ದೇವದುರ್ಗ: ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜೊರಾಗಿ ನಡೆದಿದ್ದು, ವಿವಿಧ ಯೋಜನೆಗಳಲ್ಲಿ ವರ್ಗಾವಣೆ ಬಯಸುವ ನೂರಾರು ಶಿಕ್ಷಕರು ಗುರುವಾರ ರಾತ್ರಿ 10 ಗಂಟೆವರೆಗೂ ಅರ್ಜಿ ನೀಡಲು ತಾಸುಗಟ್ಟಲೇ ಕಾದು ಅರ್ಜಿ ಸಲ್ಲಿಸಿದರು.
ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಖ್ಯೆ 1500ಕ್ಕೂ ಹೆಚ್ಚು ಇದೆ. ಇದರಲ್ಲಿ ಪ್ರೌಢ ಶಾಲಾ ಶಿಕ್ಷಕರ ಸಂಖ್ಯೆ ಸೇರಿದರೆ ಸುಮಾರು ಎರಡು ಸಾವಿರ ಸಂಖ್ಯೆ ದಾಟುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನೇಮಕಗೊಂಡು ತಾಲ್ಲೂಕಿಗೆ ಬಂದವರ ಪೈಕಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಯ ಶಿಕ್ಷಕರನ್ನು ಕಾಣಬಹುದಾಗಿದೆ.
ಇದರಲ್ಲಿ ಹೆಚ್ಚಾಗಿ ಶಿವಮೊಗ್ಗ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ದಾವಣಗೆರೆ, ಉಡುಪಿ, ಚಿಕ್ಕಮಂಗಳೂರು, ಕೋಲಾರ, ದಕ್ಷಿಣ ಕನ್ನಡ, ಬೆಂಗಳೂರು ಜಿಲ್ಲೆಯ ಶಿಕ್ಷಕರು ಹೆಚ್ಚಾಗಿ ಕಂಡು ಬಂದಿದ್ದು, ಶಿಕ್ಷಣ ಇಲಾಖೆಯ ನಿಯಮಾವಳಿ ಪ್ರಕಾರ ನೇಮಕಗೊಂಡ ಸ್ಥಳದಲ್ಲಿ ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರು ಕನಿಷ್ಠ ಮೂರು ವರ್ಷ ಸೇವೆ ಪೂರ್ಣಗೊಳಿಸಿರಬೇಕು.
ಕೋರಿಕೆ ವರ್ಗಾವಣೆಗೆ ಬಯಸುವ ಶಿಕ್ಷಕರು ಒಂದು ಘಟಕದಿಂದ ಇನ್ನೂಂದು ಘಟಕಕ್ಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಐದು ವರ್ಷದವರೆಗೂ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು (ನೇಮಕ ಘಟಕ) ಪತಿ,ಪತ್ನಿ (ಕಪಲ್) ಪ್ರಕರಣ ಸೇರಿದಂತೆ ವೈದ್ಯಕೀಯ, ಅಂಗವಿಕಲತೆ ಸೇರಿದಂತೆ ಇತರ ಯೋಜನೆಗಳ ಅಡಿಯಲ್ಲಿ ವರ್ಗಾವಣೆ ಬಹಿಸುವ ಶಿಕ್ಷಕರು ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಬೇಕು ಎಂಬ ನಿಯಮ ಇದೆ.
ಪ್ರತಿ ವರ್ಷ ನಡೆಯುವ ವರ್ಗಾವಣೆ ಪ್ರಕ್ರಿಯೆ ಈ ವರ್ಷವು ನಡೆದಿದ್ದು, ಮಾರ್ಚ್ 21ರಿಂದ ಏಪ್ರಿಲ್ 7ರವರೆಗೂ ವರ್ಗಾವಣೆ ಬಯಸುವ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಕೊರತೆ: ಕಳೆದ ವರ್ಷ ನಡೆದ ವರ್ಗಾವಣೆಯಲ್ಲಿ ತಾಲ್ಲೂಕಿನಿಂದ ಸುಮಾರು 100ಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆಯಾಗಿ ಹೋದ ನಂತರ ತಾಲ್ಲೂಕಿನ ಪ್ರತಿಯೊಂದು ಗ್ರಾಮದ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆ ಕಂಡು ಬಂದಿದೆ.
