ADVERTISEMENT

ರಾಯಚೂರಿಗೆ ಐಐಟಿ ಸಚಿವ ಸಂಪುಟ ನಿರ್ಧಾರ: ಸಂಘ-ಸಂಸ್ಥೆ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 5:25 IST
Last Updated 19 ಅಕ್ಟೋಬರ್ 2012, 5:25 IST

ರಾಯಚೂರು: ಗುಲ್ಬರ್ಗದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಬಗ್ಗೆ ನಿರ್ಧಾರ ಕೈಗೊಂಡು ಅಗತ್ಯ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಐತಿಹಾಸಿಕ ನಿರ್ಣಯವನ್ನು ಸರ್ಕಾರ ಕೈಗೊಂಡಿದ್ದಕ್ಕೆ ನಗರದ ಭಾರತೀಯ ತಂತ್ರಜ್ಷಾನ ಸಂಸ್ಥೆ ಮಂಜೂರಾತಿ ಹೋರಾಟ ಸಮಿತಿ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಗುರುವಾರ ಇಲ್ಲಿನ ಭಗತ್‌ಸಿಂಗ್ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರಲ್ಲದೇ ಪರಸ್ಪರ ಸಿಹಿ ಹಂಚಿಕೊಂಡರು.

ಕಳೆದ ಎರಡುವರೆ ವರ್ಷದಿಂದ ನಡೆಸಿದ ತೀವ್ರ ಹೋರಾಟ ಜಯ ಸಂದಿದೆ. ಈ ಹೋರಾಟದಲ್ಲಿ ಪಾಲ್ಗೊಂಟ ಸರ್ವ ಸಂಘಟನೆಗಳು, ಎಲ್ಲ ರಾಜಕೀಯ ಪಕ್ಷಗಳಿಗೆ, ರಾಯಚೂರಿನ ನಾಗರೀಕರಿಗೆ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ, ಸಂಸದ ಎಸ್ ಪಕ್ಕೀರಪ್ಪ, ಜಿಲ್ಲೆಯ ಜನಪ್ರತಿನಿಧಿಗಳಿಗೆ  ಹೋರಾಟ ಸಮಿತಿ ಶುಭಾಶಯ, ಅಭಿನಂದನೆ ಸಲ್ಲಿಸುತ್ತದೆ ಎಂದು ಸಮಿತಿ ಅಧ್ಯಕ್ಷ ಬಸವರಾಜ ಕಳಸ ಹೇಳಿದರು.

ರಾಜ್ಯ ಸರ್ಕಾರ ಬೇಗ ಪ್ರಸ್ತಾವನೆ ಸಲ್ಲಿಸಿ 12ನೇ ಹಣಕಾಸಿನ ಯೋಜನೆಯಡಿ ಒಪ್ಪಿಗೆ ಪಡೆಯಲು ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ( ಶಿವರಾಮೇಗೌಡ ಬಣ) ಜಿಲ್ಲಾ ಘಟಕ ಅಧ್ಯಕ್ಷ ಅಶೋಕಕುಮಾರ ಜೈನ್, ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಎನ್.ಎಂ. ಮೈತ್ರಿಕರ್, ಕರವೇ ತಾಲ್ಲೂಕ ಅಧ್ಯಕ್ಷ ಖಲೀಲ್ ಪಾಷಾ, ರಾಜಕುಮಾರ ಅಭಿಮಾನಿಗಳ ಸಂಘದ ಮಲ್ಲೇಶ ಗಧಾರ, ಎಂ ನಂಜುಂಡ, ಮಾನಸಿಂಗ್ ಠಾಕೂರ್, ಪರಶುರಾಮ ಅರೋಲಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಜಿಲ್ಲಾ ಕಾರ್ಯದರ್ಶಿ ಜೆ.ಎಲ್ ಗೋಪಿ, ಬಾಬು ಚಿಕ್ಕಸೂಗೂರು,ಹಸನ್, ಎ.ಎಸ್ ರಘುಕುಮಾರ, ರಾಮಾಂಜನೇಯ ಹಾಗೂ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.