್ನನ್ನು ಬಳಸಿಕೊಳ್ಳುತ್ತದೋ ಆ ರೀತಿ ಪಕ್ಷಕ್ಕೆ ಒಳಿತು ಮಾಡುತ್ತೇನೆ ಎಂದರು.

ಬಿಜೆಪಿ ಪಕ್ಷ ಈಗ ಟಿಕೆಟ್ ನೀಡಿರುವ ತ್ರಿವಿಕ್ರಮ ಜೋಶಿ 1999ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ತಮಗೆ ಯಾವುದೇ ರೀತಿ ಬೆಂಬಲಿಸಲಿಲ್ಲ. ಬದಲಾಗಿ ಎಂ.ಎಸ್ ಪಾಟೀಲ್ ಪರ ಪ್ರಚಾರ ಮಾಡಿದ್ದರು. 2004 ಮತ್ತು 2008ರ ಚುನಾವಣೆಯಲ್ಲಿ ಎಂ ಈರಣ್ಣ ಪರ ಪ್ರಚಾರ ಮಾಡಿದ್ದರು. ಹೀಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು. ಅಂಥವರಿಗೆ ಈಗ ಟಿಕೆಟ್ ಕೊಡಲಾಗಿದೆ. ಬಿಜೆಪಿ ಪಕ್ಷದ ಏಳ್ಗೆಗೆ 20 ವರ್ಷ ಶ್ರಮಿಸಿದರೂ ಅಲ್ಲಿನ ಜನ ನನ್ನ ಬಗ್ಗೆ ವಿಶ್ವಾಸವಿಡಲಿಲ್ಲ. ಬೇರೆ ವ್ಯಕ್ತಿಯಾಗಿಯೇ ಕಂಡುಕೊಂಡು ಬಂದರು. ಈಗ ಅನಿವಾರ್ಯವಾಗಿ ಪಕ್ಷ ತೊರೆದಿದ್ದೇನೆ ಎಂದು ಹೇಳಿದರು.

ಎಪಿಎಂಸಿ ಉಪಾಧ್ಯಕ್ಷ ಬಾಬುರಾವ್, ಆರ್‌ಡಿಎ ಮಾಜಿ ಅಧ್ಯಕ್ಷ ಜಗನ್ನಾಥ ಕುಲಕರ್ಣಿ, ಗಿರಿಯಣ್ಣ, ಭೀಮರೆಡ್ಡಿ, ಶಶಿಧರ ಏಗನೂರು, ಪ್ರೇಮಲತಾ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.