
ಸಿಂಧನೂರು: ನಗರದಲ್ಲಿ ಸಂಜೆ 5 ಗಂಟೆ ಸುಮಾರು ಸುರಿದ ಮಳೆಗೆ ರಾಯಚೂರು-–ಗಂಗಾವತಿ ಮುಖ್ಯ ರಸ್ತೆಯಲ್ಲಿರುವ ಹಳೆ ಚರಂಡಿ ಮೂಲಕ ಸಾರ್ವಜನಿಕ ಶೌಚಾಲಯದ ಮಲ ಮತ್ತು ತ್ಯಾಜ್ಯ ವಸ್ತುಗಳು ರಸ್ತೆ ಮೇಲೆ ಹರಿದ ಪರಿಣಾಮ ಜನರು ದುರ್ನಾತಕ್ಕೆ ಹೆದರಿ ಮೂಗು ಮುಚ್ಚಿಕೊಂಡು ಸಂಚರಿಸುವಂತ ಸ್ಥಿತಿ ಬಂತು.
ಶಾಸಕರ ಮನೆಗೆ ಹೋಗುವ ದಾರಿ ಹಾಗೂ ನಗರಸಭೆ ಮುಂದಿನ ಹಾದಿಯಲ್ಲಿ ಚರಂಡಿ ನೀರು ನುಗ್ಗಿದ ಪರಿಣಾಮ 1ಗಂಟೆಗೂ ಹೆಚ್ಚು ಸಮಯವನ್ನು ಅಂಗಡಿಗಳಲ್ಲಿಯೇ ಕಳೆಯುವಂತಾಯಿತು.
ಸುಕಾಲಪೇಟೆಗೆ ಹೋಗುವ ರಸ್ತೆಯಲ್ಲಿ ಕನಕದಾಸ ಸರ್ಕಲ್ ಬಳಿ ಚರಂಡಿ ನೀರು ನುಗ್ಗಿದ್ದರಿಂದ ರಟ್ಟಿನ ಬಾಕ್ಸ್ಗಳನ್ನು ಸಾಗಿಸುವ ಟಾಟಾ ಏಸ್ ವಾಹನವು ಸಿಕ್ಕಿಬಿದ್ದಿರುವುದು ಕಂಡುಬಂತು. ಕಾಯಿಪಲ್ಲೆ ಮಾರುಕಟ್ಟೆಗೆ ಬಂದಿದ್ದ ನೂರಾರು ಜನ ತೀವ್ರ ತೊಂದರೆ ಅನುಭವಿಸಿದರು. ಚರಂಡಿ ನೀರು ನಿಂತ ಕಾರಣ ಸುಮಾರು ಎರಡು ಗಂಟೆಗಳಿಗೂ ಅಧಿಕ ಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು.
ಸಾರ್ವಜನಿಕರ ಆಕ್ರೋಶ: ಹಲವು ದಿನಗಳಿಂದ ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಗೆ ಹಿನ್ನಡೆಯಾಗಿರುವುದು ಈ ಸಮಸ್ಯೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಶೆಡ್ ಹಾರಿ ಮನೆಗೆ ಹಾನಿ
ಸಂಜೆ ಬಿದ್ದ ಬಿರುಗಾಳಿ-–ಮಳೆಗೆ ಇಲ್ಲಿಗೆ ಸಮೀಪದ ಮೂರುಮೈಲು ಕ್ಯಾಂಪ್ನಲ್ಲಿ ವಾಸಿಸುವ ಕುಟುಂಬಗಳ ಶೆಡ್‌ಗಳು ಗಾಳಿಗೆ ಹಾರಿ ಮಳೆಯಲ್ಲಿ ಕಾಲ ಕಳೆಯುವಂತ ಸ್ಥಿತಿ ಬಂತು.
