ADVERTISEMENT

ಶಾಸಕರ ಕಚೇರಿ ಎದುರು ರೈತರ ಧರಣಿ

28msk128msk1

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 8:59 IST
Last Updated 29 ಜೂನ್ 2015, 8:59 IST
ನಾರಾಯಣಪುರ ಬಲದಂಡೆ ಕಾಲುವೆ 5ಎ ಉಪ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ರೈತರು ಭಾನುವಾರ ಮಸ್ಕಿಯಲ್ಲಿ ಶಾಸಕರ ಕಚೇರಿ ಎದುರು ಧರಣಿ ನಡೆಸಿದರು
ನಾರಾಯಣಪುರ ಬಲದಂಡೆ ಕಾಲುವೆ 5ಎ ಉಪ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ರೈತರು ಭಾನುವಾರ ಮಸ್ಕಿಯಲ್ಲಿ ಶಾಸಕರ ಕಚೇರಿ ಎದುರು ಧರಣಿ ನಡೆಸಿದರು   

ಮಸ್ಕಿ: ನಾರಾಯಣಪುರ ಬಲದಂಡೆ ಕಾಲುವೆ 5ಎ ಉಪ ಕಾಲುವೆ ನಿರ್ಮಾಣಕ್ಕೆ ಒತ್ತಾಯಿಸಿ ಭಾನುವಾರ ಕರ್ನಾಟಕ ನೀರಾವರಿ ವೇದಿಕೆ ನೇತೃತ್ವದಲ್ಲಿ ನೂರಾರು ರೈತರು ಇಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಶಾಸಕ ಪ್ರತಾಪಗೌಡ ಪಾಟೀಲ ಕಚೇರಿ ಎದುರು ಧರಣಿ ನಡೆಸಿದರು.

ಪ್ರವಾಸಿ ಮಂದಿರದಿಂದ ಆರಂಭಗೊಂಡ ರೈತರ ಮೆರವಣಿಗೆ ಅಶೋಕ ವೃತ್ತ, ಮುಖ್ಯ ಬಜಾರ ಮೂಲಕ ಶಾಸಕರ ಕಚೇರಿಗೆ ಬಂತು. ಕೆಲ ಕಾಲ ಶಾಸಕ ಕಚೇರಿ ಎದುರು ಧರಣಿ ನಡೆಸಲಾಯಿತು. ರೈತರ ಸಭೆ ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಲಿಂಗರಾಜ ಚುಕ್ಕನಟ್ಟಿ, 5ಎ ಉಪ ಕಾಲುವೆ ನಿರ್ಮಾಣದಿಂದ ಈ ಭಾಗದ 1.16 ಲಕ್ಷ ಎಕರೆ ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ.ಕೃಷ್ಣಾ ನ್ಯಾಯಾಧೀ ಕರಣ ಎ ಮತ್ತು ‘ಬಿ’ ‘ಸ್ಕೀಂ’ ಪ್ರಕಾರ ಬಲದಂಡೆ ಕಾಲುವೆಗೆ ಹಂಚಿಕೆ ಮಾಡಿದ ನಂತರ ಉಳಿದ 9.09  ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಈ ಯೋಜನೆ ಯಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು.

ಯೋಜನೆ ಅನುಷ್ಠಾನಗೊಂಡರೆ ರಾಯಚೂರು ಜಿಲ್ಲೆ107 ಗ್ರಾಮಗಳು ನೀರಾವರಿ ಸೌಲಭ್ಯ ಹೊಂದಲಿವೆ. ಇದರಲ್ಲಿ ಸಿಂಧನೂರು, ಲಿಂಗಸುಗೂರು ತಾಲ್ಲೂಕಿನ 40 ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗಲಿದೆ. ಸರ್ಕಾರ ಕೂಡಲೇ 5ಎ ಉಪ ಕಾಲುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ತಿಮ್ಮನಗೌಡ ಚಿಲ್ಕಾರಾಗಿ ಇತರರು ಮಾತನಾಡಿದರು.

ಶಾಸಕರ ಭರವಸೆ: ನಾರಾಯಣಪುರ ಬಲದಂಡೆ ಕಾಲುವೆ ಮೂಲಕ 5ಎ ಉಪ ಕಾಲುವೆ ನಿರ್ಮಿಸಿ ಮಸ್ಕಿ ಕ್ಷೇತ್ರದ ಸುಮಾರು ಹಳ್ಳಿಗಳಿಗೆ ನೀರು ಕೊಡುವ ಯೋಜನೆಯ ಅನುಷ್ಠಾನಕ್ಕೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾ ಗಿದೆ ಎಂದು ಶಾಸಕ ಪ್ರತಾಪಗೌಡ ಪಾಟೀಲ ಧರಣಿ ನಿರತ ರೈತರಿಗೆ ಭರವಸೆ ನೀಡಿದರು.

ಯೋಜನೆ ಅನುಷ್ಠಾನಕ್ಕೆ ಬದ್ಧವಾ ಗಿದ್ದು, 29 ರಿಂದ ಬೆಳಗಾವಿ ಯಲ್ಲಿ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗುತ್ತದೆ. ಯೋಜನೆ ಸರ್ವೇ ಮುಂತಾದ ವಿಷಯಗಳ ಬಗ್ಗೆ ಜಲಸಂಪನ್ಮೂಲ ಸಚಿವರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಈ ಭಾಗದ ರೈತರ ಬೇಡಿಕೆ ನ್ಯಾಯಯುತವಾಗಿದೆ. ಶಾಂತಿಯತ ಹೋರಾಟ ನಡೆಸಬೇಕು ಎಂದು ರೈತರಿಗೆ ಮನವಿ ಮಾಡಿದರು.
ನೀರಾವರಿ ವೇದಿಕೆ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವ ರಾಜಪ್ಪಗೌಡ ಹರ್ವಾಪುರ, ಪ್ರಧಾನ ಕಾರ್ಯದರ್ಶಿ ನಾಗರೆಡ್ಡೆಪ್ಪ ದೇವರಮನಿ, ಪರುಶರಾಮ ನಾಯಕ ಹಾಗೂ ರೈತರು ಪಾಲ್ಗೊಂಡಿದ್ದರು.

‘1 ಟಿಎಂಸಿ ನೀರಿನಿಂದ 5 ಸಾವಿರ ಹೆಕ್ಟರ್‌ನಿಂದ 10 ಸಾವಿರ ಹೆಕ್ಟರ್ ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು’
ಲಿಂಗರಾಜ ಚುಕ್ಕನಟ್ಟಿ,
ನೀರಾವರಿ ವೇದಿಕೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.