ADVERTISEMENT

`ವರತಿ ನೀರಿಗೂ ಬಂದೈತ್ರಿ ಸರತಿ...'

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 10:23 IST
Last Updated 1 ಏಪ್ರಿಲ್ 2013, 10:23 IST
ಲಿಂಗಸುಗೂರ ತಾಲ್ಲೂಕಿನ ರಾಮತ್ನಾಳ ಗ್ರಾಮಸ್ಥರು 1ಕಿ.ಮೀ ಅಂತರದ ಹಳ್ಳದಲ್ಲಿ ವರತಿ ನೀರು ತುಂಬಿಕೊಳ್ಳಲು ಸರದಿಯಲ್ಲಿ ಕಾಯ್ದು ಕುಳಿತಿರುವುದು
ಲಿಂಗಸುಗೂರ ತಾಲ್ಲೂಕಿನ ರಾಮತ್ನಾಳ ಗ್ರಾಮಸ್ಥರು 1ಕಿ.ಮೀ ಅಂತರದ ಹಳ್ಳದಲ್ಲಿ ವರತಿ ನೀರು ತುಂಬಿಕೊಳ್ಳಲು ಸರದಿಯಲ್ಲಿ ಕಾಯ್ದು ಕುಳಿತಿರುವುದು   

ಲಿಂಗಸುಗೂರ(ಮುದಗಲ್ಲ): ಸ್ವಾತಂತ್ರ್ಯ ನಂತರದ ಆರೂವರೆ ದಶಕಗಳಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಹಾಗೂ ಕ್ಷೇತ್ರಗಳನ್ನು ಪ್ರತಿನಿಧಿಸಿದ ಚುನಾಯಿತ ಪ್ರತಿನಿಧಿಗಳು ಗ್ರಾಮೀಣ ಜನತೆಗೆ ಕನಿಷ್ಟ ಮಟ್ಟದ ಸೌಲಭ್ಯ ಕಲ್ಪಿಸಿಲ್ಲ ಎಂಬುದಕ್ಕೆ ಲಿಂಗಸುಗೂರ ತಾಲ್ಲೂಕಿನ ಹೂನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮತ್ನಾಳ ಗ್ರಾಮ ನಿದರ್ಶನವಾಗಿದೆ.

ಲಿಂಗಸುಗೂರ ಮತ್ತು ಕುಷ್ಟಗಿ ತಾಲ್ಲೂಕುಗಳ ಗಡಿ ಪ್ರದೇಶದಲ್ಲಿರುವ ರಾಮತ್ನಾಳ ಗ್ರಾಮ ಅಂದಾಜು 2200 ಜನಸಂಖ್ಯೆ ಹೊಂದಿದೆ. ಈ ಗ್ರಾಮದಿಂದ ಗ್ರಾಮ ಪಂಚಾಯಿತಿಗೆ ಸಂಗನಬಸಪ್ಪ ದೇವಪ್ಪ, ಯಂಕಣ್ಣ ಶರಣಪ್ಪ ಎಂಬುವವರು ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಬನ್ನಿಗೋಳ ತಾಪಂ ಮತ್ತು ಮಾವಿನಭಾವಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ.

1952 ರಿಂದ 2008ರ ವರೆಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತಿದ್ದ ರಾಮತ್ನಾಳ ತಾಲ್ಲೂಕು ಆಡಳಿತದಿಂದ ಮಲತಾಯಿ ಧೋರಣೆಗೆ ಒಳಗಾಗಿತ್ತು. 2008 ರಿಂದ ಮೀಸಲು ಕ್ಷೇತ್ರವಾಗಿ ವಿಭಜನೆ ಆಗಿದ್ದು ಅಂದಿನಿಂದ ಇಂದಿನವರೆಗೂ ಯಾವೊಬ್ಬ ಶಾಸಕ ಅಥವಾ ಚುನಾಯಿತ ಪ್ರತಿನಿಧಿ ಶುದ್ಧ ಕುಡಿಯುವ ನೀರು ಪೂರೈಸಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ಗೋಳಿಟ್ಟರು.

ಕಿರು ನೀರು ಸರಬರಾಜು ಯೋಜನೆಯಡಿ ನೀರು ಪೂರೈಸಲಾಗುತ್ತಿದೆ. ಪೂರೈಕೆ ಆಗುತ್ತಿರುವ ನೀರು ಫ್ಲೋರೈಡ್‌ಯುಕ್ತ ಆಗಿದ್ದು ವಿಷಯುಕ್ತವಾಗಿವೆ. ಹೀಗಾಗಿ ಗ್ರಾಮದ ಪಕ್ಕದಲ್ಲಿ ಹರಿಯುವ ಹಳ್ಳದ ವರತಿ ನೀರನ್ನೆ ಬಳಸುತ್ತ ಬಂದಿದ್ದೇವೆ. ಕಳೆದ ನಾಲ್ಕಾರು ವರ್ಷಗಳಿಂದ ಮಳೆಗಾಲದ ಕೊರತೆಯಿಂದ ಹಳ್ಳದಲ್ಲಿ ನೀರಿನ ಕೊರತೆ ಕಾಣಿಸಿಕೊಂಡು ಕೊಡ ನೀರಿಗಾಗಿ ಪರದಾಡುವಂತಾಗಿದೆ ಎಂದು ಸರಸ್ವತಿ ಅಳಲು ತೋಡಿಕೊಂಡರು.