ಮನೆಯಲ್ಲಿದ್ದ ಕಾಳು-ಕಡಿ, ಬಟ್ಟೆ-ಬರಿ ತೋಯ್ದು ಹೋಗಿರುವುದರಿಂದ ದುರುಗಪ್ಪ ಮುಸಲಾಪುರ, ತಿರುಕಪ್ಪ, ಹನುಮಂತ ಜೂಲಕುಂಟ, ಚೆನ್ನಪ್ಪ ನಾಲ್ಕುಮೈಲು ಕ್ಯಾಂಪ್, ಯನೂರಪ್ಪ ಮತ್ತಿತರರ ಕುಟುಂಬಗಳು ರಸ್ತೆ ಪಕ್ಕದಲ್ಲಿರುವ ಬಸ್ ತಂಗುದಾಣದಲ್ಲಿ ಆಶ್ರಯ ಪಡೆದಿವೆ.
ಕೂಲಿ ಮಾಡಿ ಬಂದ ಹಣದಿಂದ ಜೀವನ ಸಾಗಿಸುವ ನಮಗೆ ಮನೆ ಇಲ್ಲದಂತ ಸ್ಥಿತಿ ಬಂದಿದೇ ಎಂದು ಚೆನ್ನಪ್ಪ ಪತ್ನಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ದುರುಗಪ್ಪ ಮುಸಲಾಪುರ ಮತ್ತು ಇತರೆ ಕುಟುಂಬಗಳ ಪರಿವಾರವೂ ಮಳೆಯಲ್ಲಿ ಕಾಲ ಕಳೆದರು.
ತಮಗೆ ನಗರಸಭೆ ಅಧ್ಯಕ್ಷ ಜಾಫರ್ಅಲಿ ಜಾಗೀರದಾರ ಮತ್ತು ಶಾಸಕ ಹಂಪನಗೌಡ ಬಾದರ್ಲಿ ಅವರು ಶೆಡ್ ನಿರ್ಮಿಸಲು ಸಹಾಯ ಮಾಡುವಂತೆ ಮನವಿ ಮಾಡಿದರು.
ಶ್ರೀಪುರಂ ಜಂಕ್ಷನ್: ತಾಲ್ಲೂಕಿನ ಹೊಸಳ್ಳಿ ಸಮೀಪದ ಶ್ರೀಪುರಂ ಜಂಕ್ಷನ್‌ನಲ್ಲಿ ಗಾಳಿ ಮಳೆಗೆ ರಾಮಣ್ಣ, ಹುಲಗಪ್ಪ, ಕರಿಯಪ್ಪ, ಸಾಬಣ್ಣ, ರಾಮಣ್ಣ ಎನ್ನುವವರ ನಾಲ್ಕು ಶೆಡ್‌ಗಳು ಕುಸಿದು ಬಿದ್ದಿವೆ. ಅಲ್ಲದೇ ಅಮರಣ್ಣ ಎನ್ನುವವರ ಮಕ್ಕಳಾದ ಚಿನ್ನಿ, ಚಂದ್ರಿಕಾ ಎನ್ನುವವರಿಗೆ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾಟಿಬೇಸ್: ನಗರದ ಕಾಟಿಬೇಸ್‌ನ ದೋಬಿಗಲ್ಲಿಯಲ್ಲಿ ಶುಕ್ರವಾರ ಸಂಜೆ ಗಾಳಿಯೊಂದಿಗೆ ಸುರಿದ ಮಳೆಗೆ ಅಂಬಮ್ಮ ಬಸಪ್ಪ ಮಡಿವಾಳ ಎನ್ನುವವರ ತಗಡಿನ ಶೆಡ್ ಜಖಂಗೊಂಡಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಸಾಮಾನುಗಳಿಗೆ ಹಾನಿಯಾಗಿದೆ. ಏಕಾಏಕಿ ಬೀಸಿದ ಗಾಳಿಯಿಂದಾಗಿ ತಗಡು ಹಾರಿ ಕೆಳಗೆ ಬಿದ್ದಿವೆ. ಮನೆಯಲ್ಲಿ ಯಾರೂ ಇಲ್ಲದೇ ಹೋದದ್ದರಿಂದ ಅನಾಹುತ ತಪ್ಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.