ವರ್ಷ ಪೂರ್ತಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳಿಗೆ ಸಿಗಬೇಕಾಗಿದ್ದ ಗುಣಮಟ್ಟದ ಶಿಕ್ಷಣ ಸಿಗದೆ ವಂಚಿತರಾಗಿದ್ದರೂ ಇಲಾಖೆ ಮಾತ್ರ ಮೌನ ವಹಿಸಿದೆ.
ಕಳೆದ ವರ್ಷ ವರ್ಗಾವಣೆ ಸಂದರ್ಭದಲ್ಲಿ ಸಾಕಷ್ಟು ಲೋಪದೋಷ, ತಪ್ಪು ಮಾಹಿತಿ, ಇಲಾಖೆಯ ನಿಯಮಕ್ಕೆ ವಿರೋಧವಾಗಿ ವರ್ಗಾವಣೆ ಆರೋಪ ಕೇಳಿ ಬಂದ ನಂತರ ರಾಜ್ಯ ವ್ಯಾಪ್ತಿ ಈ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಗಿ ಕೊನೆಗೆ ವಿಭಾಗವಾರು ವರ್ಗಾವಣೆ ಬಗ್ಗೆ ಇಲಾಖೆಯ ತನಿಖೆ ನಡೆದ ನಂತರ ಸಾಕಷ್ಟು ಲೋಪ ಎಸುಗಿರುವುದು ಪ್ರಾಥಮಿಕ ಹಂತದಲ್ಲಿ ಸಾಬೀತಾದ ನಂತರ ಎಷ್ಟೊ ಜನ ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಿರುವುದು ಮತ್ತು ಇನ್ನೂಂದು ಕಡೆ ಅಧಿಕಾರಿಗಳಿಂದಲೇ ನಡೆದ ಲೋಪಕ್ಕೆ ಸರ್ಕಾರ ಛೀಮಾರಿ ಹಾಕಿರುವುದು ಸಹ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಉಲ್ಲಂಘನೆ: ವರ್ಗಾವಣೆ ಪ್ರಕ್ರಿಯೆ ಒಟ್ಟಾರೆ ಶೇ 1ನ್ನು ಮೀರಬಾರದು ಎಂಬ ನಿಯಮ ಇದ್ದರೂ ಕಳೆದ ವರ್ಷ ಅಧಿಕಾರಿಗಳು ನಿಯಮ ಉಲ್ಲಂಘಿಸಿ ವರ್ಗಾವಣೆ ಮಾಡಿದ್ದರು. ತಾಲ್ಲೂಕಿನಿಂದ ಸುಮಾರು 24 ಶಿಕ್ಷಕರು (ನಿಯಮ ಮೀರಿ) ವರ್ಗಾವಣೆಯಾಗಿ ಹೋದ ನಂತರ ವಾಪಸು ಕರೆಸಿಕೊಳ್ಳಲು ಇಲಾಖೆ ಮಾಡಿದ ಪ್ರಯತ್ನ ಕೊನೆಗೂ ಫಲಕಾರಿಯಾಗಿಲ್ಲ.
ಈ ಶಿಕ್ಷಕರ ಜಾಗಕ್ಕೆ ಇಲಾಖೆ ಹೊಸದಾಗಿ ನೇಮಕ ಮಾಡದೆ ಇರುವುದರಿಂದ ನೂರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ವರ್ಷ ನೂರಾರು ಶಿಕ್ಷಕರು ಮತ್ತೆ ವರ್ಗಾವಣೆಯಾಗಿ ಹೋಗುವುದರಿಂದ ಇನ್ನೆರಡು ತಿಂಗಳಲ್ಲಿ ಆರಂಭವಾಗುವ ಶಾಲೆಗಳ ಮಕ್ಕಳಿಗೆ ಪಾಠ ಹೇಳುವರು ಯಾರು ಎಂಬ ಪ್ರಶ್ನೆ ಈಗ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.