ADVERTISEMENT

`ಮುಂಗಾರು ಮಳೆ' ಶುಭಾರಂಭ

ಚುರುಕುಗೊಂಡ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 10:31 IST
Last Updated 1 ಜೂನ್ 2013, 10:31 IST

ದೇವದುರ್ಗ: ಕಳೆದ ಎರಡು ವರ್ಷಗಳಿಂದ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ಬಾರಿ ಮುಂಗಾರು ಮಳೆ ಆರಂಭದಲ್ಲಿ ರೈತರಿಗೆ ಶುಭಶಕುನ ನೀಡಿರುವುದರಿಂದ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ನಡೆದಿರುವುದು ಕಂಡು ಬರುತ್ತಿದೆ.

ತಾಲ್ಲೂಕಿನ ಹಲವಡೆ ಕಳೆದ 2-3 ದಿನಗಳಿಂದ `ಕೃತ್ತಿಕಾ' ಮಳೆ ಉತ್ತಮವಾಗಿ ಬರತೊಡಗಿದೆ. ಪ್ರತಿ ವರ್ಷ ಮಳೆಗಾಗಿ ಮುಗಿಲು ನೋಡುತ್ತಿದ್ದ ರೈತನಿಗೆ ಬುಧವಾರದ ಮಳೆಯಿಂದಾಗಿ ನಿಟ್ಟಿಸಿರುವ ಬಿಡುವಂತಾಗಿದೆ. 44  ಡಿಗ್ರಿ ಸೆಲ್ಸಿಯಸ್ ಗಡಿದಾಟಿದ್ದ ಬಿಸಿಲಿನ ತಾಪಮಾನವು ಬುಧವಾರ ರಾತ್ರಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಅರಕೇರಾ, ಗಬ್ಬೂರು ಮತ್ತು ಇತರ ಕಡೆ 51 ಮಿ.ಮೀ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಗಿದೆ.  ಮುಂಗಾರು ಬಿತ್ತನೆಗೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಜಮೀನುಗಳ ಸ್ವಚ್ಛತೆಗಾಗಿ ರೈತರು ಎಡಬಿಡದೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಬಾರಿ ಬೇಸಿಗೆಯಲ್ಲಿ ತಾಲ್ಲೂಕಿನಲ್ಲಿ ಜನ ಮತ್ತು ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿತು. ಈಚೆಗೆ ಮಳೆ ಸುರಿದಿರುವುದರಿಂದ ಕನಿಷ್ಠ ಜಾನುವಾರುಗಳಿಗೆ ಕುಡಿಯುವ ನೀರಿಗೆ  ಅನುಕೂಲವಾಗಿದೆ. ಮುಂಗಾರು ಆರಂಭದಲ್ಲಿಯೇ ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಳೆಯ ಸಮಸ್ಯೆ ಕಡಿಮೆ ಎನ್ನುತ್ತಾರೆ ಹಿರಿಯ ಕೃಷಿಕರು.

ಕಳೆದ ಬಾರಿ ಬಿತ್ತನೆ ಬೀಜಗಳನ್ನು ಶೇ 75ರ ಸಬ್ಸಿಡಿ ದರದಲ್ಲಿ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ನಂತರ ಅದನ್ನು ಈಡೇರಿಸುವಲ್ಲಿ ವಿಫಲವಾಗಿತ್ತು. ಇದರಿಂದ ತಾಲ್ಲೂಕಿನ ಅದೆಷ್ಟೊ ಬಡ ರೈತ ಕುಟುಂಬಗಳು  ಅನಿವಾರ್ಯ ಎನ್ನುವಂತೆ ಸಾಲ ಮಾಡಿ ಬೀಜ ಪಡೆದು ಬಿತ್ತನೆ ಮಾಡಿದ್ದವು. ನಂತರ ಮುಂಗಾರು ಮಳೆ  ಕೈಕೊಟ್ಟ ಕಾರಣ ಮಾಡಿದ ಸಾಲ ತೀರಿಸಲು ಊರು ಬಿಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪ್ರತಿ ವರ್ಷ ರೈತರ ಹೆಸರಿನಲ್ಲಿ ತಾಲ್ಲೂಕಿಗೆ ಬರುವ ಸಾವಿರಾರು ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳು ನಿಜವಾದ ರೈತರಿಗೆ ಸಿಗದ ಕಾರಣ ಅನಿವಾರ್ಯವಾಗಿ ಖಾಸಗಿ ಕೃಷಿ ಅಂಗಡಿಗಳಿಗೆ ಹೋಗಿ ಖರೀದಿಸಬೇಕಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ ಬರುವ ಬೀಜಗಳನ್ನು ಕಾಳಸಂತೆಯಲ್ಲಿ ಮಾರಾಟವಾಗುತ್ತವೆ ಆರೋಪ ರೈತರಿಂದ ಕೇಳಿಬರುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.