ADVERTISEMENT

ಸಂಸತ್ ಚಲೋ ಚಳವಳಿಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:12 IST
Last Updated 13 ಡಿಸೆಂಬರ್ 2013, 7:12 IST

ರಾಯಚೂರು: ಬೆಲೆ ಏರಿಕೆ ನಿಯಂತ್ರಣ­ಗೊ­ಳಿಸಬೇಕು, ಜನರನ್ನು ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ದಾರರು ಎಂದು ವಿಂಗಡಣೆ ಮಾಡುವುದನ್ನು ಕೈಬಿಟ್ಟು ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುದು ಸೇರಿ­ದಂತೆ ಹಲವು ಬೇಡಿಕೆ ಈಡೇರಿಕೆ­ಗಾಗಿ ಕೇಂದ್ರ ಕಾರ್ಮಿಕ ಮತ್ತು ನೌಕರರ ಸಂಘಟನೆ ನಡೆಸುತ್ತಿರುವ ಚಳವಳಿ ಬೆಂಬಲಿಸಿ ಗುರುವಾರ ಸಿಐಟಿಯು ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿ­ಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. ವಿದೇಶಿ ನೇರ ಬಂಡವಾಳ ರದ್ದುಪಡಿ­ಸಬೇಕು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಉಲ್ಲಂಘನೆಗೆ ರಿಯಾಯ್ತಿ ನೀಡದೇ ಬಿಗಿಯಾದ ದಂಡನೆ ಕ್ರಮ ಕೈಗೊಳ್ಳ­ಬೇಕು ಎಂದು ಒತ್ತಾಯಿಸಿದರು.

ಸಾರ್ವತ್ರಿಕವಾಗಿ ಎಲ್ಲ ಕಾರ್ಮಿಕ­ರಿಗೂ ಸಾಮಾಜಿಕ ಭದ್ರತೆ ಒದಗಿಸಲು ರಾಷ್ಟ್ರೀಯ ಸಾಮಾಜಿಕ ಸುರಕ್ಷತಾ ನಿಧಿ ಸ್ಥಾಪಿಸಿ ಅದಕ್ಕೆ ಅಗತ್ಯ ಹಣಕಾಸು ಸಂಪನ್ಮೂಲ ಒದಗಿಸಬೇಕು, ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳ ಮತ್ತು ಸಂಸ್ಥೆಗಳ ಷೇರು ಮಾರಾಟ ಸ್ಥಗಿತಗೊಳಿಸಬೇಕು, ಬ್ಯಾಂಕ್‌ ನಿಯಂತ್ರಣ ಹಾಗೂ ವಿಮಾ ತಿದ್ದುಪಡಿ ಮಸೂದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಕಾಯಂ ಹಾಗೂ ನಿರಂತರ ಸ್ವರೂಪದ ಕೆಲಸಗಳನ್ನು ಗುತ್ತಿಗೆ ನೀಡಬಾರದು, ಕೈಗಾರಿಕೆ ಮತ್ತು ಸಂಸ್ಥೆಯಲ್ಲಿ ಕಾಯಂ ಕಾರ್ಮಿಕರಿಗೆ ನೀಡಲಾಗುವ ಸಮಾನ ವೇತನ ಮತ್ತು ಸೌಕರ್ಯಗಳ ದರದಲ್ಲಿಯೇ ಗುತ್ತಿಗೆ ಕಾರ್ಮಿಕರಿಗೆ ದೊರಕಲು ಕ್ರಮ ತೆಗೆದು­ಕೊಳ್ಳ­ಬೇಕು ಎಂದು ಒತ್ತಾಯಿಸಿದರು.

ಬೋನಸ್‌, ಭವಿಷ್ಯನಿಧಿ ಪಾವತಿಗೆ ಇರುವ ಎಲ್ಲ ಮಿತಿ ಹಾಗೂ ಅರ್ಹತೆಗಳನ್ನು ತೆಗೆದು ಹಾಕಿ ಗ್ರಾಚುಯಿಟಿ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಸಬೇಕು ಎಂದು ಸಿಐಟಿಯು ಸಂಘಟನೆಯ ಜಿಲ್ಲಾಘಟಕ ಅಧ್ಯಕ್ಷೆ ಎಚ್‌. ಪದ್ಮಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ ಜಿಲ್ಲಾಧಿ­ಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

‌ಸಂಘಟನೆಯ ಪದಾಧಿಕಾರಿ­ಗಳಾದ ಪಿ.ಗಿರಿಯಪ್ಪ, ಜೆ,ಎಂ ಚೆನ್ನಬಸಯ್ಯ, ಎಂ.ಶರಣೇಗೌಡ, ಡಿ.ಎಸ್‌ ಶರಣಬಸವ, ಯಂಕಪ್ಪ, ಸೂಗಪ್ಪಗೌಡ, ವೈ,ಈರಣ್ಣ, ವರಲಕ್ಷ್ಮೀ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.