ADVERTISEMENT

`ಮತದಾನ ಮಾಡಿ ನಿಮ್ಮ ಶಕ್ತಿ ತೋರಿಸಿ'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 6:37 IST
Last Updated 23 ಏಪ್ರಿಲ್ 2013, 6:37 IST

ಲಿಂಗಸುಗೂರ: ಪ್ರಜಾಪ್ರಭುತ್ವ ಬಲಗೊಳ್ಳಲು ಪ್ರತಿಯೋರ್ವ ನಾಗರಿಕರ ಜವಾಬ್ದಾರಿ ಹೆಚ್ಚಿದೆ. ಚುನಾವಣೆ ಮೂಲಕ ಪ್ರತಿನಿಧಿಗಳ ಆಯ್ಕೆ ಮಾಡಿಕೊಂಡು ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣ ನಮ್ಮೆಲ್ಲರ ಹಕ್ಕು. ಕಾರಣ ಪ್ರಜಾಪ್ರಭುತ್ವ ಬಲಗೊಳ್ಳಲು ಚುನಾವಣೆಯಲ್ಲಿ ಮತದಾನ ಮಾಡಿ ನಿಮ್ಮ ಪವರ್ ತೋರಿಸಲು ಸದಾವಕಾಶವಿದೆ. ದಯವಿಟ್ಟು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ. ಪ್ರಭಾಕರ ಮನವಿ ಮಾಡಿದರು.

ಸೋಮವಾರ ಇಲಾಖೆ ನಿರ್ದೇಶನದ ಮೇರೆಗೆ ನೂರಕ್ಕೆ ನೂರರಷ್ಟು ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಒತ್ತಡಗಳಿಗೆ ಬೇಸತ್ತು ಮತ ಹಾಕದೆ ದೂರ ಉಳಿಯುವುದು ಪ್ರಜಾತಂತ್ರಕ್ಕೆ ಅಪಮಾನ ಮಾಡಿದಂತೆ. ಮತಗಟ್ಟೆಗೆ ನಿರ್ಭಯದಿಂದ ಬಂದು ಮತದಾನ ಮಾಡಬೇಕು. ಮತದಾನ ತಮ್ಮ ನೈತಿಕ ಹಕ್ಕು. ಮತ ಚಲಾಯಿಸುವಾಗ ಯೋಚಿಸಿ ಉತ್ತಮರ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದರು.

ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಈಗಾಗಲೆ ಮತದಾನ ಜಾಗೃತಿ ಕುರಿತಂತೆ ಕಾರ್ಯಾಗಾರ ನಡೆಸಲಾಗಿದೆ. ಆಯಾ ಕೇಂದ್ರಗಳ ವ್ಯಾಪ್ತಿಯಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗಿದೆ. ತಾಲ್ಲೂಕು ಕೇಂದ್ರದಲ್ಲಿ ಕೂಡ ಜನಜಾಗೃತಿ ಮೂಡಿಸಲು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತಿದೆ. ಅಂತಿಮವಾಗಿ ಏಪ್ರಿಲ್ 25ರಂದು 20 ವಲಯಗಳಲ್ಲಿ ಆಯಾ ಭಾಗದ ಮೇಲ್ವಿಚಾರಕಿಯರ ನೇತೃತ್ವದಲ್ಲಿ ಜಾಗೃತಿ ಜಾಥಾ ಆಯೋಜಿಸಲಾಗಿದೆ ಎಂದರು.

ಮೇಲ್ವಿಚಾರಕಿಯರಾದ ಶಾಂತಾಬಾಯಿ, ಬಸಮ್ಮ, ಅಮರಮ್ಮ, ಶರಣಮ್ಮ, ಲಕ್ಷ್ಮಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.