ADVERTISEMENT

ಭೂಸ್ವಾಧೀನ ಪ್ರಕ್ರಿಯೆ ಅಸಿಂಧು: ಆರೋಪ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 7:50 IST
Last Updated 8 ಮಾರ್ಚ್ 2012, 7:50 IST

ರಾಯಚೂರು: ಬಾಪನಯ್ಯ ಭೂ ಸ್ವಾಧೀನ ಪ್ರಕ್ರಿಯೆ ಅಸಿಂಧುಗೊಳ್ಳಲು ನಗರಸಭೆಯ ಆಡಳಿತ ಮಂಡಳಿಯೇ ನೇರ ಹೊಣೆಯಾಗಿದೆ ಎಂದು ನವರತ್ನ ಯುವಕ ಸಂಘದ ಗೌರವಾಧ್ಯಕ್ಷ ಕೆ.ಪಿ ಅನಿಲಕುಮಾರ, ಅಧ್ಯಕ್ಷ ಚಂದ್ರು ಭಂಡಾರಿ, ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಹರಿಜನವಾಡ ಪ್ರದೇಶದ ನಾಗರಿಕರು, ಅನೇಕ ವರ್ಷಗಳಿಂದ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಮಣಿದ ನಗರಸಭೆ  ಈ ಪ್ರದೇಶದ ಜನರಿಗೆ ಶೌಚಾಲಯ ನಿರ್ಮಾಣದ ಉದ್ದೇಶದಿಂದ ಸರ್ವೆ ನಂಬರ್ 1,1/1 ಮತ್ತು1/2ರಲ್ಲಿ ಬರುವ ಒಟ್ಟು 1ಎಕರೆ 30ಗುಂಟೆ ಪ್ರದೇಶದ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ನಗರಸಭೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಎಂದು ವಿವರಿಸಿದ್ದಾರೆ.

2010ರಲ್ಲಿ ನೋಟಿಫಿಕೇಶನ್ ಜಾರಿಗೊಳಿಸಿ,6-1ರ ನೋಟಿಫಿಕೇಶನ್‌ಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ನಗರಸಭೆ ಭೂಸ್ವಾಧೀನಕ್ಕೆ ಮಾತ್ರ ಮಂಜೂರಾತಿ ನೀಡಿ ಶೌಚಾಲಯದ ನಿರ್ಮಾಣಕ್ಕೆ ಮಾತ್ರ ಆಡಳಿತಾತ್ಮಕ ಅನುಮೋದನೆ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸಹಾಯಕ ಆಯುಕ್ತರಿಗೆ ನಗರಸಭೆ ಆಡಳಿತಾತ್ಮಕ ಅನುಮೋದನೆ ಪಡೆದ ಪ್ರತಿಯನ್ನು ಸಲ್ಲಿಸಲು ಸೂಚಿಸಿದ್ದರು. ಕಂದಾಯ ಕಾರ್ಯದರ್ಶಿಗಳ ಪತ್ರವನ್ನು ಆಧಾರವಿಟ್ಟುಕೊಂಡು ನಗರಸಭೆಗೆ ಅನೇಕ ಪತ್ರವ್ಯವಹಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಪತ್ರವ್ಯವಹಾರಗಳ ಬಗ್ಗೆ ನಗರಸಭೆ ಆಡಳಿತ ಮಂಡಳಿ ಅನುಮೋದನೆ ನೀಡಲಿಲ್ಲ. ಈ ಬಗ್ಗೆ ನವರತ್ನ ಯುವಕ ಸಂಘವು ಈ ಕಡತ ಅಸಿಂಧುಗೊಳ್ಳುವ ಮೊದಲೇ ಆಡಳಿತಾತ್ಮಕ ಮಂಜೂರಾತಿಗಾಗಿ ನಗರಸಭೆ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಹಾಗೂ ಹಿರಿಯ ಸದಸ್ಯರಾದ ಜಯಣ್ಣ ಅವರಿಗೆ ಸಾಕಷ್ಟು ಬಾರಿ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.

ವಾಸ್ತವಿಕವಾಗಿ ನಗರಸಭೆಯಿಂದ ಯಾವುದೇ ರೀತಿಯ ಪ್ರಸ್ತಾವನೆಗಳನ್ನು ಪೌರಾಡಳಿತ ನಿರ್ದೇಶನಾಲಯ ಸಲ್ಲಿಸಿರುವುದಿಲ್ಲ. ಇದರಿಂದ ಶೌಚಾಲಯದ ನಿರ್ಮಾಣ ಭೂಸ್ವಾಧೀನ ಪ್ರಕ್ರಿಯೆ ಅಸಿಂಧುಗೊಳ್ಳಲು ನಗರಸಭೆ ನೇರೆ ಹೊಣೆಯಾಗಿದೆ ಎಂದು ಹೇಳಿದ್ದಾರೆ.

ಹರಿಜನವಾಡದ ನಿವಾಸಿಗಳು ಇದೇ 11ರಂದು ಸಭೆ ನಡೆಸಿ ನಂತರ ನಗರಸಭೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.