ಸಿಂಧನೂರು: ಕರ್ನಾಟಕದ ಬಡವರು, ದೀನದಲಿತರು, ಅಲ್ಪಸಂಖ್ಯಾತರು, ಸ್ವಾಭಿಮಾನದಿಂದ ಬದುಕುವಂತೆ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಹಾಗೂ ಯುವಕರು, ಮಹಿಳೆಯರು ಸ್ವಾವಲಂಬನೆಯಿಂದ ಜೀವನ ಸಾಗಿಸಲು ಬೇಕಾಗುವ ಪೂರಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಹೊಸ ರಾಜಕೀಯ ಶಕ್ತಿ ಉದಯವಾಗಲಿದೆ ಎಂದು ಬಿ.ಎಸ್.ಆರ್.ಪಕ್ಷದ ಮುಖಂಡ ಬಿ.ಶ್ರೀರಾಮುಲು ಘೋಷಿಸಿದರು.
ತಾಲ್ಲೂಕಿನ ಅಂಬಾಮಠದಲ್ಲಿ ತಾಲ್ಲೂಕು ವಾಲ್ಮಿಕಿ ನಾಯಕ ಸಮಾಜದಿಂದ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಜನರು ಗುಳೇ ಹೋಗುವುದು ತಪ್ಪಬೇಕಾಗಿದೆ. ತೆಲಂಗಾಣ ಮಾದರಿಯಲ್ಲಿ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನದ ಕನಸು ನನಸಾಗಬೇಕಾಗಿದೆ. ಏತ ನೀರಾವರಿ, ಶಿಕ್ಷಣ, ಆರೋಗ್ಯ, ರಸ್ತೆ ಸುಧಾರಣೆ, ಕುಡಿಯುವ ನೀರಿನ ಸಮಸ್ಯೆಗೆ ಕೊನೆ ಹಾಡಬೇಕಾಗಿದೆ.
ತಾಲ್ಲೂಕಿನ ಮದ್ಯಸಾರ ಘಟಕದಿಂದ ಲಕ್ಷೋಪಲಕ್ಷ ಜನ ಸಂಕಟ ಅನುಭವಿಸುತ್ತಿದ್ದು ಅದರ ವಿರುದ್ಧ ವಿಧಾನಸಭಾದಲ್ಲಿ ಶಾಸಕ ನಾಡಗೌಡರ ಜೊತೆಗೂಡಿ ಧ್ವನಿ ಎತ್ತುವುದಾಗಿ ಅವರು ಭರವಸೆ ನೀಡಿದರು.
ತಮ್ಮ ಕೊನೆ ಉಸಿರು ಇರುವವರೆಗೆ ಜನರ ನಂಬಿಕೆಗೆ ಕರ್ನಾಟಕದ ಆರು ಕೋಟಿಯ ಜನತೆಯ ನಂಬಿಕೆಗೆ ಚ್ಯುತಿ ಬರದಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು.
ನಾಯಕ ಸಮಾಜದ ಬಂಧುಗಳು ಬೆವರು ಸುರಿಸಿ ಬಂದ ಹಣದಿಂದ ಅಭಿನಂದನಾ ಸಮಾರಂಭ ನಡೆಸಿರುವುದಕ್ಕೆ ತಾವು ಚಿರಋಣಿಯಾಗಿರುವುದಾಗಿ ತಿಳಿಸಿದರು.
ನಾಯಕ ಸಮಾಜದ ಗೌರವಾಧ್ಯಕ್ಷ ವಿರೂಪಾಕ್ಷಪ್ಪನವರ ಮಾತಿಗೆ ಪ್ರತಿಕ್ರಿಯಿಸಿದ ಅವರು ದ್ರೋಣಾಚಾರ್ಯರು ಬಹಳಷ್ಟು ಜನ ಇದ್ದಾರೆ. ಆದರೆ ತಾವು ಯಾರಿಗೂ ಹೆಬ್ಬೆರೆಳೆನ್ನು ಕೊಡುವುದಿಲ್ಲ ಎಂದು ಭರವಸೆ ನೀಡಿದರು.
ನಾಡಗೌಡ ಪ್ರಶಂಸೆ: ಸಮಾರಂಭ ಉದ್ಘಾಟಿಸಿದ ಶಾಸಕ ವೆಂಕಟರಾವ್ ನಾಡಗೌಡ ರಾಮುಲು ಸಚಿವರಾಗಿದ್ದಾಗ ಜಾರಿಗೆ ತಂದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸಿದರು.
ರಾಜಕೀಯದಲ್ಲಿ ವ್ಯಕ್ತಿಗತವಾಗಿ ಯಾರು ವೈರಿಗಳಲ್ಲ. ಹಿಂದಿನ ದಿನಗಳಲ್ಲಿ ಆಡಳಿತ ಪಕ್ಷದ ಸಚಿವರು, ಶಾಸಕರು ಮತ್ತು ವಿರೋಧ ಪಕ್ಷದವರು ಪರಸ್ಪರ ಕುಳಿತು ಮಾತನಾಡುವ ಸಂಸ್ಕೃತಿ ಇತ್ತು. ಈಗ ರಾಜಕಾರಣ ಕಲುಷಿತಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು. ತಾವೊಬ್ಬ ಮಿತ್ರರಾಗಿ ಅಭಿನಂದನಾ ಸಮಾರಂಭಕ್ಕೆ ಭಾಗವಹಿಸಿರುವುದಾಗಿ ಸ್ಪಷ್ಟ ಪಡಿಸಿದರು. ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿ.ಎಸ್.ಆರ್.ಪಕ್ಷದ ಮುಖಂಡ ಕೆ.ಕರಿಯಪ್ಪ, ತಹಸೀಲ್ದಾರ ಕೆ.ನರಸಿಂಹ, ಅಯ್ಯನಗೌಡ ಆಯನೂರು, ಎಂ.ದೊಡ್ಡಬಸವರಾಜ, ಇಸ್ಮಾಯಿಲಸಾಬ ಬಳ್ಳಾರಿ, ನಾಗರಾಜ, ರಾಯಚೂರಿನ ಖಲೀಲಸಾಬ, ಪುರಸಭೆ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ, ಕರಿಯಮ್ಮ ಅಮರಪ್ಪ, ವಿಶ್ವನಾಥ ಗೋನ್ವಾರ, ವಕೀಲರಾದ ಎಸ್.ಕರಿಯಪ್ಪ, ಬಿ.ಬಸವರಾಜ, ನಾಮದೇವಗೌಡ, ಮತ್ತಿತರರು ಉಪಸ್ಥಿತರಿದ್ದರು. ವಕೀಲರಾದ ಡಿ.ರಾಮಣ್ಣ ಮತ್ತು ವಿರುಪಣ್ಣ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.