ADVERTISEMENT

ಸದಾಶಿವ ಆಯೋಗ ವರದಿ ಅವೈಜ್ಞಾನಿಕ: ಪುನರ್ ಸಮೀಕ್ಷೆಗೆ ಒತ್ತಾಯಿಸಿ 16ರಂದು ಬೃಹತ್ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 9:25 IST
Last Updated 14 ಆಗಸ್ಟ್ 2012, 9:25 IST

ಸಿಂಧನೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿರುವುದರಿಂದ ಪುನರ್ ಸಮೀಕ್ಷೆ ಮಾಡುವಂತೆ ಒತ್ತಾಯಿಸಿ ಭೋವಿ (ವಡ್ಡರ) ಸಂಘ, ಬಂಜಾರ (ಲಮಾಣಿ) ಮತ್ತು ಕೊರಮ ಸಂಘಗಳು ಜಂಟಿಯಾಗಿ ಆ.16ರಂದು ಬೃಹತ್ ಮೆರವಣಿಗೆ ನಡೆಸಲು ನಿರ್ಧರಿಸಿವೆ.

ಸೋಮವಾರ ಬಂಜಾರ ಸಂಘದ ಅಧ್ಯಕ್ಷ ರಾಮಪ್ಪ ನಾಯಕ, ಕೊರವರ ಸಂಘದ ಅಧ್ಯಕ್ಷ ಕೆ.ಎಸ್.ಮರಿಯಪ್ಪ, ವಡ್ಡರ ಸಂಘದ ಅಧ್ಯಕ್ಷ ಗೋವಿಂದರಾಜ ಸೋಮಲಾಪುರ ಜಂಟಿ ಸುದ್ದಿಗೋಷ್ಠಿ ನಡೆಸಿ ಪರಿಶಿಷ್ಟ ಜಾತಿಯಲ್ಲಿ ಸುಮಾರು 101 ಜಾತಿಗಳಿದ್ದು ಅದರಲ್ಲಿ ಕೇವಲ ಎರಡೇ ಜಾತಿಗಳಿಗೆ ಮಾತ್ರ ಶೇ.11ರಷ್ಟು ಒಳಮೀಸಲಾತಿ ಕೊಡಬೇಕೆನ್ನುವುದು ಸ್ವಾರ್ಥತೆಯಿಂದ ಕೂಡಿದೆ. ಇನ್ನುಳಿದ 9 ಜಾತಿಗಳಿಗೆ ಕೇವಲ ಶೇ.4ರಷ್ಟು ಒಳಮೀಸಲಾತಿಯನ್ನು ಕಲ್ಪಿಸಿರುವ ಧೋರಣೆ ಸರಿಯಾದುದಲ್ಲ. ಯಾರೊ ಒಬ್ಬಿಬ್ಬ ರಾಜಕಾರಣಿಗಳು ಶ್ರೀಮಂತರಿದ್ದಾರೆನ್ನುವ ಕಾರಣಕ್ಕೆ ಭೋವಿ, ಲಮಾಣಿ, ಕೊರವ ಮತ್ತಿತರ ಜಾತಿಗಳಿಗೆ ಮೀಸಲಾತಿಯನ್ನು ಕಡಿತಗೊಳಿಸುವುದು ಪರಿಶಿಷ್ಟ ಜಾತಿ ವಿರೋಧಿ ಧೋರಣೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪ ಗೊರೇಬಾಳ ಕೊರಮ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ಕೆ.ಶಿವರಾಜ ಮತ್ತು ಬಂಜಾರ ಸಮಾಜದ ಬಸವರಾಜ ರಾಠೋಡ ಅಸಮಾಧಾನ ವ್ಯಕ್ತಪಡಿಸಿದರು.

ಕೊರವರು ಆದಿ ಕಾಲದಿಂದ ಊರೂರು ತಿರುಗುತ್ತಾ ಮಾನವ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಲಂಬಾಣಿ ಜನಾಂಗವು ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದರೂ ನಾಗರಿಕ ಸೌಲಭ್ಯದಿಂದ ದೂರ ಉಳಿದಿದೆ. ವಡ್ಡರು ಸಹ ಸಾವಿರಾರು ಹಳ್ಳಿಗಳಲ್ಲಿ ತುಂಡು ಭೂಮಿ ಇಲ್ಲದೆ ಬಂಡೆ ಸೀಳಿ ಬದುಕು ನೂಕುತ್ತಿದ್ದಾರೆ. ಇಂತಹ ಹೀನಾಯ ಸ್ಥಿತಿಯಲ್ಲಿ ಜೀವಿಸುವವರನ್ನು ಮುಂದುವರೆದವರೆಂದು ಪರಿಗಣಿಸುವುದು ಸರಿಯಲ್ಲ. ರಾಜ್ಯದಲ್ಲಿ 45ಲಕ್ಷ ಭೋವಿ ಜನ, 20ಲಕ್ಷ ಬಂಜಾರ ಜನ, 35ಲಕ್ಷ ಕೊರವರ ಜನಸಂಖ್ಯೆಯಿದೆ. ಇನ್ನುಳಿದ ಪರಿಶಿಷ್ಟ ಜಾತಿಗಳು ಸೇರಿ ಕೇವಲ ಶೇ.4ರಷ್ಟು ಮೀಸಲಾತಿ ನೀಡಬೇಕೆನ್ನುವುದು ಯಾವ ನ್ಯಾಯವೆಂದು ಡಿ.ಕೆ.ಶಿವರಾಜ ಪ್ರಶ್ನಿಸಿದರು. ಆ.16ರಂದು ನಡೆಯುವ ಚಳವಳಿಗೆ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚ್ಚರಿಸಿದರು.

ADVERTISEMENT

ಕೃಷ್ಣ ಚವ್ಹಾಣ, ರವಿ ರಾಠೋಡ, ಸಿದ್ದರಾಮ ರಾಠೋಡ, ಸೋಮನಾಥ ಚವ್ಹಾಣ, ಬಾಲಪ್ಪ ಮನ್ನಾಪುರ, ನಗರಸಭೆ ಸದಸ್ಯ ಸುರೇಶ ಜಾದವ್, ಮರಿಯಪ್ಪ ತುರಡಗಿ, ವೀರೇಶ ಸಿದ್ರಾಂಪುರ, ವೀರೇಶ ಭೋವಿ, ಹನುಮಂತ ಹಂಚಿನಾಳ ಕ್ಯಾಂಪ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.