ADVERTISEMENT

ಭ್ರಷ್ಟಾಚಾರ ಬೇರು ಕಿತ್ತು ಹಾಕಿ: ಕೋ. ಚೆನ್ನಬಸಪ್ಪ

ರಾಯಚೂರು: ಜನಸಂಗ್ರಾಮ ಪರಿಷತ್ ಪ್ರಥಮ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2014, 10:01 IST
Last Updated 9 ಫೆಬ್ರುವರಿ 2014, 10:01 IST

ರಾಯಚೂರು: ಭ್ರಷ್ಟಾಚಾರ ಎಂಬುದು ಸರ್ವಾಂತರ್ಯಾಮಿ, ಅಗೋಚರ, ಯಾರ ಕೈಗೂ ಸಿಗದೇ ಇರುವ ‘ಬ್ರಹ್ಮ ರಾಕ್ಷಸ’. ಇದು ಭಯಾನಕ ಸ್ವರೂಪ ಪಡೆದಿರುವುದಕ್ಕೆ ಮನುಷ್ಯನಲ್ಲಿನ ದುಷ್ಪಪ್ರವೃತ್ತಿ, ಶಾಸನಗಳ ಉಲ್ಲಂಘನೆ ಮನೋಭಾವ ಕಾರಣವಾಗಿದೆ. ಇದೇ ಸ್ಥಿತಿ ಮುಂದುವರಿದರೆ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಮೇಲೆ ಜನರಿಗೆ ನಂಬಿಕೆ ಕಡಿಮೆ ಆಗುತ್ತದೆ. ಸಂವಿಧಾನ ಕುಸಿದು ಬೀಳುತ್ತದೆ. ಅದರ ಪರಿಣಾಮ ಊಹಿಸುವುದು ಕಷ್ಟ ಎಂದು ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ಎಚ್ಚರಿಕೆ ನೀಡಿದರು.

ಇಲ್ಲಿನ ಪಂಡಿತ ಸಿದ್ದರಾಮ ಜಂಬಲ­ದಿನ್ನಿ ರಂಗಮಂದಿರದಲ್ಲಿ ಶನಿವಾರ ನಡೆದ ಜನಸಂಗ್ರಾಮ ಪರಿಷತ್ ಪ್ರಥಮ ರಾಜ್ಯ ಸಮ್ಮೇಳನ ಮತ್ತು ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರದ ಮೇಲ್ಮಟ್ಟದ ‘ಚಿಗುರು’ ಚಿವುಟಿದರೆ ಸಾಲದು ತಳ­ಮಟ್ಟ­ದಲ್ಲಿರುವ ‘ಬೇರು’ ಕಿತ್ತು ಹಾಕಬೇಕು. ಭ್ರಷ್ಟಾಚಾರ ಬ್ರಹ್ಮರಾಕ್ಷಸ­ನನ್ನು ಕಟ್ಟಿ ಕೂಡಿಹಾಕುವ ಜನಸಂ­ಗ್ರಾಮ ಪರಿಷತ್ ಸಂಚಾಲಕ ಎಸ್.­ಆರ್. ಹಿರೇಮಠ ಅವರ ಪ್ರಯತ್ನಕ್ಕೆ ಸಮಾಜದ ಒಳ್ಳೆಯ ಮನಸ್ಸಿನ ಜನ ಕೈ ಜೋಡಿಸಬೇಕು ಎಂದು ನುಡಿದರು.

ಭ್ರಷ್ಟಾಚಾರ ಎಂಬುದು ಇಂದು ನಿನ್ನೆಯದಲ್ಲ. ಇದಕ್ಕೆ ಶತ ಶತಮಾನಗಳ ಇತಿಹಾಸವೇ ಇದೆ. ಚಾಣಕ್ಯನ ಅರ್ಥ­ಶಾಸ್ತ್ರದಲ್ಲೂ ಭ್ರಷ್ಟಾಚಾರದ ಪ್ರಸ್ತಾಪ­ವಿದೆ. 400 ವರ್ಷಗಳ ಹಿಂದೆ ಕಾನೂನು ರಚನೆ ಮಾಡಿದ ಅಲ್ಲಿನ ಶ್ರೇಷ್ಠ ನ್ಯಾಯಾಧೀಶರೊಬ್ಬರೂ ಭ್ರಷ್ಟಾ­ಚಾರದ ಆರೋಪ ಹೊತ್ತಿದ್ದರು.

