ADVERTISEMENT

ವಕೀಲರು-ವೈದ್ಯರು ಸಮಾಜದ ಕಣ್ಣುಗಳಿದ್ದಂತೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 7:05 IST
Last Updated 13 ಜುಲೈ 2012, 7:05 IST
ವಕೀಲರು-ವೈದ್ಯರು ಸಮಾಜದ ಕಣ್ಣುಗಳಿದ್ದಂತೆ
ವಕೀಲರು-ವೈದ್ಯರು ಸಮಾಜದ ಕಣ್ಣುಗಳಿದ್ದಂತೆ   

ಲಿಂಗಸುಗೂರ: ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಋಣ ತೀರಿಸಲು ಸಾಕಷ್ಟು ಅವಕಾಶಗಳಿವೆ. ಬಹುತೇಕ ವೃತ್ತಿ ಬಾಂಧವರು ತಮ ವೃತ್ತಿಯಲ್ಲಿಯೆ ಸಾಮಾಜಿಕ ನ್ಯಾಯ ಕೊಡಬಹುದಾಗಿದೆ. ಅಂತಹ ವೃತ್ತಿಗಳಲ್ಲಿ ವಕೀಲಿ ಮತ್ತು ವೈದ್ಯ ವೃತ್ತಿ ಭಾರಿ ಪಾವಿತ್ರ್ಯತೆ ಪಡೆದಿವೆ.

ವಕೀಲರು ಮತ್ತು ವೈದ್ಯರು ಪ್ರಸ್ತುತ ಸಮಾಜದ ಕಣ್ಣುಗಳಿದ್ದಂತೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಬಿ.ಎಸ್. ಭಾಗ್ಯರತ್ನ ಅಭಿಮತ ವ್ಯಕ್ತಪಡಿಸಿದರು.

ಭಾನುವಾರ ಭಾರತೀಯ ವೈದ್ಯಕೀಯ ಸಂಘದ ನೂತನ ಕಟ್ಟಡ (ಮೊದಲ ಮಹಡಿ) ಹಾಗೂ ವೈದ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸೌಲಭ್ಯ ಅಥವಾ ಸೇವೆ ದೊರೆಯಬೇಕು ಎಂದು ಹೇಳುತ್ತೇವೆ. ಅವರು ತಮ್ಮ ಬಳಿಗೆ ಬಂದಾಗ ಅಂತಹ ಸೇವೆ ಮಾಡಲಾಗದೆ ವಿಚಲಿತರಾಗುತ್ತಿದ್ದೇವೆ. ಇಂತಹ ಸಮಸ್ಯೆಗಳಿಂದ ದೂರವಿದ್ದು ಸಮಾಜದ ಬಗ್ಗೆ ಕಳಕಳಿ ಮೈಗೂಡಿಸಿಕೊಳ್ಳುವಂತೆ ವೈದ್ಯರಿಗೆ ಸಲಹೆ ಮಾಡಿದರು.

ಕಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಜಿ. ದಿನೇಶ, ಡಾ. ಪಿ.ಎಸ್. ಶಂಕರ, ಡಾ. ಟಿ.ಅಜಯಕುಮಾರ, ಅಂಕಣಕಾರ ರಾಮನಾಥ ಎನ್ ಮಾತನಾಡಿ, ವೈದ್ಯ ವೃತ್ತಿ ಸರ್ವಶ್ರೇಷ್ಠವಾದುದು. ಮನುಕುಲದ ಸೇವೆ ಮಾಡಲು ಸಾಕಷ್ಟು ಅವಕಾಶಗಳಿವೆ. ವೈದ್ಯರನ್ನು ದೇವರಿಗೆ ಸಮಾನ ಎಂದು ಗೌರವಿಸಲಾಗುತ್ತದೆ. ಈ ಭಾಗದ ಜನತೆ ಸಾಕಷ್ಟು ಹಿಂದುಳಿದಿದ್ದಾರೆ. ಅಂತಹ ಮುಗ್ಧ ಜನತೆಯಲ್ಲಿ ಜಾಗೃತಿ ಮೂಡಿಸುವ ಜೊತೆಗೆ ವೃತ್ತಿ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ತಾಲ್ಲೂಕು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಎಂ.ವಿ.ಜೋಷಿ ಸಭೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗುರುರಾಜ ದೇಶಪಾಂಡೆ, ಹಿರಿಯ ವೈದ್ಯರಾದ ಡಾ. ಶ್ರೀನಿವಾಸ ಕನಕಗಿರಿ, ಡಾ. ಬಸವರಾಜ ಸಜ್ಜನ, ಡಾ. ವಿಜಯಕುಮಾರ, ಡಾ. ಶರಣಗೌಡ, ಡಾ. ಎಲ್.ಎನ್. ನಡುವಿನಮನಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.