ರಾಯಚೂರು: ಭವಿಷ್ಯ ನಿಧಿ ತಮಗೆ ಮರಳಿ ಕೊಡಿಸಬೇಕು ಎಂದು ಒತ್ತಾಯಿಸಿ ಭವಿಷ್ಯ ನಿಧಿ ಪ್ರಾದೇಶಿಕ ಆಯುಕ್ತ ಕಚೇರಿ (ಇಪಿಎಫ್) ಎದುರು ಇಲ್ಲಿನ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(ಒಪೆಕ್) ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಮತ್ತು ಸಂಘದ ಪ್ರತಿನಿಧಿಗಳು ಶುಕ್ರವಾರ ಧರಣಿ ನಡೆಸಿದರು.
ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಒಪೆಕ್)ಯ 80ಜನ ಡಿ ಗ್ರೂಪ್ ನೌಕರರಿಂದ 4 ವರ್ಷ ಕಾಲ ಭವಿಷ್ಯ ನಿಧಿ ಮೊತ್ತವನ್ನು ಗುತ್ತಿಗೆದಾರ ಏಜೆನ್ಸಿ ಎಸ್.ಆರ್ ಎಂಟರಪ್ರೈಸಿಸ್ ಕಡಿತ ಮಾಡಿದ್ದು, ಗುತ್ತಿಗೆ ಕಂಪೆನಿಯು ಕಾರ್ಮಿಕನ ಭವಿಷ್ಯ ನಿಧಿ ವೈಯಕ್ತಿಕ ಖಾತೆಗೆ ಜಮಾ ಮಾಡಿಲ್ಲ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ತಮ್ಮ ಭವಿಷ್ಯ ನಿಧಿ ತಮಗೆ ಪುನಃ ನೀಡಬೇಕು ಎಂದರು.
2008 ರಿಂದ 2012ರವರೆಗೆ ನಾಲ್ಕು ವರ್ಷ ಕಾಲ ಪ್ರತಿಯೊಬ್ಬ ಕಾರ್ಮಿಕರ ವೇತನದಿಂದ ಆರಂಭದಲ್ಲಿ 250, 270 ಹಾಗೂ 350 ರೂಪಾಯಿ ಭವಿಷ್ಯ ನಿಧಿಯನ್ನು ಎಸ್.ಆರ್ ಎಂಟರ್ ಪ್ರೈಸಿಸ್ ಗುತ್ತಿಗೆದಾರ ಕಂಪೆನಿ ಕಡಿತಗೊಳಿಸಿದೆ. ಪ್ರತಿಯೊಬ್ಬ ಕಾರ್ಮಿಕರ ಸಂಬಳದಿಂದ ಹತ್ತು ಸಾವಿರ ಕಡಿತವಾಗಿದೆ. ಇದರಷ್ಟೇ ಅಂದರೆ ಹತ್ತು ಸಾವಿರ ಮೊತ್ತವನ್ನು ಕಂಪೆನಿ ಜಮಾ ಮಾಡಬೇಕು. ಆದರೆ, ಕಾರ್ಮಿಕರ ವೈಯಕ್ತಿಕ ಖಾತೆಗೆ ಎಸ್.ಆರ್ ಎಂಟರಪ್ರೈಸಿಸ್‌ನ ಪ್ರೊ. ರವಿ ಜಮಾ ಮಾಡಿಲ್ಲ ಎಂದು ಸಮಸ್ಯೆ ವಿವರಿಸಿದರು.
ಈ ಕಂಪೆನಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. 80 ಜನ ಡಿ ಗ್ರೂಪ್ ನೌಕರರ ವೈಯಕ್ತಿಕ ಖಾತೆಗೆ ಭವಿಷ್ಯ ನಿಧಿ ಮೊತ್ತ ಜಮಾ ಮಾಡಿಕೊಡಬೇಕು, ಭವಿಷ್ಯ ನಿಧಿ ಮೊತ್ತ ಪಾವತಿಸದೇ ಇರುವ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು. ಅಧಿಕಾರಿಗಳ ಜತೆಗಿನ ಚರ್ಚೆ ಬಳಿಕ 15 ದಿನ ಗಡುವು ನೀಡಿ ಧರಣಿ ಹಿಂದಕ್ಕೆ ಪಡೆದರು. ಸಂಘದ ಗೌರವ ಅಧ್ಯಕ್ಷ ಆರ್ ಮಾನಸಯ್ಯ, ಕಾರ್ಯಕಾರಿ ಸಮಿತಿ ಸದಸ್ಯ ಟಿ ಮಲ್ಲೇಶ, ಎನ್ ಕುಮಾರ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.