ADVERTISEMENT

ಭರ್ತಿಯಾಗದ ಅಣೆಕಟ್ಟೆ ಆತಂಕ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 9:15 IST
Last Updated 12 ಜುಲೈ 2012, 9:15 IST

ಲಿಂಗಸುಗೂರ: ಕಳೆದ ವರ್ಷ ಸಕಾಲಕ್ಕೆ ಮಳೆ ಬಾರದೆ ಹೋಗಿದ್ದರಿಂದ ಜಿಲ್ಲೆಯ ರೈತರು ಬರಗಾಲದ ಬಿಸಿ ಅನುಭವಿಸಿದ್ದಾರೆ. ನಾರಾಯಣಪುರ ಅಣೆಕಟ್ಟೆಯಲ್ಲಿ ಕೂಡ ನೀರಿನ ಅಭಾವದಿಂದ ಬೇಸಿಗೆ ಬೆಳೆ ಕೈಕೊಟ್ಟು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ಪ್ರಸಕ್ತ ವರ್ಷ ಕೂಡ ಮುಂಗಾರು ಮಳೆ ಬಾರದೆ ಹಳ್ಳ ಕೊಳ್ಳ, ಕೆರೆಗಳು, ಅಣೆಕಟ್ಟೆಗೆ ಒಳಹರಿವು ಬಾರದೆ ಬಣಗುಟ್ಟುತ್ತಿವೆ. ಭರ್ತಿಯಾಗದ ಅಣೆಕಟ್ಟೆಯಿಂದ ರೈತರು ಮತ್ತೊಂದು ಬರದತ್ತ ಹೆಜ್ಜೆ ಹಾಕುವಂತಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮುಂಗಾರು ಮಳೆ ಆಶ್ರಿತ ರೈತರು ಇಂದಿಗೂ ಭೂಮಿಯನ್ನು ಬಿತ್ತನೆಗೆ ಹದ ಮಾಡಿಕೊಂಡಿಲ್ಲ. ಭಾಗಶಃ ನೀರಾವರಿ ಪ್ರದೇಶದಲ್ಲಿ ಬೆಳೆ ಕಾಣುತ್ತಿವೆ ಎಂಬ ಕನಸು ಸಾಕಾರಗೊಳ್ಳುವ ಆಸೆಗಳು ಕ್ಷೀಣಿಸುತ್ತಿವೆ. ನಾರಾಯಣಪುರ ಬಲದಂಡೆ ನಾಲೆ, ಮಸ್ಕಿ ನಾಲಾ ಯೋಜನೆ, ರಾಂಪೂರ ಏತ ನೀರಾವರಿ, ಜಲದುರ್ಗ ಏತ ನೀರಾವರಿ ಸೇರಿದಂತೆ ಇತರೆ ನೀರಾವರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾವದಿಂದ ಬತ್ತಿ ಬರಿದಾಗಿರುವುದು ರೈತರ ಕಣ್ಣಲ್ಲಿ ನೀರು ತರಿಸುವಂತಾಗಿದೆ ಎಂಬುದು ರೈತರ ಅಂಬೋಣ.

ನಾರಾಯಣಪುರ ಅಣೆಕಟ್ಟೆ ನೀರಿನ ಗರಿಷ್ಠ ಮಟ್ಟ 492.252ಮೀ., ಆದರೆ, ಅಣೆಕಟ್ಟೆಯಲ್ಲಿ ಸಧ್ಯ ಕೇವಲ 485.950ಮೀ ಮಾತ್ರ ಸಂಗ್ರಹಗೊಂಡಿದೆ. ಕಳೆದ ವರ್ಷ ಈ ದಿನಕ್ಕೆ 487.520ಮೀ. ನೀರು ಸಂಗ್ರಹಗೊಂಡಿತ್ತು. ಕಳೆದ ವರ್ಷದ ನೀರಿನ ಮಟ್ಟ ಓಲಿಸಿದರೆ ಅಂದಾಜು 2ಮೀ. ನೀರಿನ ಕೊರತೆ ಎದ್ದು ಕಾಣುತ್ತಿದೆ. ಈಗಿರುವ ನೀರಿನಿಂದ ಮುಖ್ಯ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ. 485.500ಮೀ.ಗೆ ನೀರಿನ ಹರಿವು ತಟಸ್ಥಗೊಳ್ಳುತ್ತದೆ ಎಂದು ಅಣೆಕಟ್ಟೆ ಮೂಲಗಳು ದೃಢಪಡಿಸಿವೆ.

ಆಲಮಟ್ಟಿ ಅಣೆಕಟ್ಟೆಯಲ್ಲಿ ಕೂಡ 519ಮೀ. ನೀರು ಸಂಗ್ರಹಗೊಳ್ಳಬೇಕು. ಅಲ್ಲಿ ಸಧ್ಯದಲ್ಲಿ ಕೇವಲ 507ಮೀ. ಮಟ್ಟದಷ್ಟು ನೀರು ಸಂಗ್ರಹವಿದೆ. ಹೀಗಾಗಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ಸಾಧ್ಯವಾಗುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಆಗಲಿ ಎಂದು ತಾವು ಕೂಡ ಪ್ರಾರ್ಥಿಸುವುದಾಗಿ ಎಇಇ ಆರ್.ಎಲ್. ಹಳ್ಳೂರು ಹೇಳಿಕೊಂಡಿದ್ದಾರೆ.

ಮಳೆ ಆಗದೆ ರೈತರು ಮುಗಿಲು ನೋಡುವಂತಾಗಿದೆ. ನೀರಾವರಿ ಪ್ರದೇಶಗಳಿಗೂ ಕೂಡ ಮುಂಗಾರು ಹಂಗಾಮಿನ ಬಿತ್ತನೆಗೆ ನೀರು ಹರಿಸುವ ಸಾಧ್ಯತೆಗಳು ಕಾಣುತ್ತಿಲ್ಲ. ಸಂದಿಗ್ಧತೆಗೆ ಸಿಲುಕಿರುವ ರೈತರು ಮತ್ತೊಂದು ಬರಗಾಲದ ಕರಿ ನೆರಳಿನ ಸುಳಿಗೆ ಸಿಲುಕುತ್ತಿದ್ದಾರೆ. ಸರ್ಕಾರ ಇಂತಹ ಸಂಕಷ್ಟ ಸ್ಥಿತಿಯಲ್ಲಿ ಅಧಿಕಾರದ ಕುರ್ಚಿಗೆ ಬಡೆದಾಡದೆ ರೈತರ ನೋವು, ನಲಿವುಗಳಿಗೆ ಸ್ಪಂದಿಸಬೇಕು. ಮೋಡ ಬಿತ್ತನೆಯಂತ ತುರ್ತು ವ್ಯವಸ್ಥೆಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಆಗ್ರಹಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.