ADVERTISEMENT

ರಸ್ತೆ ಅವ್ಯವಸ್ಥೆ: ಅಧಿಕಾರಿ ತರಾಟೆಗೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 12:15 IST
Last Updated 19 ಜನವರಿ 2011, 12:15 IST

 ಆಯುಕ್ತ ರಜನೀಶ್ ಗೋಯಲ್ ಭೇಟಿ
ಸಿಂಧನೂರು: ನಗರದ ಪ್ರಮುಖ ರಸ್ತೆಗಳ ಅವ್ಯವ್ಯಸ್ಥೆ ಕಣ್ಣಾರೆ ಕಂಡ ಪ್ರಾದೇಶಿಕ ಆಯುಕ್ತ ರಜನೀಶ ಗೋಯಲ್ ಅವರು ಎ.ಇ.ಇ.ಲಿಂಗಾರೆಡ್ಡಿ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ಜರುಗಿತು.ಮಹಾತ್ಮ ಗಾಂಧಿ ವೃತ್ತದಿಂದ ಉಗ್ರಾಣದವರೆಗೆ ನಗರದ ವ್ಯಾಪ್ತಿಯಲ್ಲಿ ಬರುವ 1.3 ಕಿ.ಮೀ. ಕುಷ್ಟಗಿ ಮುಖ್ಯ ರಸ್ತೆಯನ್ನು 38ಲಕ್ಷ ಅಂದಾಜು ವೆಚ್ಚದಲ್ಲಿ ದುರಸ್ತಿಗೊಳಿಸಲಾಗುತ್ತಿದ್ದು, ಕಾಮಗಾರಿ ನಿರ್ಮಾಣದಲ್ಲಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ ಹಿನ್ನೆಲೆಯಲ್ಲಿ ಎ.ಇ.ಇ.ಲಿಂಗಾರೆಡ್ಡಿ ಅವರನ್ನು ಪ್ರಶ್ನಿಸಿದರು.

ಸ್ಥಳದಲ್ಲಿದ್ದ ಕಾರ್ಮಿಕರೊಬ್ಬರನ್ನು ಗೋಯಲ್ ಮಾತನಾಡಿಸಿದಾಗ, ನಿನ್ನೆಯ ದಿನವೇ ಈ ಕೆಲಸ ಮಾಡಿಸಲಾಗಿದೆ ಎನ್ನುವ ಉತ್ತರ ಆತನಿಂದ ಬಂತು. ಇದರಿಂದ ಎ.ಇ.ಇ. ತಬ್ಬಿಬ್ಬಾದರು. ತಕ್ಷಣ ಸಂಬಂಧಿಸಿದ ಎಂಜನಿಯರ್‌ಗೆ ನೋಟಿಸ್ ನೀಡಿ ವರದಿ ಸಲ್ಲಿಸುವಂತೆ ಗೋಯಲ್ ಸೂಚಿಸಿದರು.ನಗರದ ಹದಗೆಟ್ಟ ರಸ್ತೆ ಹಾಗೂ ಅಕ್ರಮ ಕಟ್ಟಡಗಳ ತೆರವಿನ ನಂತರ ಉಂಟಾದ ಅವ್ಯವಸ್ಥೆ ಸರಿಪಡಿಸಲು 6.20 ಕೋಟಿ ಹಣ ಮಂಜೂರಾಗಿದೆ.

ಆಡಳಿತಾತ್ಮಕ ತೊಂದರೆಯಿಂದ ಕೆಲಸ ನಡೆದಿಲ್ಲ. ಎರಡು ಪ್ರತ್ಯೇಕ ಅಂದಾಜು ಪಟ್ಟಿ ತಯಾರಿಸಿದರೆ ಕೆಲಸ ಸುಗಮವಾಗುತ್ತದೆ. ಅಧಿಕಾರಿಗಳು ಈ ಕೂಡಲೇ ಮುಂದಾಗುವಂತೆ ಆದೇಶಿಸಿದರು.ಈ ಸಂದರ್ಭದಲ್ಲಿ ಪೌರಾಯುಕ್ತ ಕೊಪ್ರೇಶಾಚಾರ್, ಎ.ಸಿ.ಉಜ್ವಲ್‌ಕುಮಾರ ಘೋಷ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಶರಣಬಸವರಾಜ ಮತ್ತಿತರರು ಇದ್ದರು.ಒಳ ರಸ್ತೆಗಳು ಇಕ್ಕಟ್ಟಾಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆನ್ನುವ ದೂರುಗಳು ವ್ಯಾಪಕವಾಗಿ ಸಾರ್ವಜನಿಕರಿಂದ ಕೇಳಿ ಬಂದಿವೆ. ಕಾರಣ ಅಗಲೀಕರಣಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಅವರು ಹೇಳಿದರು.

ಸ್ಪಷ್ಟೀಕರಣ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎ.ಇ.ಇ.ಲಿಂಗಾರೆಡ್ಡಿ ಹಾಗೂ ಸಿಬ್ಬಂದಿಯವರು ನಾಲ್ಕು ಬಾರಿ ಈ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆದರೂ ಒಬ್ಬರೂ ಅರ್ಜಿ ಸಲ್ಲಿಸಿಲ್ಲ. ಸಾರ್ವಜನಿಕರು ಪ್ರತಿನಿತ್ಯ ಧೂಳಿನಲ್ಲಿ ಪಡುತ್ತಿರುವ ಸಂಕಟವನ್ನು ಗಮನಿಸಿ ದಿಲೀಪ್ ಶೇಟ್ ಅವರನ್ನು ಮನವೊಲಿಸಿ ಗುತ್ತಿಗೆದಾರಿಕೆ ಕೆಲಸವನ್ನು ವಹಿಸಿಕೊಟ್ಟಿದ್ದೇವೆ.ಕಾಮಗಾರಿ ನಡೆಯುತ್ತಿರುವುದರಿಂದ ತಕ್ಷಣವೇ ಕಳಪೆ, ಗುಣಮಟ್ಟ ಎಂದು ಹೇಳುವುದು ಕಷ್ಟವಾಗುತ್ತದೆ. ಅಂದಾಜು ಪತ್ರಿಕೆಯಲ್ಲಿ ನಿಗದಿಪಡಿಸಿದಂತೆ ಕೆಲಸ ನಡೆಯದಿದ್ದರೆ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.