ಪ್ರಸಕ್ತ ವರ್ಷ ಹಳ್ಳದಲ್ಲಿ ಆಳೆತ್ತರ ಗುಂಡಿ ತೋಡಿದರು ಹನಿ ನೀರು ಸಿಗುತ್ತಿಲ್ಲ. ಬಸಿ ನೀರು ಬತ್ತಿ ಹೋಗಿವೆ. ಗ್ರಾಮದಿಂದ ಅಂದಾಜು 1ಕಿ.ಮೀ. ಅಂತರದಲ್ಲಿ ಹಳ್ಳದ ಗುಂಡಿಯೊಂದರಲ್ಲಿ ಸ್ವಲ್ಪ ಪ್ರಮಾಣದ ನೀರಿನ ಬಸಿ ಬರುತ್ತಿದೆ. ಆ ನೀರನ್ನೆ ನಂಬಿರುವ ಜನತೆ ಹಗಲು ರಾತ್ರಿ ಕಾದರೆ ದಿನಕ್ಕೆ ಒಂದು ಕೊಡ ನೀರು ಕುಡಿಯಲು ಸಿಗುತ್ತವೆ ಎಂದು ಚಂದ್ರಶೇಖರ, ಲಕ್ಷ್ಮಿ ನೀರಿನ ಸಮಸ್ಯೆ ಕುರಿತು ವಿವರಿಸಿದರು.

ಕಿಲೋಮೀಟರ್ ಅಂತರದ ಹಳ್ಳದ ಆಳವಾದ ವರಿತಿಯಲ್ಲಿ ನೀರು ತಂದುಕೊಳ್ಳಲು ಸರದಿ ಹಚ್ಚುವಂತಾಗಿದೆ. ಬೆಳಿಗ್ಗೆ ಸರದಿಗೆ ಹೋಗಿ ಕುಳಿತರೆ ಸಂಜೆಗೆ ಒಂದು ಕೊಡ ನೀರುತ್ತೇವೆ. ವರತಿ ನೀರಿಗೆ ಸರದಿ ಹಚ್ಚೊ ಕಾಲ ಬಂದೈತ್ರಿ ಯಪ್ಪಾ. ಇನ್ನೂ ಏನೇನು ನೋಡೋದು ಐತೇನ್ರಿ. ಸರ್ಕಾರ ಏನು ಕೊಡೊದೊ ಬ್ಯಾಡ್ರಿ ಕುಡಿಯಾಕ ನೀರು ಕೊಟ್ರ ಸಾಕಾಗ್ಯಾದ್ರಿ ಎಂದು ಶಾಂತಮ್ಮ ಕಣ್ಣಂಚಿನಲ್ಲಿ ನೀರು ತಂದು ಸಮಸ್ಯೆಯ ವಾಸ್ತವತೆ ಬಗ್ಗೆ ಗಮನ ಸೆಳೆದರು.

ನೀರಿನ ಸ್ಥಿತಿಯೆ ಹೀಗಿರಬೇಕಾದ್ರ ನಮ್ಮ ಗ್ರಾಮಕ್ಕೆ ವಿದ್ಯುತ್ ಕಣ್ಣುಮುಚ್ಚಾಲೆ. ತೆಗ್ಗುಗುಂಡಿಗಳ ಹದಗೆಟ್ಟ ರಸ್ತೆ, ಸರ್ಕಾರದ ಯಾವೊಂದು ಸೌಕರ್ಯ ಸಿಗದೆ ಹೋಗಿದ್ದರಿಂದ ಗ್ರಾಮಸ್ಥರು ಕುಷ್ಟಗಿ ತಾಲ್ಲೂಕಿನ ಮುದೆನೂರು, ಹುನಗುಂದ ತಾಲ್ಲೂಕಿನ ಇಳಕಲ್ಲ ಪಟ್ಟಣದಿಂದ ಅಗತ್ಯ ವಸ್ತುಗಳ ವ್ಯವಹಾರ ಮಾಡುತ್ತೇವೆ. ಲಿಂಗಸುಗೂರ ತಾಲ್ಲೂಕು ಕೇಂದ್ರ ಗ್ರಾಮದಿಂದ 43ಕಿ.ಮೀ. ಆಗುತ್ತಿರುವುದರಿಂದ ನಾವ್ಯಾರು ಕಚೇರಿಗೆ ತೆರಳಿ ಸಮಸ್ಯೆಗಳ ಬಗ್ಗೆ ಕೇಳುವುದಿಲ್ಲ ಎಂದು ಶಂಕರಪ್ಪ, ಸಿದ್ಧಣ್ಣ, ಮಹಾಂತೇಶ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.