ADVERTISEMENT

ರೈತರ ಕಾರಹುಣ್ಣಿಮೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 12:07 IST
Last Updated 22 ಜೂನ್ 2013, 12:07 IST

ಸಿಂಧನೂರು: ರಾಸುಗಳು ಭಾರವಾದ ಕಲ್ಲುಗಳನ್ನು ಎಳೆಯುತ್ತಿದ್ದರೆ, ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ರೈತರಿಂದ ಸಿಳ್ಳೆ, ಕೇಕೆ ಸಂಭ್ರಮ. ಎಪಿಎಂಸಿ ವಾಣಿಜ್ಯ ಮಳಿಗೆಗಳ ಮೇಲೆ ಹತ್ತಿ ಕುಳಿತಿದ್ದ ಜನರು ಆಗಾಗ ಕರತಾಡನ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರೈತರನ್ನು ಪ್ರೇರೇಪಿಸಿದರು. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಕಾರಹುಣ್ಣಿಮೆ ನಿಮಿತ್ತ ರೈತರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ತೂಕದ ಭಾರದ ಕಲ್ಲಅನ್ನು ರಾಸುಗಳಿಂದ ಎಳೆಸುವ ಸ್ಪರ್ಧೆಯಲ್ಲಿ ಹಬ್ಬದ ಕಳೆಕಟ್ಟಿತು.

ಬೆಳಿಗ್ಗೆಯಿಂದಲೇ ಆರಂಭವಾದ ಸ್ಪರ್ಧೆಯಲ್ಲಿ ಉತ್ಸಾಹ ವ್ಯಕ್ತವಾಯಿತು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ತಮ್ಮ ಎತ್ತುಗಳನ್ನು ಹೊಡೆದುಕೊಂಡು ಬಂದಿದ್ದ ರೈತರು ಎಪಿಎಂಸಿ ಪ್ರಾಂಗಣದ ಹಲವೆಡೆ ವಿಶೇಷವಾಗಿ ಆರೈಕೆ ಮಾಡುವುದು ಕಂಡುಬಂತು. ಭಾರದ ಕಲ್ಲು ಎಳೆಯಲು ಎತ್ತುಗಳಿಗೆ ನೊಗ ಕಟ್ಟುತ್ತಿದ್ದಂತೆ ಕೆಲವು ಎತ್ತುಗಳು ಬೆದರಿ ಅತ್ತಿತ್ತ ಓಡಾಡಿದವು. ಇನ್ನೂ ಕೆಲವು ರೈತರು ತಮ್ಮ ಎತ್ತುಗಳ ಮೂಲಕ ಸ್ಪರ್ಧೆಯ ನಿಯಮದಂತೆ ಪಾಜೇವು ಮುಟ್ಟಿಸಲು ಹರಸಾಹಸಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.