ADVERTISEMENT

ಮಾರುಕಟ್ಟೆಗೆ ಮಾವು ಮತ್ತಷ್ಟು ವಿಳಂಬ!

ಹವಾಮಾನ ವೈಪರೀತ್ಯದಿಂದಾಗಿ ಇನ್ನೂ ಮಿಡಿ ಹಂತದಲ್ಲಿರುವ ಮಾವು

ನಾಗರಾಜ ಚಿನಗುಂಡಿ
Published 3 ಏಪ್ರಿಲ್ 2018, 13:25 IST
Last Updated 3 ಏಪ್ರಿಲ್ 2018, 13:25 IST

ರಾಯಚೂರು: ಹವಾಮಾನ ವೈಪರೀತ್ಯದ ಪರಿಣಾಮದಿಂದ ಮಾವಿನಹಣ್ಣು ಮಾರುಕಟ್ಟೆಗೆ ಬರುವುದು ಈ ವರ್ಷ ವಿಳಂಬವಾಗುತ್ತಿದೆ.ಪ್ರತಿ ವರ್ಷ ಮಾರ್ಚ್‌ನಲ್ಲಿ ಮಾವಿನ ಹಣ್ಣುಗಳ ಸುಗ್ಗಿ ಶುರುವಾಗಿರತ್ತಿತ್ತು. ಈ ಅಲ ಮಾರ್ಚ್‌ ಆರಂಭದಲ್ಲಿ ಇನ್ನೂ ಮಿಡಿಮಾವು ಹಂತದಲ್ಲಿತ್ತು. ಇನ್ನೂ ಮಾಗುವ ಹಂತಕ್ಕೆ ತಲುಪಿಲ್ಲ. ಮಾವಿನಹಣ್ಣು ಮಾರುಕಟ್ಟೆಗೆ ಬರುವುದಕ್ಕೆ ಇನ್ನೂ ಸ್ವಲ್ಪ ದಿನಗಳವರೆಗೆ ಕಾಯಬೇಕಾಗುತ್ತದೆ ಎನ್ನುತ್ತಿದ್ದಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

ಏಪ್ರಿಲ್‌ ಬೇಸಿಗೆಯಲ್ಲಿ ಮಾವಿನ ರುಚಿ ಸವಿಯುತ್ತಿದ್ದ ಮಾವಿನಹಣ್ಣಿನ ಪ್ರಿಯರು ಅಸಮಾಧಾನ ಪಡುವಂತಾಗಿದೆ. ಮಾಗಿದ ಮಾವು ಮಾರಾಟವಾಗಿಬೇಕಿದ್ದ ಜಾಗದಲ್ಲಿ ಮಿಡಿಮಾವಿನ ಕಾಯಿಗಳು ಮಾರಾಟವಾಗುತ್ತಿದೆ. ರಾಯಚೂರು ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಮಿಡಿ ಮಾವಿನ ಕಾಯಿಗಳಿಗೂ ಭಾರಿ ಬೇಡಿಕೆ ಬಂದಿದೆ. ಒಂದು ಮಿಡಿ ಮಾವಿನಕಾಯಿ ₹20 ಕ್ಕೆ ಮಾರಾಟವಾಗುತ್ತಿದೆ. ಚೌಕಾಸಿ ಮಾಡಿದವರಿಗೆ ₹50 ಕ್ಕೆ ಮೂರು ಮಿಡಿಕಾಯಿ ಸಿಗುತ್ತಿದೆ. ಮಾವಿನ ಹಣ್ಣು ರುಚಿಸುವ ಆಸೆ ಇಟ್ಟುಕೊಂಡ ಜನರು ದುಬಾರಿಯಾದರೂ ಮಿಡಿ ಮಾವು ಖರೀದಿಸಿ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

2017 ರ ಅಕ್ಟೋಬರ್‌ನಲ್ಲಿ ರಾಜ್ಯದಾದ್ಯಂತ ಎಡಬಿಡದೆ ಮಳೆ ಸುರಿದಿತ್ತು. ಆ ನಂತರ ಚಳಿಗಾಲ ಆರಂಭವಾಗಿದ್ದರಿಂದ ಮಾವಿನ ಮರದಲ್ಲಿ ಚಿಗುರು ಬರುವುದಕ್ಕೆ ಅನುಕೂಲಕರ ವಾತಾವರಣವೆ ಸಿಗಲಿಲ್ಲ. ತಂಪಿನಿಂದ ಕೂಡಿದ ವಾತಾವರಣ ದೀರ್ಘವಾಗಿದ್ದರಿಂದ ಚಿಗುರು ಹೂವಾಗಿ, ಕಾಯಿ ಬಿಡುವ ಹಂತಕ್ಕೆ ತಲುಪುವುದಕ್ಕೆ ಫೆಬ್ರುವರಿ ತಿಂಗಳು ಮುಗಿದು ಹೋಗಿದೆ. ಇದೀಗ ಮಾವು ಮಾಗುವ ಕಾಲ ಸನಿಹವಾಗುತ್ತಿದೆ.

