ADVERTISEMENT

ರೈತ ಜಾಗೃತಿ ಜಾಥಾಕ್ಕೆ ಅಭೂತಪೂರ್ವ ಬೆಂಬಲ.

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 9:40 IST
Last Updated 14 ಫೆಬ್ರುವರಿ 2011, 9:40 IST

ಮಸ್ಕಿ: ನಂದವಾಡಗಿ ಏತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರೈತ ಜಾಗೃತಿ ಕಾಲ್ನಡಗಿ ಜಾಥಾಕ್ಕೆ ರೈತರು, ಸ್ವಾಮೀಜಿಗಳು, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಫೆ10ರಿಂದು ಹುನಗುಂದ ತಾಲ್ಲೂಕಿನ ನಂದವಾಡಗಿಯಲ್ಲಿ ಆರಂಭವಾದ ಪಾದಯಾತ್ರೆ ಭಾನುವಾರ 100ಕಿ.ಮೀ.ಸಂಚರಿಸಿ ಲಿಂಗುಸಗೂರು ತಾಲ್ಲೂಕಿನ ಹಳ್ಳಿಗಳಿಗೆ ಆಗಮಿಸಿತು. ದಿನದಿಂದ ದಿನಕ್ಕೆ ರೈತರಲ್ಲಿ ಜಾಗೃತಿ ಇಮ್ಮಡಿಗೊಂಡು ನೀರಾವರಿಗೆ ಒಳಪಡುವ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ರೈತರನ್ನು ಜಾಗೃತಿಗೊಳಿಸುವ ಕೆಲಸದಲ್ಲಿ ಹೋರಾಟಗಾರರು ಯಶಸ್ವಿಯತ್ತ ಸಾಗಿದ್ದಾರೆ.

ಮಸ್ಕಿ ಸಮೀಪದ ಹಳ್ಳಿ ಹಾಗೂ ಮಿಟ್ಟಿಕೆಲ್ಲೂರು ಗ್ರಾಮಕ್ಕೆ ಜಾಥಾ ಆಗಮಿಸಿದಾಗ ಗ್ರಾಮದ ಬಾಲಕಿಯರು ಪೂರ್ಣಕುಂಭದೊಂದಿಗೆ ಹೋರಾಟ ಗಾರರನ್ನು ಸ್ವಾಗತಿಸಿದರು. ನಮ್ಮ ಭೂಮಿಗೆ ನೀರು ಬರುವವರೆಗೆ ನಾವು ವಿರಮಿಸುವುದಿಲ್ಲ. ನೀರು ಪಡೆದೆ ಪಡೆಯುತ್ತೇವೆ ಎಂಬ ಘೋಷಣೆಗಳು ಮಾರ್ದನಿಸಿದವು. ಸರ್ಕಾರದ ಮೇಲೆ ಒತ್ತಡ ತರುವ ಭಾಗವಾಗಿ ಫೆ 15 ರಂದು ನಿಲೊಗಲ್ಲ ಕ್ರಾಸ್‌ನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟದ ಕಾರ್ಯದರ್ಶಿ ಜಿ.ಪಂ.ಸದಸ್ಯ ಎಚ್, ಬಿ,ಮುರಾರಿ ಮಿಟ್ಟಿಕೆಲ್ಲೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

ದಿ.14 ಸೋಮವಾರ ಆಲಮಟ್ಟಿಯಲ್ಲಿ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಅಧಿಕಾರಿಗಳು ನೀರು ಹಂಚಿಕೆ ಕುರಿತು ತಿರ್ಮಾನ ತೆಗೆದುಕೊಳ್ಳಲು ಹೋರಾಟಗಾರರ, ರೈತರ ಮುಖಂಡರ ಸಭೆ ಕರೆದಿದ್ದಾರೆ. ಅದರಲ್ಲಿ ತಾಂತ್ರಿಕ ಸಮಿತಿಯ ಅಧ್ಯಕ್ಷ ಶರಣಗೌಡ ಭಾಗವಹಿಸಿ ಈ ಯೋಜನೆ ಕೈಗೆತ್ತಿಕೊಳ್ಳುವಂತೆ ಬೇಡಿಕೆ   ಮಂಡಿಸಲಿದ್ದಾರೆಂದು ಮುರಾರಿ ತಿಳಿಸಿದರು.ಸಂತೆಕೆಲ್ಲೂರಿನ ಘನಮಠದ ಗುರುಬಸವ ಸ್ವಾಮಿಜಿ ಮಾತನಾಡಿದರು.  ಇರಕಲ್‌ನ ಬಸವಪ್ರಸಾದ ಶರಣರು, ಶರಣಗೌಡ, ಶರಣಪ್ಪ ಗುಡಿಜಾವುರ, ಚಂದ್ರಪ್ಪ ಹಳ್ಳಿ, ರಮೇಶ ಶಾಸ್ತ್ರಿ, ಪ್ರಕಾಶ ಮಸ್ಕಿ ಜಾಥಾದಲ್ಲಿ ಭಾಗವಹಿಸಿದ್ದರು.                                                           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.