ADVERTISEMENT

ಮುಖ್ಯ ಶಿಕ್ಷಕನ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 7:40 IST
Last Updated 4 ಜೂನ್ 2011, 7:40 IST

ಮಾನ್ವಿ: ಸುಮಾರು 11 ಲಕ್ಷ ರೂಪಾಯಿ ಶಾಲಾ ಅನುದಾನ ಲಪಟಾಯಿಸಿ ಪರಾರಿಯಾದ ತಾಲ್ಲೂಕಿನ ರಾಜಲಬಂಡಾ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರು ದೊಡ್ಡರಂಗೇಗೌಡ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸವ ಸಂಬಂಧ ಅಲ್ಲಿನ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹುಲಗಯ್ಯ ಹಾಗೂ ಮುಖ್ಯ ಗುರು ಭೋಗೇಶ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ  ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. 

 ದೂರಿನ ಪ್ರತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೂ ಕಳಿಸಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಕುರಿತು ಜೂನ್ 3ರಂದು `ಪ್ರಜಾವಾಣಿ~ಯಲ್ಲಿ `ರಾಜಲಬಂಡಾ ಸರ್ಕಾರಿ ಶಾಲೆಯ ಕತೆ-ವ್ಯಥೆ~ ತಲೆಬರಹದಡಿ ವರದಿ ಪ್ರಕಟಿಸಲಾಗಿತ್ತು. 

 ಪತ್ರಿಕಾ ವರದಿಯಿಂದ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಗೆ ಕಟ್ಟಪ್ಪಣೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಾಥಮಿಕ ಶಾಲೆಯ ಮುಖ್ಯ ಗುರು ಭೋಗೇಶ ಶುಕ್ರವಾರ ದೊಡ್ಡರಂಗೇಗೌಡ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿದ್ದರು. ಪ್ರಕರಣ ದಾಖಲಿಸಿಕೊಳ್ಳಲು  ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ಇನ್ನೂ ಕೆಲವು ದಾಖಲೆಗಳನ್ನು ಒದಗಿಸುವಂತೆ ಪಿಎಸ್‌ಐ ಕೇಳಿದರು ಎನ್ನಲಾಗಿದೆ.

ನಂತರ ಹೊರಬಂದ ಪ್ರಾಥಮಿಕ ಶಾಲೆಯ ಮುಖ್ಯ ಗುರು ಭೋಗೇಶ ನೋಂದಾಯಿತ ಅಂಚೆ ಮೂಲಕ ಸಬ್ ಇನ್ಸ್‌ಪೆಕ್ಟರ್ ಅವರಿಗೆ  ತಮ್ಮಲ್ಲಿದ್ದ ದಾಖಲೆಗಳೊಂದಿಗೆ ದೂರು ರವಾನಿಸಿರುವುದು ಸಂದೇಹಕ್ಕೆ ಕಾರಣವಾಗಿದೆ. ಅಂಚೆ ಮೂಲಕ ಕಳಿಸಲಾದ ದೂರಿನಿಂದ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ನಾಗರಿಕರಲ್ಲಿ ಮೂಡಿದೆ.

ಕಳೆದ ಆರು ತಿಂಗಳಿಂದ ಖಾಲಿ ಇದ್ದ  ರಾಜಲಬಂಡಾ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರು ಹುದ್ದೆಗೂ ಕೂಡ ನೇಮಕ ಮಾಡಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ ಶುಕ್ರವಾರ ಪ್ರೌಢಶಾಲೆಯ ಸಹ ಶಿಕ್ಷಕ ಶಾಮೀದ್ ಅಲಿ ಪ್ರಭಾರ ಮುಖ್ಯ ಶಿಕ್ಷಕರ ಹುದ್ದೆಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.

ಶಾಲೆಯ ಆವರಣದಲ್ಲಿರುವ ಅಪಾಯಕಾರಿ ಪುರಾತನ ತೆರೆದ ಬಾವಿಯನ್ನು ಮುಚ್ಚುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮುಖ್ಯ ಗುರುಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.