ADVERTISEMENT

‘ಪ್ರತಿ ವರ್ಷದಂತೆ ಮಾವಿನ ಮರದಲ್ಲಿ ಚಿಗುರು ಬರುವುದಕ್ಕೆ ಕಳೆದ ವರ್ಷ ಸೆಪ್ಟೆಂಬರ್‌ ಬಳಿಕ ಅನುಕೂಲಕರ ವಾತಾವರಣ ಇರಲಿಲ್ಲ. ಭಾರಿ ತಂಪು ಹಾಗೂ ಭಾರಿ ಬಿಸಿಲು ಇಲ್ಲದ ಹವಾಮಾನದಲ್ಲಿ ಮಾವಿನ ಚಿಗುರು, ಕಾಯಿಯಾಗಿ ಟಿಸಿಲೊಡೆಯುವುದಕ್ಕೆ ಅನುಕೂಲ. ಚಿಗುರು ಬಿಡುವುದು ವಿಳಂಬ ಆಗಿರುವುರಿಂದ ಮಾವಿನ ಹಣ್ಣುಗಳು ಬುರುವುದು ಕೂಡಾ ಈ ವರ್ಷ ವಿಳಂಬ ಆಗುತ್ತಿದೆ. ಏಪ್ರಿಲ್‌ ಮಧ್ಯಭಾಗದಿಂದ ಮಾವಿನ ಹಣ್ಣು ಮಾರುಕಟ್ಟೆಗೆ ಬರುವುದಕ್ಕೆ ಆರಂಭವಾಗಬಹುದು’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಇಮಾಮದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾವಿನ ಹಣ್ಣಿನ ಸುವಾಸನೆಯು ಬೇಸಿಗೆಯಲ್ಲಿ ಹೊಸ ಚೈತನ್ಯ ಕೊಡುತ್ತದೆ. ಆದರೆ, ಹಣ್ಣುಗಳು ಇನ್ನೂ ಬರುತ್ತಿಲ್ಲ. ಹವಾಮಾನದಲ್ಲಿ ಏನಾದರೂ ಬದಲಾವಣೆ ಆಗಿರಬಹುದು. ಕನಿಷ್ಠಪಕ್ಷ ಮಿಡಿಮಾವಿನ ಚಟ್ನಿ ಮಾಡಿಕೊಂಡು ತಿನ್ನುವ ಆಸೆ ಕೂಡಾ ಸುಲಭವಾಗಿ ಈಡೇರುತ್ತಿಲ್ಲ. ಮಾವಿನ ಹಣ್ಣಿಗಿಂತ ಕಾಯಿ ಹಣ್ಣುಗಳು ದುಬಾರಿ ಆಗಿವೆ. ಮಾವಿನಹಣ್ಣು ಇಷ್ಟಪಡುವವರಿಗೆ ದುಬಾರಿಗೆ ಕೊಳ್ಳುವುದು ಅನಿವಾರ್ಯ’ ಎಂದು ಜವಾಹರ ನಗರ ನಿವಾಸಿ ಅರವಿಂದ ಕುಲಕರ್ಣಿ ಹೇಳಿದರು.

220 ಹೆಕ್ಟೇರ್‌ನಲ್ಲಿ ಮಾವು

ಜಿಲ್ಲೆಯಲ್ಲಿ ರಾಯಚೂರು ತಾಲ್ಲೂಕಿನ ಚಂದ್ರಬಂಡಾ ಹಾಗೂ ಯರಗೇರಾ ಎರಡು ಹೋಬಳಿ ವ್ಯಾಪ್ತಿಯಲ್ಲಿ ಮಾತ್ರ ಮಾವಿನ ತೋಟಗಳಿವೆ. ಒಟ್ಟು 220 ಹೆಕ್ಟೇರ್‌ನಲ್ಲಿ ಮಾವಿನ ಮರಗಳಿವೆ. ಒಂದು ಹೆಕ್ಟೇರ್‌ನಲ್ಲಿ ಅಂದಾಜು 20 ಕ್ವಿಂಟಾಲ್‌ ಮಾವಿನ ಹಣ್ಣುಗಳು ಬೆಳೆಯುತ್ತವೆ. ವರ್ಷಕ್ಕೆ ಜಿಲ್ಲೆಯಲ್ಲಿ ಅಂದಾಜು 4,400 ಕ್ವಿಂಟಾಲ್‌ ಮಾವಿನಹಣ್ಣುಗಳು ಬೆಳೆಯುತ್ತವೆ. ‘ಪಕ್ಕದ ಆಂಧ್ರಪ್ರದೇಶ ರಾಜ್ಯದ ಕರ್ನೂಲ್‌ ಜಿಲ್ಲೆಯ ಬನಾಗನಪಲ್ಲಿಯಲ್ಲಿ ಬೆನಿಸಾನ್‌ ತಳಿ ಹುಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಬೆನಿಸಾನ್‌ ತಳಿ ಮಾವು ಶೇ 90 ರಷ್ಟಿದೆ. ರಾಯಚೂರು ಜಿಲ್ಲೆಯ ರೈತರು ಮಾವಿನ ತೋಟಗಳನ್ನು ಗುತ್ತಿಗೆದಾರರಿಗೆ ಒಪ್ಪಿಸುವುದು ರೂಢಿ. ಹೀಗಾಗಿ ಮಾವಿನಹಣ್ಣಿನ ನಿಜವಾದ ಲಾಭವನ್ನು ರೈತರು ಮಾಡಿಕೊಳ್ಳುವುದಿಲ್ಲ’ ಎಂದು ಸಂತೋಷ ಹೇಳಿದರು.

**

ತೋಟಗಾರಿಕೆ ಇಲಾಖೆಯ ಮಾವಿನ ತೋಟಗಳಿಗೆ ಈಗಷ್ಟೇ ಹೋಗಿ ಸ್ಥಿತಿಗತಿ ಅವಲೋಕನ ಮಾಡಿದ್ದೇವೆ. ಏಪ್ರಿಲ್‌ ಮಧ್ಯದಲ್ಲಿ ಮಾವಿನ ಹಣ್ಣುಗಳು ಮಾಗುವ ಹಂತಕ್ಕೆ ಬರಬಹುದು – ಸಂತೋಷ ಇನಾಮದಾರ್‌, ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.