ADVERTISEMENT

ಲಿಂಗಸುಗೂರ: ಪವಿತ್ರ ರಂಜಾನ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 4:30 IST
Last Updated 21 ಆಗಸ್ಟ್ 2012, 4:30 IST

ಲಿಂಗಸುಗೂರ: ಕಳೆದ ಒಂದು ತಿಂಗಳಿಂದ ಉಪವಾಸ ವೃತ ಆಚರಣೆ ಮಾಡಿಕೊಂಡು ಧರ್ಮದ ನೀತಿ ನಿಯಮಗಳಡಿ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಬಾಂದವರು ಸೋಮವಾರ ಈದ್ಗಾ ಮೈದಾನ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಪರಸ್ಪರ ಶುಭಾಶಯ ಹಂಚಿಕೊಂಡು ಬರಗಾಲದ ಸಂಕಷ್ಟದಲ್ಲಿಯು ಸಂಭ್ರಮದ ರಂಜಾನ್ (ಈದ್-ಉಲ್-ಫಿತರ್) ಹಬ್ಬಕ್ಕೆ ವಿದಾಯ ಹೇಳಿದರು.

ಪಟ್ಟಣ ಸೇರಿದಂತೆ ತಾಲ್ಲೂಕಿನ ಮುದಗಲ್ಲ, ಮಸ್ಕಿ, ಹಟ್ಟಿ, ಗುರುಗುಂಟಾ, ಆನೆಹೊಸೂರು, ಈಚನಾಳ, ನಾಗರಹಾಳ ಚಿತ್ತಾಪುರ, ನಾಗಲಾಪುರ, ಸಂತೆಕೆಲ್ಲೂರು, ಸರ್ಜಾಪುರದಂತಹ ಇತರೆ ಪ್ರಮುಖ ಗ್ರಾಮೀಣ ಪ್ರದೇಶಗಳ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವುದು ವರದಿಯಾಗಿದೆ. ಪ್ರತಿಯೋರ್ವರು ಹೊಸಬಟ್ಟೆ ಧರಿಸಿ, ಶೇಂಟ್ ಹಾಕಿಕೊಂಡು ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಹಿಂದು, ಮುಸ್ಲಿಂ ಭಿನ್ನತೆ ತೊರೆದು ಪರಸ್ಪರ ಶುಭಾಶಯ ಹಂಚಿಕೊಳ್ಳುತ್ತಿರುವುದು ಕಂಡು ಬಂದಿತು.

ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ಹಿಂದು ಸಮಾಜದ ಹಿರಿಯರಾದ ಶರಣಪ್ಪ ಮೇಟಿ, ಟಿ.ಆರ್. ನಾಯಕ, ಪಾಮಯ್ಯ ಮುರಾರಿ, ಸಿದ್ಧು ಬಂಡಿ, ಎಚ್.ಬಿ. ಮುರಾರಿ, ಮಲ್ಲಣ್ಣ ವಾರದ, ಬಸರಾಜಗೌಡ ಗಣೆಕಲ್, ಹನುಮಂತಪ್ಪ ಕಂದಗಲ್ಲ, ವೀರನಗೌಡ ಬಯ್ಯಾಪುರ, ಅಮರೇಶ ಮಡ್ಡಿ, ಶಶಿ ಬಿಜ್ಜೂರು, ವಿರುಪಾಕ್ಷಪ್ಪ ಹಂದ್ರಾಳ, ರಾಜು ಪಲ್ಲೇದ ಸೇರಿದಂತೆ ಗಣ್ಯರು ಮುಸ್ಲಿಂ ಬಾಂಧವರಿಗೆ ಪರಸ್ಪರ ಅಪ್ಪಿಕೊಳ್ಳುವ ಮೂಲಕ ಶುಭಾಶಯ ಹಂಚಿಕೊಂಡರು.

ಮುಸ್ಲಿಂ ಸಮುದಾಯದ ಹಿರಿಯರಾದ ಹಪೀಜ್‌ಯಾಸೀನ್, ಲಾಲಅಹ್ಮದಸಾಬ, ರಾಜಾಹುಸೇನಸಾಬ, ಇಬ್ರಾಹಿಂ, ಸಲಿಂಭೈ, ಎಂ.ಡಿ. ಇಸ್ಮಾಯಿಲ್, ಅಹ್ಮದಚಾವೂಸ್, ಎಂ.ಡಿ. ರಫಿ, ಅನೀಸಪಾಷ, ಫಯಾಜ್‌ಹುಸೇನ್, ಚಾಂದಪಟೇಲ್, ನೂರುಲ್ಲಾಹಸನ್, ನಸೀರ್‌ಮಿಯಾ, ಮಹಿಬೂಬಸಾಬ, ಹುಸೇನಸಾಬ, ಬಾಬಾಖಾಜಿ, ಎಕ್ಬಾಲ, ಹಾರೂನ್, ಅನ್ಸರುದ್ದೀನ್, ನಬಿಸಾಬ, ಜಿಲಾನಿ, ಗೌಸ್, ಖಾಜಾಹುಸೇನ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಶುಭಾಶಯ: ಸಾಮೂಹಿಕ ಪ್ರಾರ್ಥನೆ ನಂತರದಲ್ಲಿ ಪಟ್ಟಣದಲ್ಲಿ ಮನೆ ಮನೆಗೆ ತೆರಳಿದ್ದ ಶಾಸಕ ಮಾನಪ್ಪ ವಜ್ಜಲ, ರಮೇಶ ಜೋಷಿ, ಮಹಾಂತಗೌಡ ಬಯ್ಯಾಪೂರ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮುಸ್ಲಿಂ ಸಮುದಾಯದ ಬಹುತೇಕ ಮುಖಂಡರ ಮನೆಗೆ ಸ್ವತಃ ತೆರಳಿ ರಂಜಾನ್ ಹಬ್ಬದ ಶುಭಾಶಯ ಹೇಳುತ್ತಿರುವುದು ಸಾಮಾನ್ಯವಾಗಿತ್ತು. ಪರಸ್ಪರ ಶುಭಾಶಯ ಹಂಚಿಕೊಂಡು ಭಾತೃತ್ವ ಭಾವನೆ ಮೆರೆದರು.

ಬಂದೋಬಸ್ತ್: ಅಸ್ಸಾಂ ಗಲಭೆಗೆ ಸಂಬಂಧಿಸಿ ರಾಜ್ಯದಲ್ಲಿ ಎದ್ದಿರುವ ಗೊಂದಲದ ಹಿನ್ನಲೆಯಲ್ಲಿ ಪೊಲೀಸ್ ಉಪ ವಿಭಾಗಾಧಿಕಾರಿ ಡಿ.ಎ. ಸೂರ್ಯವಂಶಿ ನೇತೃತ್ವದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಜಿ.ಆರ್. ಶಿವಮೂರ್ತಿ, ಲಕ್ಷ್ಮಿನಾರಾಯಣ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಸಿದ್ಧರಾಮಯ್ಯ ಹಿರೇಮಠ, ಮಾರುತಿ ಗುಳ್ಳಾರಿ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಲಿಂಗಸುಗೂರ ಮತ್ತು ಮುದಗಲ್ಲ ಠಾಣಾ ವ್ಯಾಪ್ತಿಯಲ್ಲಿ ಭಾರಿ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ರಂಜಾನ್ ಶಾಂತಿಯುವತವಾಗಿ ನಡೆದಿರುವುದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.