ADVERTISEMENT

ಮಂತ್ರಾಲಯದಲ್ಲಿ ಸಂಭ್ರಮದ ಮಹಾ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST
ಮಂತ್ರಾಲಯದಲ್ಲಿ ಸಂಭ್ರಮದ ಮಹಾ ರಥೋತ್ಸವ
ಮಂತ್ರಾಲಯದಲ್ಲಿ ಸಂಭ್ರಮದ ಮಹಾ ರಥೋತ್ಸವ   

ರಾಯಚೂರು: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 341ನೇ ಆರಾಧನೆ ಮಹೋತ್ಸವದ ಉತ್ತರಾರಾಧನೆ ದಿನವಾದ ಭಾನುವಾರ ಮಹಾ ರಥೋತ್ಸವವು ಸಂಭ್ರಮದಿಂದ ನಡೆಯಿತು. ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಹೆಜ್ಜೆ ಮೇಳ, ನಾದಸ್ವರ, ಝಾಂಜ್, ವೇಷಗಾರರು... ಹೀಗೆ ಹತ್ತಾರು ಕಲಾ ತಂಡಗಳು ರಥೋತ್ಸವದ ಮೆರುಗು ಹೆಚ್ಚಿಸಿದ್ದವು.

ರಾಯರ ಮೂಲ ಬೃಂದಾವನದ ಎದುರಿನಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳು, ಬಣ್ಣ ಹಚ್ಚಿ ವಸಂತೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಶ್ರೀ ಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನು ಛತ್ರಿ, ಚಾಮರ, ವಿವಿಧ ವಾದ್ಯವೃಂದದಲ್ಲಿ ಭವ್ಯ ಮೆರವಣಿಗೆಯಲ್ಲಿ ತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಪೀಠಾಧಿಪತಿಗಳು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪ್ರಹ್ಲಾದರಾಜರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಭಕ್ತರು ರಥ ಎಳೆದು ಕೃತಾರ್ಥ ಭಾವ ಹೊಂದಿದರು.

ADVERTISEMENT

ಶ್ರೀಗಳ ಅನುಗ್ರಹ ಸಂದೇಶ: ರಥೋತ್ಸವಕ್ಕೆ ಚಾಲನೆ ನೀಡಿದ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳು ಸಂದೇಶ ನೀಡಿ ಸಮಸ್ತ ಜಗತ್ತಿನ ಉದ್ಧಾರಕ್ಕಾಗಿಯೇ ರಾಘವೇಂದ್ರ ಸ್ವಾಮಿಗಳು ಅವತಾರವೆತ್ತಿದ್ದಾರೆ. ಮಳೆ ಇಲ್ಲ. ಬೆಳೆ ಇಲ್ಲ; ಜನತೆ ಸಂಕಷ್ಟದಲ್ಲಿದ್ದಾರೆ. ಆದರೆ ಧೃತಿಗೆಡಬೇಕಿಲ್ಲ. ನಿಷ್ಠೆಯಿಂದ ರಾಯರನ್ನು ಸ್ಮರಿಸಿದರೆ ಕಷ್ಟಗಳು ದೂರ. ಭಕ್ತ ಕುಲಕೋಟಿಯನ್ನು ಉದ್ಧರಿಸಲಿದ್ದಾರೆ ಎಂದು ನುಡಿದರು.

ಬರಗಾಲ ಕಾರಣ ಶ್ರೀಮಠದಿಂದಲೂ  ರೈತರಿಗೆ ಎಲ್ಲ ರೀತಿಯ ಸಹಾಯ ಮತ್ತು ದನಕರುಗಳಿಗೆ ಮೇವು ವ್ಯವಸ್ಥೆಗೆ ಯೋಜನೆ ರೂಪಿಸಲಾಗುತ್ತಿದೆ. ಶ್ರೀಮಠದ ಖರ್ಚನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಬರಗಾಲ ಪರಿಹಾರ ಕಾರ್ಯಕ್ಕೆ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದರು.

ಪೀಠಾಧಿಪತಿಗಳ ಆಪ್ತ ಕಾರ್ಯದರ್ಶಿ ರಾಜಾ ಎಸ್. ರಾಜಗೋಪಾಲಾಚಾರ್ ಮಾತನಾಡಿ, ಬರ ಪರಿಹಾರ ಕಾರ್ಯಕ್ಕೆ ಶ್ರೀಮಠವು ಸ್ಪಂದಿಸಲು ಮುಂದಾಗಿದೆ.  ಶ್ರೀಮಠದ ಸಿಬ್ಬಂದಿ ವರ್ಗವು ಒಂದು ದಿನದ ವೇತನ  ನೀಡಲಿದ್ದಾರೆ. ರಾಯರಿಗೆ ಎಲ್ಲರೂ ಭಕ್ತರೇ. ಅಂಥ ಭಕ್ತರನ್ನು ಅವರು ಸಂಕಷ್ಟದಿಂದ ದೂರ ಮಾಡಿ ಪೊರೆಯಲಿದ್ದಾರೆ ಎಂದು ತಿಳಿಸಿದರು.

ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್, ಆಡಳಿತಾಧಿಕಾರಿ ಆರ್. ಪ್ರಭಾಕರರಾವ್, ಮಠದ ಆಡಳಿತ ವರ್ಗ, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.