ADVERTISEMENT

ಬೆಂಕಿರೋಗ ನಿರೋಧಕ ಬತ್ತದ ತಳಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 8:50 IST
Last Updated 13 ಸೆಪ್ಟೆಂಬರ್ 2011, 8:50 IST

ಧಾರವಾಡ: ರಾಜ್ಯದ ಮಲೆನಾಡು ಮತ್ತು ಉಷ್ಣ ಪರಿಸರ ಎರಡಕ್ಕೂ ಒಗ್ಗುವ ಮತ್ತು ಬೆಂಕಿರೋಗ ನಿರೋಧಕ ಗುಣ ಹೊಂದಿರುವ `ಮುಗದ ಸಿರಿ 1253~ ಹೆಸರಿನ ನೂತನ ಬತ್ತದ ತಳಿಯನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಧಾರವಾಡ ಸಮೀಪದ ಮುಗದದಲ್ಲಿರುವ ವಿವಿಯ ಭತ್ತ ಸಂಶೋಧನಾ ಕೇಂದ್ರದಲ್ಲಿ ನೂತನ ತಳಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ರಾಜ್ಯ ಕೃಷಿ ಇಲಾಖೆಯ ತಳಿ ಬಿಡುಗಡೆ ಸಮನ್ವಯ ಸಮಿತಿ ಹೊಸ ತಳಿಯ ಮಾರಾಟಕ್ಕೆ ಈಗಾಗಲೇ ಒಪ್ಪಿಗೆ ನೀಡಿದೆ.

ಕೇಂದ್ರ ಸರ್ಕಾರದ ಅನುಮೋದನೆಗಾಗಿ ದೆಹಲಿಯ ಭಾರತೀಯ ಭತ್ತ ಅಭಿವೃದ್ಧಿ ಸಮನ್ವಯ ಸಮಿತಿಗೆ ಕಳುಹಿಸಿಕೊಡಲಾಗಿದ್ದು, ಅದು ರಾಜ್ಯದ ಪರಿಸರಕ್ಕೆ ಮಾತ್ರ ಸೂಕ್ತವೋ ಅಥವಾ ಇತರೆ ರಾಜ್ಯಗಳಲ್ಲೂ ಬಳಕೆ ಮಾಡಬಹುದೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ, ನೂತನ ತಳಿಗೆ ಹೆಸರು ಸೂಚಿಸಿ ಅಧಿಸೂಚನೆ ಹೊರಡಿಸಲಿದೆ. ಮುಂದಿನ ಮುಂಗಾರು ಹಂಗಾಮಿನ ವೇಳೆಗೆ ರಾಜ್ಯ ಬೀಜ ನಿಗಮದ ಮೂಲಕ ರೈತರಿಗೆ ಮಾರಾಟ ಮಾಡಲಾಗುವುದು ಎಂದು ಕೃಷಿ ವಿವಿಯ ತಳಿ ಅಭಿವೃದ್ಧಿ ವಿಭಾಗದ ಹಿರಿಯ ವಿಜ್ಞಾನಿ ಡಾ.ಎನ್.ಜಿ.ಹನುಮರಟ್ಟಿ ಹೇಳುತ್ತಾರೆ.

ಸೋನಾ ಮಸೂರಿಗೆ ಪರ್ಯಾಯ: ಈಗಾಗಲೇ ಊಟದ ಅಕ್ಕಿಯಾಗಿ ಬಳಕೆಯಲ್ಲಿರುವ ಸೋನಾಮಸೂರಿಗೆ ಪರ್ಯಾಯವಾಗಿ ಅದೇ ಮಾದರಿಯ ಮುಗದ ಸಿರಿ ತಳಿಯನ್ನು ರೂಪಿಸಲಾಗಿದೆ ಎಂಬುದು ಹನುಮರಟ್ಟಿ ಅವರ ವಿವರಣೆ. ಶನಿವಾರ ಧಾರವಾಡ ಕೃಷಿ ಮೇಳದಲ್ಲಿ ಪ್ರಜಾವಾಣಿಯೊಂದಿಗೆ ಅವರು ಮಾತನಾಡಿದರು.

ಸಣ್ಣಕಾಳಿನ ಭತ್ತದ ತಳಿಯಾದ ಸೋನಾಮಸೂರಿಯನ್ನು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಗಂಗಾವತಿ, ಬಳ್ಳಾರಿ, ರಾಯಚೂರು ಹಾಗೂ ದಾವಣಗೆರೆ ಮುಂತಾದ ಉಷ್ಣಪ್ರದೇಶದಲ್ಲಿ ಹೆಚ್ಚಿನ ಇಳುವರಿ ನೀಡುತ್ತಿದ್ದ ಈ ತಳಿ, ಮಲೆನಾಡು ಹಾಗೂ ಕಾವೇರಿ ಜಲಾನಯನ ಭಾಗದಲ್ಲಿ ಅಷ್ಟೊಂದು ಯಶಸ್ವಿಯಾಗಿರಲಿಲ್ಲ.
 
ಇತ್ತೀಚಿನ ದಿನಗಳಲ್ಲಿ `ಪೈರಿಕುಲೇರಿಯಾ~ ಎಂಬ ಶಿಲಿಂಧ್ರದಿಂದ ಬರುವ ಬೆಂಕಿರೋಗ ಸೋನಾ ಮಸೂರಿ ತಳಿಯ ಬತ್ತಕ್ಕೆ ಬೇಸಿಗೆ ಹಾಗೂ ಮಳೆಗಾಲದ ಬೆಳೆಯ ಎರಡೂ ಅವಧಿಯಲ್ಲಿ ಭಾರಿ ಹಾನಿ ಮಾಡುತ್ತಿತ್ತು.

ಭತ್ತದ ಗರಿಗಳ ಮೇಲೆ ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಶಿಲೀಂಧ್ರದಿಂದಾಗಿ ಬೆಳೆ ಒಣಗಿ ಇಳುವರಿ ಕುಸಿದು ರೈತರು ನಷ್ಟ ಅನುಭವಿಸಬೇಕಾಗುತ್ತಿತ್ತು. ಇದಕ್ಕೆ ಪರಿಹಾರ ಹುಡುಕಲು ವಿವಿ ಮುಂದಾದಾಗ `ಮುಗದ ಸಿರಿ~ ಅಭಿವೃದ್ಧಿಯಾಯಿತು ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.