ADVERTISEMENT

ಶಿಕ್ಷಣಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 10:05 IST
Last Updated 14 ಏಪ್ರಿಲ್ 2012, 10:05 IST

ಲಿಂಗಸುಗೂರ(ಮುದಗಲ್ಲ): ಸ್ವಾತಂತ್ರ್ಯ ಪೂರ್ವದಿಂದಲು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿಗೆ ವೀರಶೈವ ಧರ್ಮದ ಮಠ ಮಾನ್ಯಗಳು ಸಾಕಷ್ಟು ಕೊಡುಗೆ ನೀಡಿವೆ. ಸನಾತನ ಧರ್ಮದ ತತ್ವಾದರ್ಶಗಳ ನೆಲೆಗಟ್ಟಿನಲ್ಲಿ ವೀರಶೈವ ಮಠಗಳು ಇಂದಿಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮಹಾನ್ ಕೊಡುಗೆ ನೀಡುತ್ತಿವೆ ಎಂದು ಹಾಲಕೆರೆ ಅನ್ನದಾನ ಮಹಾಸ್ವಾಮಿಗಳು ಪ್ರಶಂಸಿಸಿದರು.

ಈಚೆಗೆ ತಾಲ್ಲೂಕಿನ ಕನಸಾವಿ ಗ್ರಾಮದಲ್ಲಿ ಲಿಂಗೈಕ್ಯ ಹಾಲಕೇರಿ ಶ್ರೀಗಳ ಜಾತ್ರಾಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದ ಸಾನಿಧ್ಯ ವಹಿಸಿದ್ದ ಅವರು, ಶಿಕ್ಷಣದ ಜೊತೆಗೆ ಸರ್ವ ಜಾತಿ, ಜನಾಂಗದವರ ಪರಸ್ಪರ ಪ್ರೀತಿ ವಿಶ್ವಾಸದಿಂದ ಸುಭದ್ರ ಸಮಾಜದ ನಿರ್ಮಾಣಕ್ಕೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಂಘಟನಾತ್ಮಕ ಕೆಲಸ ಮಾಡುತ್ತಿವೆ ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಮರೆಗೌಡ ಮಟ್ಟೂರು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ ಮಾತನಾಡಿದರು. 18 ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯಮಾನ್ಯರನ್ನು ಗೌರವಿಸಿ ಸತ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಹಾಲಕೆರಿ ಅನ್ನದಾನ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಕೂಡ ನಡೆಸಿಕೊಡಲಾಯಿತು.

ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ, ನಿರ್ದೇಶಕ ಚೆನ್ನವೀರಪ್ಪ ಪಾಗದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ. ಮುಖಂಡರಾದ ಟಿ.ಆರ್. ನಾಯಕ, ವಿರುಪಕ್ಷಪ್ಪ ಹಂದ್ರಾಳ, ಗುರುಬಸಪ್ಪ ಸಜ್ಜನ, ಸುರೇಶಗೌಡ ಆದಾಪುರ, ಇಟಗಿ ದೇಶಾಯಿ, ವೆಂಕನಗೌಡ ಆದಾಪುರ, ಶರಣಪ್ಪ ಕೋಮಲಾಪುರ, ಸಾಧಿಕ್‌ಅಲಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.