ವಿಚಾರಣೆ ಸಂದರ್ಭದಲ್ಲಿ ತಾವು ಭ್ರಷ್ಟ ಎಂಬುದನ್ನು ಒಪ್ಪಿದ್ದರು. ‘ನಾನು ಸಮಾ­ಜದ ಒಂದು ಅಂಗ. ಸಮಾಜವೇ ಭ್ರಷ್ಟ­ವಾಗಿದ್ದರೆ ನಾನು ಹೇಗೆ ಒಳ್ಳೆಯವ­ನಾಗಿರಲು ಸಾಧ್ಯ’ ಎಂಬ ವಿವರಣೆ ನೀಡಿದ್ದರು ಎಂದು ವಿವರಿಸಿದರು.

ನಮ್ಮ ದೇಶದಲ್ಲೂ ಭ್ರಷ್ಟಾಚಾರ ನಿರ್ಮೂಲನೆ, ಶಾಸನ ಉಲ್ಲಂಘನೆ ತಡೆಯಲು ಕಾಯ್ದೆ ತಿದ್ದುಪಡಿ ಮೇಲಿಂದ ಮೇಲಿಂದ ಮೇಲೆ ಆಗಿವೆ. ಆದರೆ, ಭ್ರಷ್ಟಾಚಾರ ಪ್ರಕರಣ ಸಂಖ್ಯೆ ಹೆಚ್ಚುತ್ತ ಈಗ ‘ಬ್ರಹ್ಮರಾಕ್ಷಸ’ ಸ್ವರೂಪ ಪಡೆದಿದೆ. ಅದರ ನಿರ್ಮೂಲನೆ ಆಗದ ಹೊರತು ದೇಶದ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದರು.


ಗ್ರಾಮ ಪಂಚಾಯಿತಿ ಸದಸ್ಯರ­ವರೆಗೂ, ಬಿಸಿಯೂಟ ಯೋಜನೆ ಅನುಷ್ಠಾನ ಕಾರ್ಯದಲ್ಲಿ ಭ್ರಷ್ಟಾಚಾರ ಕೈ ಚಾಚಿದೆ.  ಬಿಸಿಯೂಟಕ್ಕೆ ಉತ್ತಮ ಅಕ್ಕಿ, ಎಣ್ಣೆ, ಬೇಳೆ ಕಳುಹಿಸಿದರೆ ಒಳ್ಳೆಯ ಅಕ್ಕಿ ಕಾಳಸಂತೆಗೆ ಹೋಗಿ ಕೆಟ್ಟ ಅಕ್ಕಿ ಬಿಸಿಯೂಟಕ್ಕೆ ಬಳಕೆ ಮಾಡಿದ ಘಟನೆ ನಡೆದಿವೆ ಎಂದು ಉದಾಹರಿಸುವ ಮೂಲಕ ಭ್ರಷ್ಟಾಚಾರದ ಮಜಲು­ಗಳನ್ನು ಬಿಚ್ಚಿಟ್ಟರು.

ಮನುಷ್ಯ ಸರಿ ಹೋದರೆ ಪ್ರಪಂಚ ಸರಿ ಹೋಗುತ್ತದೆ. ಮಹಾತ್ಮ ಗಾಂಧಿ ಅವರೂ ಹೇಳಿದ್ದು ಇದನ್ನೇ. ಅಭಿವೃದ್ಧಿ ಎಂದರೆ 80 ಮಹಡಿಯ ಕಟ್ಟಡ ನಿರ್ಮಾಣವಲ್ಲ. ಜನರ ಮನಸ್ಸಿನಲ್ಲಿ ಬದಲಾವಣೆ ಆಗಬೇಕು. ಒಳ್ಳೆಯ ಮನುಷ್ಯರಾಗಬೇಕು. ಅದೇ ಅಭಿವೃದ್ಧಿ ಎಂದಿದ್ದರು ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT